ಮಹಿಳೆಯರು ಕಾನೂನು ಸೇವೆ, ಸಲಹೆ ಪಡೆದುಕೊಳ್ಳಲಿ: ಚಿಣ್ಣನ್ನವರ್

0
12

ಕನ್ನಡಮ್ಮ ಸುದ್ದಿ-ಧಾರವಾಡ: ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಹೆಣ್ಣು ಸಹನಾಶೀಲಳು, ಹೆಣ್ಣು ಗಂಡು ಎಂಬ ಬೇದಭಾವ ಮರೆತು ಎಲ್ಲರನ್ನೂ ಸಮನಾಗಿ ನೋಡಬೇಕು. ಇಂದಿನ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಮುಂದುವರೆದಿದ್ದಾರೆ. ಆದರೂ ಕೂಡ ಹೆಣ್ಣು ಮಕ್ಕಳಿಗೆ ಸರಿಯಾದ ಸ್ಥಾನಮಾನ ಸಿಗದಿರುವುದು ದುರದೃಷ್ಟಕರವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್. ಚಿಣ್ಣನ್ನವರ್ ಹೇಳಿದರು.
ನರೇಂದ್ರ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಇಲಾಖೆ, ಹಾಗೂ ನರೇಂದ್ರ ಗ್ರಾಮ ಪಂಚಾಯತಿ ಇವರ ಸಂಯುಕ್ತ ಆಶ್ರಯದಲ್ಲಿ “ಹೆಣ್ಣು ಮಗುವಿನ ಅಂತರಾಷ್ಟ್ರೀಯ ದಿನಾಚಾರಣೆ”ಯ ಅಂಗವಾಗಿ ಏರ್ಪಡಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನದಲ್ಲಿ ತಂತ್ರಜ್ಞಾನವು ಮುಂದುವರೆದಿದ್ದು ಮಹಿಳೆಯು ಗರ್ಭಾವಸ್ಥೆಯಲ್ಲಿದ್ದಾಗಲೇ ಅವಳ ಗರ್ಭದಲ್ಲಿರುವ ಮಗುವು ಹೆಣ್ಣು ಅಥವಾ ಗಂಡು ಪತ್ತೆ ಹಚ್ಚಿ ಹೆಣ್ಣು ಭ್ರೂಣ ಹತ್ಯೆಗೆ ಪ್ರಯತ್ಸಿಸುವ ಮನಸ್ಥಿತಿಯ ಜನ ಇದ್ದಾರೆ. ಹೆಣ್ಣು ಭ್ರೂಣ ಹತ್ಯೆ ಮಾಡಿದವರಿಗೆ ಜೈಲು ಶಿಕ್ಷೆ ವಿಧಿಸುವ ಕಾಯ್ದೆ ಜಾರಿಯಲ್ಲಿದೆ. ಕಾನೂನು ಸೇವಾ ಪ್ರಾಧಿಕಾರದಿಂದ ಸಿಗುವ ಉಚಿತ ಕಾನೂನು ಸೇವೆಗಳು ಮತ್ತು ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಚೇರಮನ್ ಡಾ.ವಿ.ಡಿ. ಕರ್ಪೂರಮಠ ಮಾತನಾಡಿ, ಗರ್ಭಿಣಿಯರು ಸ್ವತ: ಅಥವಾ ಬೇರೆಯವರ ಒತ್ತಾಯಕ್ಕೆ ಮಣಿದು ಭ್ರೂಣ ಲಿಂಗ ಪತ್ತೆ ಮಾಡಿಸಿಕೊಳ್ಳುವುದು ಅಪರಾಧ. ಹೆಣ್ಣು ಭ್ರೂಣಹತ್ಯೆ ಸೇರಿದಂತೆ ಗಂಭೀರ ಸಾಮಾಜಿಕ ಸಮಸ್ಯೆಯಾದ ಲಿಂಗ ತಾರತಮ್ಯದ ವಿರುದ್ದ ಸರ್ಕಾರವು ರೇಡಿಯೋ, ದೂರದರ್ಶನ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು. ನರೇಂದ್ರ ಗ್ರಾ.ಪಂ. ಅಧ್ಯಕ್ಷ ಈರಪ್ಪ ಬಸಪ್ಪ ಗಂಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಗಿರಿಧರ ಕುಕನೂರ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಸ್.ಜಿ. ಕೊರವರ, ಡಿವೈಎಸ್‍ಪಿ ಡಾ.ಬಿ.ಪಿ. ಚಂದ್ರಶೇಖರ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಬಿ. ನಿಂಬಣ್ಣವರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಾ. ಎಚ್.ಎಚ್. ಕುಕನೂರ, ಕೇಂದ್ರ ಕಾರಾಗೃಹ ಅಧೀಕ್ಷಕಿ ಡಾ.ಆರ್.ಅನಿತಾ ಇದ್ದರು.

loading...