ಡಾ. ತೋಂಟದ ಶ್ರೀಗಳಿಗೆ ನುಡಿನಮನ

0
24

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಬಸವಣ್ಣನವರ ಸಮಾನತೆಯ ತತ್ವವನ್ನು ಅಕ್ಷರ ಸಹ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ಪ್ರಗತಿಪರ ಹಾಗೂ ಬದಲಾವಣೆಗಾಗಿ ಶ್ರಮಿಸುತ್ತಿದ್ದ ತೋಂಟದ ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾಗದ ನಷ್ಟವಾಗಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಐ.ಎ.ರೇವಡಿ ಹೇಳಿದರು.
ಗದಗನ ತೋಂಟದಾರ್ಯ ಸಿದ್ದಲಿಂಗ ಸ್ವಾಮಿಜಿ ಲಿಂಗೈಕ್ಯವಾದ ಹಿನ್ನಲೆಯಲ್ಲಿ ಸ್ಥಳೀಯ ಮೈಸೂರು ಮಠದಲ್ಲಿ ಕಸಾಪ ವತಿಯಿಂದ ನಡೆದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅನ್ನ ಹಾಗೂ ವಿದ್ಯಾದಾನಗಳಲ್ಲಿ ಶ್ರೇಷ್ಠತೆಯನ್ನು ಕಾಯ್ದುಕೊಂಡು ಬಂದಿದ್ದ ತೋಂಟದಾರ್ಯ ಮಠದಲ್ಲಿ ಡಾ.ಸಿದ್ದಲಿಂಗ ಸ್ವಾಮಿಜಿ ಅವರು ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ತಮ್ಮದೆಯಾದ ಕೊಡುಗೆ ನೀಡುವದಲ್ಲದೆ. ಈ ಭಾಗದ ರೈತರ ಹಾಗೂ ಸಾಮಾನ್ಯ ಜನರ ಪರವಾಗಿ ನಡೆದ ಹೋರಾಟಗಳ ಮುಂದಾಳತ್ವ ವಹಿಸಿಕೊಂಡಿದ್ದು ಇವರ ಜನಪರ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿತ್ತು ಎಂದರು.
ನಿವೃತ್ತ ಉಪನ್ಯಾಸಕ ಕೆ.ಎಸ್.ಗಾರವಾಡಹಿರೇಮಠ ಮಾತನಾಡಿ,ಕಂದಾಚಾರ ಹಾಗೂ ಗೊಡ್ಡು ಸಂಪ್ರದಾಯಕ್ಕೆ ಸೆಡ್ಡು ಹೊಡೆದು ವೈಜ್ಞಾನೀಕ ಮಾದರಿಯಲ್ಲಿ ಜೀವನ ನಡೆಸಲು ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ ಎಂದರು. ಗ್ರಂಥಪಾಲಕ ಎಸ್.ಐ.ಪತ್ತಾರ ಮಾತನಾಡಿ, ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಹಾಗೂ ತಾತ್ಸಾರ ಮನೋಭಾವನೆಗೆ ಒಳಪಟ್ಟಿದ ಜನರಿಗೆ ಬೆನ್ನೆಲುಬಾಗಿ ನಿಲ್ಲುವ ಮೂಲಕ ಅಸಾಹಯಕರ ಬಾಳಿನಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿದ್ದ ಶ್ರೀಗಳು ಅಪಾರ ಸಾಹಿತ್ಯದ ಪಾಂಡಿತ್ಯವನ್ನು ಹೊಂದಿದ್ದ ಅವರು ಮಾನವೀಯ ಮೌಲ್ಯಗಳ ಪ್ರತಿರೂಪವಾಗಿದ್ದರು ಎಂದರು.
ತಾಲೂಕು ವೈದ್ಯಾಧಿಕಾರಿ ಎಂ.ಬಿ.ಪಾಟೀಲ, ಪುರಸಭೆ ಸದಸ್ಯ ಯು.ಆರ್.ಚನ್ನಮ್ಮನವರ, ಎಂ.ಎ.ಹಾದಿಮನಿ, ಕೆ.ಜಿ.ಸಂಗಟಿ, ಶಂಕರ ಕಲ್ಲಿಗನೂರ, ಎ.ಕೆ.ಒಂಟಿ, ಎಂ.ಎಸ್.ಮಕಾನದಾರ, ಹುಚ್ಚಪ್ಪ ಹಾವೇರಿ, ಎ.ಎನ್.ರೋಣದ ಇದ್ದರು.

loading...