ಶಿಕ್ಷಕರಿಗೆ ಹೆಚ್ಚಿನ ಅಧ್ಯಯನ ಅವಶ್ಯ : ಜಿ.ಪಂ ಸಿಇಓ ಮಾನಕರ

0
9

 

ಬಾಗಲಕೋಟೆ: ಮಕ್ಕಳ ಬುದ್ದಿಮಟ್ಟ ಹಾಗೂ ಕುತುಹಲ ಹೆಚ್ಚಾಗಿರುವದರಿಂದ ಮಕ್ಕಳ ಪ್ರಶ್ನೆಗೆ ಉತ್ತರಿಸಲು ಶಿಕ್ಷಕರು ಪ್ರತಿನಿತ್ಯ ಓದುವುದನ್ನು ರೂಡಿಸಿಕೊಂಡು ಹೆಚ್ಚಿನ ಅಧ್ಯಯನ ಕಡೆ ಗಮನಕೊಡಬೇಕೆಂದು ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಹೇಳಿದರು.
ಜಿಲ್ಲಾಡಳಿತದ ನೂತನ ಸಭಾಭವನದಲ್ಲಿಂದು ಜಿಲ್ಲಾ ಪಂಚಾಯತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಪ್ರೌಢ ಶಾಲಾ ಮುಖ್ಯೋಪಾದ್ಯಾಯರಿಗೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಾಲೆಗೆ ಬರುವ ಪ್ರತಿಯೊಬ್ಬ ಮಕ್ಕಳನ್ನು ಶಿಕ್ಷಕರನ್ನು ನಂಬಿರುತ್ತಾರೆ. ಮಕ್ಕಳ ಮನಸ್ಸು ಬಿಳಿ ಹಾಳೆಯಂತಿರುವದರಿಂದ ಶಿಕ್ಷಕರು ಹೇಳುವ ಪ್ರತಿಯೊಂದು ಪಠ್ಯೇತರ ವಿಷಯ ಮಕ್ಕಳ ಮನಸ್ಸಿನಲ್ಲಿ ಅಗಾದವಾಗಿ ಮೂಡುತ್ತಿರುವದರಿಂದ ಪಾಲಕರಿಗಿಂತ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿರುತ್ತದೆ ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿ ಕೆ.ಎ.ಎಸ್, ಐ.ಎ.ಎಸ್ ನಂತಹ ಉನ್ನತ ಮಟ್ಟದ ಶಿಕ್ಷಣ ಪಡೆದಿದ್ದರೂ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರನ್ನು ಮರೆಯುವದಿಲ್ಲ. ಆ ವಿದ್ಯಾರ್ಥಿಯಲ್ಲಿ ಪ್ರಥಮ ಶಿಕ್ಷಣ ನೀಡಿದವರೆಂಬ ಸ್ಮರಣೆ ಇರುತ್ತದೆ ಎಂದರು. ಕಳೆದ ಬಾರಿ ರಾಜ್ಯಕ್ಕೆ 25 ಸ್ಥಾನ ಪಡೆದಿದ್ದ ಬಾಗಲಕೋಟೆ ಜಿಲ್ಲೆ ಈ ಬಾರಿ 10ನೇ ಸ್ಥಾನಕ್ಕೆ ಬರುವ ನೀರಿಕ್ಷೆಯನ್ನು ಇಟ್ಟುಕೊಂಡು ಬೋದನೆ ಚುರುಕುಗೊಳಿಸಬೇಕು. ಪ್ರತಿ ಪ್ರೌಢಶಾಲೆಯ ಮುಖ್ಯಗುರುಗಳು ಪ್ರತಿನಿತ್ಯ ತರಗತಿಗಳಿಗೆ ಭೇಟಿ ನೀಡಿ ಅಂದಿನ ಬೋಧನೆ ವಿವರವನ್ನು ಹಾಗೂ ಶಿಕ್ಷಕರ ಹಾಜರಾತಿ ಗಮನಿಸಬೇಕು. ಇದರಿಂದ ಗೈರಾದ ಮಕ್ಕಳಿಗೂ ಕೂಡಾ ಅನುಕೂಲವಾಗಲಿದ್ದು, ಈ ಕ್ರಿಯೆ ಇಂದಿನಿಂದಲೇ ಪ್ರಾರಂಭಿಸಬೇಕು. ಶಿಕ್ಷಣ ಇಲಾಖೆ ಒಳಗೊಂಡಂತೆ ಎಲ್ಲ ಇಲಾಖೆಗಳಲ್ಲಿಯೂ ಸಿಬ್ಬಂದಿಗಳ ಕೊರತೆ ಇದ್ದು, ಇದ್ದುದರಲ್ಲೇ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು.
ಡಿವಾಯ್‍ಪಿಸಿಯ ಯೋಜನಾ ಸಮನ್ವಯಾಧಿಕಾರಿ ಎನ್.ವಾಯ್.ಕುಂದರಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಸರಕಾರಿ ಹಾಗೂ ಖಾಸಗಿ ಸೇರಿದಂತೆ ಒಟ್ಟು 471 ಪ್ರೌಢಶಾಲೆಗಳಿದ್ದು, 29 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿದ್ದಾರೆ. ಈ ವಿದ್ಯಾರ್ಥಿಗಳು ಪ್ರಬುದ್ದ ವಯಸ್ಸಿನಲ್ಲಿ ಬೆಳೆಯುತ್ತಿರುವದರಿಂದ ಅವರಿಗೆ ಶಿಕ್ಷಣದ ಗುಣಮಟ್ಟದಲ್ಲಿ ವಿವಿಧ ರೀತಿಯ ಶಿಕ್ಷಣಗಳನ್ನು ನೀಡುವಲ್ಲಿ ಸರಕಾರ ಯೋಜನೆಗಳನ್ನು ರೂಪಿಸಿದೆ. ಅದರಲ್ಲಿ ದೈಹಿಕ ಶಿಕ್ಷಣ, ಯೋಗ, ಸ್ಕಿಲ್ ಡೆವಲೆಪ್‍ಮೆಂಟ್, ವಸತಿ ಶಾಲೆಯಲ್ಲಿ ಹೆಚ್ಚಿನ ಟ್ಯೂಶನ್ ಕ್ಲಾಸ್ ನಡೆಸಲಾಗುತ್ತಿದ್ದು, ಈಗಾಗಲೇ ಜಿಲ್ಲಾ ಪಂಚಾಯತಿಯಿಂದ 100 ಪ್ರೌಢಶಾಲೆಗಳಿಗೆ ಕಂಪ್ಯೂಟರ, ಸೋಲಾರ ಲೈಟ್ ಸಿಸ್ಟಮ್ ಮುಂತಾದ ಆಧುನಿಕ ಶಿಕ್ಷಣದ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಆರ್.ಕಾಮಾಕ್ಷಿ, ಜಿ.ಪಂ ಯೋಜನಾ ನಿರ್ದೇಶಕ ಎಸ್.ಎಸ್.ಹಿರೇಮಠ, ಗೊರವರ, ವಿಜ್ಞಾನ ವಿಷಯ ಶಿಕ್ಷಕ ಎಂ.ಎ.ಬಾಳಿಕಾಯಿ, ಸೇರಿದಂತೆ ಇತರರು ಉಪಸ್ಥಿತರಿದ್ದರು. ವಿಷಯ ಪರಿವೀಕ್ಷಕಿ ಎಸ್.ಎನ್.ಕನಮಡಿ ಕೊನೆಗೆ ವಂದಿಸಿದರು.

loading...