ಯುವಪೀಳಿಗೆ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲಿ: ಶಾಸಕ ನಿಂಬಣ್ಣವರ

0
23

ಕನ್ನಡಮ್ಮ ಸುದ್ದಿ-ಕಲಘಟಗಿ: ಧಾರ್ಮಿಕತ್ವದತ್ತ ಜನರ ನಿರ್ಲಕ್ಷ್ಯದಿಂದಾಗಿ ಸಮಾಜದ ಸ್ವಾಸ್ಥ್ಯ ಕದಡುತ್ತಿದೆ. ಕಾರಣ ಪೂರ್ವಜರಂತೆ ನಮ್ಮ ಇಂದಿನ ಪೀಳಿಗೆಯೂ ಧಾರ್ಮಿಕ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವಲ್ಲಿ ಮುಂದಾಗಬೇಕೆಂದು ಶಾಸಕ ಸಿ.ಎಂ.ನಿಂಬಣ್ಣವರ ಹೇಳಿದರು.
ತಾಲೂಕಿನ ಮುಕ್ಕಲ್ಲ ಗ್ರಾಮದ ಗ್ರಾಮದೇವಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಸಾಮೂಹಿಕ ಲಕ್ಷ ಬಿಲ್ವಾರ್ಚನೆಯ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದ ಭವ್ಯ ಪರಂಪರೆ ಧಾರ್ಮಿಕತ್ವದ ತಳಹದಿಯ ಮೇಲೆಯೇ ನಿಂತಿದೆ. ಯಾವುದೇ ಧರ್ಮದವರು ತಮ್ಮ ಧರ್ಮಾಚರಣೆ ಕಟ್ಟು ನಿಟ್ಟಾಗಿ ಮಾಡುವುದರಿಂದ ಎಲ್ಲರಲ್ಲಿಯೂ ಭ್ರಾತೃತ್ವದ ಭಾವನೆ ಮೂಡುವುದರೊಂದಿಗೆ ಸಾಮರಸ್ಯದ ಜೀವನ ನಡೆಸಲು ಸಾಧ್ಯ ಎಂದರು.
ತಾಲೂಕಿನಲ್ಲಿಯೇ ವಿನೂತನ ಕಾರ್ಯಕ್ರಮ ಸಂಘಟಿಸಿದ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲರನ್ನೂ ಅಭಿನಂದಿಸಿದ ಅವರು ಇಂದು ವೇದಿಕೆಯಲ್ಲಿನ ಪೂಜಾ ಕೈಂಕರ್ಯ ಕಂಡಾಗ ಶ್ರೀಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯೇ ಧರೆಗಿಳಿದು ಬಂದಂತೆ ಭಾಸವಾಗುತ್ತಿದೆ. ಪೂಜಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡ ನಾವೆಲ್ಲರೂ ಧನ್ಯರು ಎಂದರು.
ಇಲ್ಲಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾವರಗೇರಿ ವಲಯದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಹಾಗೂ ಸಾಮೂಹಿಕ ಲಕ್ಷ ಬಿಲ್ವಾರ್ಚನೆ ವ್ಯವಸ್ಥಾಪನಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಸಭಾ ಕಾರ್ಯಕ್ರಮದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ ಎಮ್‌. ಮಾತನಾಡಿ, ಸಾಮೂಹಿಕ ಪೂಜಾ ಕೈಂಕರ್ಯಗಳನ್ನು ಮಾಡುವುದರಿಂದ ಪೂಜಾ ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ದೈವೀ ಶಕ್ತಿ ನಿರ್ಮಾಣಗೊಂಡು ವಿಕೃತ ಮನಸ್ಸುಗಳು ದೂರವಾಗಿ ಪರಸ್ಪರ ಸ್ನೇಹ ಜೀವಿಯಾಗಿ ಬಾಳಬೇಕೆನ್ನುವ ಭಾವನೆಗಳು ಸಾರ್ವಜನಿಕರಲ್ಲಿ ಜಾಗೃತಗೊಳ್ಳುತ್ತದೆ. ಗ್ರಾಮಾಭಿವೃದ್ಧಿ ಯೋಜನೆಯಿಂದ ಕೇವಲ ಸ್ವ-ಸಹಾಯ ಸಂಘಗಳನ್ನು ನಿರ್ಮಿಸಿ ಕುಟುಂಬದ ನಿರ್ವಹಣೆಯ ಕುರಿತು ಜಾಗೃತಿ ಮೂಡಿಸಿ ಉಳಿತಾಯ ಮಾಡಿಸುವುದೊಂದೇ ಅಲ್ಲದೇ ಇಂತಹ ಧಾರ್ಮಿಕ ಚಟುವಟಿಕೆಗಳನ್ನು ಸಾರ್ವಜನಿಕರ ಸಹಯೋಗತ್ವದಲ್ಲಿ ಹೆಚ್ಚೆಚ್ಚು ಮಾಡುವುದರೊಂದಿಗೆ ತಮ್ಮ ಹಾಗೂ ಪ್ರತಿಯೊಂದು ಸಮಾಜದವರ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಹನ್ನೆರಡುಮಠದ ರೇವಣಸಿದ್ಧ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸುಭಾಶಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ. ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಸದಸ್ಯೆ ಕವಿತಾ ಬಡಿಗೇರ, ಎ.ಪಿ.ಎಂ.ಸಿ. ಸದಸ್ಯ ಮುತ್ತಪ್ಪ ಅಂಗಡಿ, ಗ್ರಾ.ಪಂ. ಸದಸ್ಯರುಗಳು, ಪರಶುರಾಮ ದುಂಡಿ, ನೀಲಕಂಠಗೌಡ ಪಾಟೀಲ, ಶಂಕರಗೌಡ ಮುದಿಗೌಡ್ರ, ಈಶ್ವರಗೌಡ ಜಾಯನಗೌಡ್ರ, ಪ್ರಭುಗೌಡ ಗುರುಪಾದಗೌಡ್ರ, ಗುರುಲಿಂಗಯ್ಯ ಚಿಕ್ಕಮಠ, ಶಶಿಧರಗೌಡ ಪಾಟೀಲ, ಜನ ಜಾಗ್ರತಿ ವೇದಿಕೆಯ ಸದಸ್ಯ ಪ್ರಭಾಕರ ನಾಯಕ, ತಾಲೂಕು ಯೋಜನಾದಿಕಾರಿ ಕೆ.ಕುಸುಮಾಧರ ಸೇರಿದಂತೆ ಅನೇಕ ಗಣ್ಯರು ಒಕ್ಕೂಟದ ಪದಾಧಿಕಾರಿಗಳು, ವ್ಯವಸ್ಥಾಪನಾ ಸಮಿತಿ ಸದಸ್ಯರು ಇದ್ದರು. ಸಂಸ್ಥೆಯ ಮೆಲ್ವಿಚಾರಕ ರಾಜೇಶ ನಾಯಕಸ್ವಾಗತಿಸಿದರು, ಪ್ರೇಮಾ ಮುರಳ್ಳಿ ನಿರೂಪಿಸಿದರು.

loading...