ಬರ ಪೀಡಿತ ಪ್ರದೇಶಗಳ ನೈಜ ವರದಿ ಸಲ್ಲಿಸಲು ಸೂಚನೆ

0
25

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಸಾರ್ವಜನಿಕರು ಇತರೆ ಇಲಾಖೆಗಳಿಗಿಂತ ಹೆಚ್ಚಾಗಿ ಕಂದಾಯ ಇಲಾಖೆಯೊಂದಿಗೆ ಸಂಪರ್ಕ ಹೊಂದಿರುವುದರಿಂದ ಅಧಿಕಾರಿಗಳು ಜವಾಬ್ದಾರಿಯುತವಾಗಿ ಚುರುಕಿನಿಂದ ಕೆಲಸ ಮಾಡಿ ಕಡತಗಳನ್ನು ವಿಲೇವಾರಿ ಮಾಡಬೇಕು. ಬರ ಪೀಡಿತ ಪ್ರದೇಶಗಳ ನೈಜ ವರದಿಯನ್ನು ಕಂದಾಯ ಹಾಗೂ ಕೃಷಿ ಇಲಾಖೆ ಜಿಲ್ಲಾಡಳಿತಕ್ಕೆ ಕೂಡಲೇ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಜರುಗಿದ ತಾಲೂಕು ಮಟ್ಟದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು. ಪುರಸಭೆ ವ್ಯಾಪ್ತಿಯಲ್ಲಿ ಆಶ್ರಯ ಮನೆಗಾಗಿಯೇ ಹೆಚ್ಚಾಗಿ ಜನತೆ ಮನವಿ ಸಲ್ಲಿಸುತ್ತಿದ್ದು, ಹೌಸಿಂಗ್ ಫಾರ್ ಆಲ್ ಸೇರಿ ಸಾಕಷ್ಟು ಆಶ್ರಯ ಯೋಜನೆಗಳಿದ್ದು, ಅವುಗಳ ಅಡಿಯಲ್ಲಿ ನಿರಾಶ್ರೀತರಿಗೆ ಮನೆ ಒದಗಿಸುವಂತೆ ಪುರಸಭೆ ಕಾರ್ಯನಿರ್ವಹಿಸಬೇಕು. ಸರ್ಕಾರದ ಅಡಿ 33 ಇಲಾಖೆಗಳಿವೆ. ಆದರೆ, ಆ ಎಲ್ಲ ಇಲಾಖೆಗಳಿಗಿಂತ ಹೆಚ್ಚಾಗಿ ಕಂದಾಯ ಇಲಾಖೆಯನ್ನು ಸಾರ್ವಜನಿಕರು ನೆಚ್ಚಿಕೊಂಡಿದ್ದಾರೆ. ಶೇ. 70 ರಷ್ಟು ಕಾರ್ಯಗಳು ಕಂದಾಯ ಇಲಾಖೆಗೆ ಸಂಬಂಧಿಸಿದವೇ ಆಗಿದೆ. ಆದ್ದರಿಂದ ಕಂದಾಯ ಇಲಾಖೆ ಅಧಿಕಾರಿಗಳ ಮೇಲೆ ಜವಾಬ್ದಾರಿ ಹೆಚ್ಚಾಗಿರುತ್ತದೆ. ಅಧಿಕಾರಿಗಳು ತಮ್ಮ ಬಳಿ ಇರುವ ಕಡತಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಿ ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು ಎಂದರು.
ಗಜೇಂದ್ರಗಡ ಭಾಗದಲ್ಲಿ ನೀರಿಲ್ಲದೆ ಕೆರೆಗಳು ಒಣಗಿದ್ದು, ನೀರಿನ ಸಮಸ್ಯೆಯಾಗದಂತೆ ಪುರಸಭೆ ಹಾಗೂ ಗ್ರಾ.ಪಂಗಳು ಮುಂಜಾಗೃತ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಟಾಸ್ಕ್ ಪೋರ್ಸ್ ಗಮನಕ್ಕೆ ಬರದೆ, ಟ್ಯಾಂಕರ್ ಮೂಲಕ ನೀರು ಒದಗಿಸುವಂತಿಲ್ಲ. ಅದೊಂದು ಲಾಭಿ ದಂಧೆಯಾಗಿದೆ. ಇರುವ ನೀರಿನ ಮೂಲಗಳನ್ನು ಸದ್ಭಳಿಕೆ ಮಾಡಿಕೊಳ್ಳಬೇಕು. ಕೊನೆಗೆ ಟ್ಯಾಂಕರ್ ನೀರಿನತ್ತ ಗಮನ ಹರಿಸಬೇಕು ಎಂದರು. ಸಭೆಯಲ್ಲಿ ಸಾರ್ವಜನಿಕರಿಗೆ ಸಂಬಂಧಿಸಿದ ಕುಂದುಕೊರತೆಗಳ ಒಟ್ಟು 43 ಅರ್ಜಿಗಳನ್ನು ಸ್ವೀಕರಿಸಲಾಯಿತು. ಕಂದಾಯ, ಪುರಸಭೆ, ಪಂಚಾಯತ್, ಹೆಸ್ಕಾಂ, ಪಶುಸಂಗೋಪನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅಹವಾಲುಗಳು ಸಲ್ಲಿಕೆಯಾದವು. ಇದೇ ವೇಳೆ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ತಹಸೀಲ್ದಾರ್ ಶ್ರೀಶೈಲ್ ತಳವಾರ, ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ವಿ.ಚಳಗೇರಿ, ಸಿಪಿಐ ಕೆ.ಸಿ ಪ್ರಕಾಶ, ತಾಲೂಕ ವೈದ್ಯಾಧಿಕಾರಿ ಡಾ. ಎಂ.ಬಿ ಪಾಟೀಲ, ಉಪನೋಂದಣಾಧಿಕಾರಿ ಗಣೇಶ ದಾಸ, ಪಶು ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಬಿ ಹುಲಗ್ಗಣ್ಣವರ, ಸಮಾಜ ಕಲ್ಯಾಣ ಇಲಾಖೆಯ ಎಸ್.ವಿ ಕುಲಕರ್ಣೀ, ಅಬಕಾರಿ ನಿರೀಕ್ಷಕ ಸೋಮಪ್ಪ ನಾಯಕ, ಹೆಸ್ಕಾಂ ಅಧಿಕಾರಿ ವಿರೇಶ ರಾಜೂರ, ತೋಟಗಾರಿಕಾ ಇಲಾಖೆಯ ಎಂ.ಎಂ ತಾಂಬೋಟಿ ಇದ್ದರು.

loading...