ದೇಶದ ಅಭಿವೃದ್ಧಿಗೆ ಶಿಕ್ಷಣ ಅವಶ್ಯ: ಶಾಸಕ ಬಂಡಿ

0
18

ಕನ್ನಡಮ್ಮ ಸುದ್ದಿ-ನರೇಗಲ್ಲ: ದೇಶ ಅಭಿವೃದ್ಧಿ ಹೊಂದಲು ಪ್ರತಿಯೊಬ್ಬರು ಸಾಕ್ಷರರಾಗಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕಿದೆ ಎಂದು ರೋಣ ಶಾಸಕ ಕಳಕಪ್ಪ ಬಂಡಿ ಹೇಳಿದರು.
ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ 2018-19ನೇ ಶೈಕ್ಷಣಿಕ ವರ್ಷದ ಸಾಂಸ್ಕøತಿಕ, ಕ್ರೀಡೆ, ಎನ್.ಎಸ್.ಎಸ್ ಹಾಗೂ ವಿವಿಧ ಘಟಕಗಳ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಕಾಲೇಜುಗಳು ಬಡ ವಿದ್ಯಾರ್ಥಿಗಳ ಅಕ್ಷಯ ಪಾತ್ರೆಗಳಾಗಬೇಕು. ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಶ್ರೀಮಂತಗೊಳಿಸುವ ಮೂಲಕ ವಿದ್ಯಾಲಯದ ಶ್ರೀಮಂತಿಕೆ ಹೆಚ್ಚಿಸಬೇಕು. ಸರ್ಕಾರಿ ಕಾಲೇಜುಗಳಲ್ಲಿ ಹೆಚ್ಚಾಗಿ ಬಡ ಹಾಗೂ ಗ್ರಾಮೀಣ ವಿದ್ಯಾಥಿಗಳು ವ್ಯಾಸಂಗ ಮಾಡುತ್ತಿದ್ದು ಕಾಲೇಜಗಳ ಮೂಲಭೂತ ಸೌಲಭ್ಯ ಹಾಗೂ ಉಪನ್ಯಾಸಕರ ಕೊರತೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪೂರೈಸುವ ಮೂಲಕ ಶ್ರೀಮಂತಗೊಳಿಸಬೇಕು ಅಂದಾಗ ಮಾತ್ರ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ, ಬದುಕು ಶ್ರೀಮಂತಗೊಳ್ಳಲು ಸಾಧ್ಯ ಎಂದರು.
ಗದಗ ಕೆ.ವಿ.ಎಸ್.ಆರ್ ಮಹಾವಿದ್ಯಾಲಯದ ಪ್ರಾಚಾರ್ಯ ಅನಿಲ್ ವೈದ್ಯ ಮಾತನಾಡಿ, ವಿದ್ಯಾರ್ಥಿಗಳು ತಮ್ಮದೇ ಗುರುತನ್ನು ಜೀವನದಲ್ಲಿ ಸಂಪಾದಿಸಿಕೊಳ್ಳಲು ಶ್ರಮ, ನಿರಂತರ ಪ್ರಯತ್ನಗಳಿಂದ ಗಟ್ಟಿಯಾಗಿ ಬೆಳೆಯಬೇಕು ಇದಕ್ಕೆ ಆತ್ಮಸ್ಥೈರ್ಯ ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನು ಯಶಸ್ವಿಗೊಳಿಸಿಕೊಳ್ಳುವುದು ಇಂದಿನ ಅಗತ್ಯ. ಜೀವನದ ಮಹತ್ವದ ಘಟಕ್ಕೆ ಹೆಜ್ಜೆ ಇಟ್ಟ ತಾವುಗಳು ಕ್ಯಾಂಪಸ್‍ನಲ್ಲಿರುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ತಂದೆ ತಾಯಿಯರಿಗೆ ಒಳ್ಳೆಯ ಮಕ್ಕಳಾಗಿ, ಸಮಾಜಕ್ಕೆ ಸತ್ಪ್ರಜೆಗಳಾಗಿ ಹೊರಬನ್ನಿ, ತಮ್ಮ ವ್ಯಕ್ತಿತ್ವವನ್ನು ತಾವೇ ರೂಪಿಸಿಕೊಳ್ಳಬೇಕು ಎಂದರು. ಬೇರೆಯವರು ಏನು ಮಾಡುತ್ತಾರೆ ಎನ್ನುವುದು ಮುಖ್ಯಲ್ಲ, ನೀವೇನು ಮಾಡುತ್ತೀರಿ ಎನ್ನುವುದು ಮುಖ್ಯ, ಗುಣಮಟ್ಟದ ಶಿಕ್ಷಣವನ್ನು ಪಡೆಯುವ ಮೂಲಕ ಶಿಸ್ತಿನ ಜೀವನದೊಂದಿಗೆ ಒಳ್ಳೆಯ ಮೌಲ್ಯಗಳನ್ನು ರೂಢಿಸಿಕೊಳ್ಳಿ, ಅದೇ ನಿಮ್ಮನ್ನು ಜೀವನದಲ್ಲಿ ಮುನ್ನಡೆಸುತ್ತದೆ ಎಂದರು.
ಆರ್.ಜಿ. ಪಾಟೀಲ, ಜಗದೀಶ ಕರಡಿ, ಅಶೋಕ ಕಳಕೊಣ್ಣವರ, ಆನಂದ ಕುಲಕರ್ಣಿ, ಪ.ಪಂ ಸದಸ್ಯ ಅಕ್ಕಮ್ಮ ಮಣ್ಣೊವಡ್ಡರ, ರಾಚಯ್ಯ ಮಾಲಗಿತ್ತಿಮಠ, ಮುತ್ತಪ್ಪ ನೂಲ್ಕಿ, ಫಕೀರಪ್ಪ ಭೂಮ್ಮಲಾಪೂರ, ಫಕೀರಪ್ಪ ಮಳ್ಳಿ, ಕುಮಾರಸ್ವಾಮಿ ಕೋರಧ್ಯಾನಮಠ, ಮಲ್ಲಿಕಸಾಬ ರೋಣದ, ಪ್ರಾಚಾರ್ಯ ಬಸವರಾಜ ಬಳಗಾನೂರಮಠ, ಉಪನ್ಯಾಸಕ ಶಿವಮೂರ್ತಿ ಕುರೇರ, ಕೆ.ಆರ್. ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು. ಉಪಾನ್ಯಾಸಕ ಈ.ಆರ್. ಲಗಳೂರ ನಿರ್ವಹಿಸಿದರು.

loading...