ಹಗಲು ದರೋಡೆ ನಿಲ್ಲಿಸುವಂತೆ ಒತ್ತಾಯ

0
24

 

ಕನ್ನಡಮ್ಮ ಸುದ್ದಿ-ಶಿರಸಿ: ಕೋಲ್ಕತ್ತಾದ ಖಾಸಗಿ ಕಂಪನಿಯೊಂದು ತಾಲೂಕಿನಲ್ಲಿ ಖಾಯಂ ವಾಸದ ಮನೆಗಳ ಸರ್ವೇ ಮಾಡಿ ನಂಬರ್ ಪ್ಲೇಟ್ ಅಳವಡಿಸುವುದಾಗಿ ಹಣ ಪಡೆದು ಹಗಲು ದರೋಡೆ ನಡೆಸುತ್ತಿದ್ದು, ಕೂಡಲೇ ಶಿರಸಿ ತಾಲೂಕಿನಲ್ಲಿ ಇದನ್ನು ನಿಲ್ಲಿಸಬೇಕು ಎಂದು ತಾಲೂಕಾ ಪಂಚಾಯ್ತಿ ಸದಸ್ಯರು ಒಕ್ಕೋರಲಿನಿಂದ ಒತ್ತಾಯಿಸಿದರು.
ತಾಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮನೆಗಳಿಗೆ ನಂಬರ್ ಪ್ಲೇಟ್ ಅಳವಡಿಸುವ ವಿಚಾರ ಭರ್ಜರಿ ಕಾವೇರಿತ್ತು. ತಾಲೂಕು ಪಂಚಾಯ್ತಿ ಸದಸ್ಯ ನರಸಿಂಹ ಹೆಗಡೆ ವಿಷಯ ಪ್ರಸ್ತಾಪಿಸಿ, ತಾಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮನೆಗಳಿಗೆ ಮನೆ ನಂಬರ ಪ್ಲೇಟ್ ಹಾಕುತ್ತೇವೆ ಎಂದು ಕೋಲ್ಕತ್ತಾದ ಎಸ್.ಬಿ.ನಂಬರಿಂಗ್ ವರ್ಕ್‍ಸ್ ಕಂಪನಿ ಕಳೆದ 15 ದಿನಗಳಿಂದ ಶಿರಸಿ ತಾಲೂಕಿನ ಕೆಲ ಪಂಚಾಯ್ತಿ ವ್ಯಾಪ್ತಿಯಲ್ಲಿ ಮನೆಗಳಿಗೆ ನಂಬರ ಅಳವಡಿಸಿದೆ. ಇದಕ್ಕಾಗಿ ಪ್ರತಿ ಮನೆಯಿಂದ 50 ರೂ. ವಸೂಲಿ ಮಾಡುತ್ತಿದೆ.

ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ ಮಾತನಾಡಿ, ತಾಲೂಕಿನ ಮತ್ತಿಘಟ್ಟಾ, ದೇವನಳ್ಳಿ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಹುಲಿ ಜಾನುವಾರುಗಳನ್ನು ಬಲಿ ಪಡೆದಿದ್ದು, ಆ ಭಾಗದ ಜನತೆ ಭಯಭೀತರಾಗಿ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಇದುವರೆಗೂ ಹುಲಿ ಪತ್ತೆ ಹಚ್ಚಿಲ್ಲ. ಕೂಡಲೇ ಹುಲಿ ಹಿಡಿದು ಬೇರೆ ಸ್ಥಳಾಂತರಿಸಬೇಕು. ಅದೇ ರೀತಿ ಇಸಳೂರು ಭಾಗದಲ್ಲಿ ಮಂಗಗಳ ಉಪಟಳದಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮನೆಯ ಹೆಂಚು ತೆಗೆದು ಒಳ ನುಗ್ಗುವ ಮಂಗಗಳು ಎಲ್ಲಾ ಚೆಲ್ಲಾಪಿಲ್ಲಿ ಮಾಡುತ್ತಿವೆ. ತಕ್ಷಣ ಇದಕ್ಕೆ ಬ್ರೇಕ್ ಹಾಕಬೇಕು ಎಂದು ಸೂಚಿಸಿದರು. ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೇವನಳ್ಳಿ ಭಾಗದ ಅರಣ್ಯದಲ್ಲಿ ಬೋನ್ ಇಡಲಾಗಿದೆ. ಜೊತೆಗೆ 20 ಸಿಬ್ಬಂದಿ ಸಹ ನಿಯೋಜಿಸಲಾಗಿದೆ. ಈ ಕುರಿತು ವನ್ಯಜೀವಿ ವಿಭಾಗದ ಮುಖ್ಯಸ್ಥರಿಗೂ ಸಹ ಮಾಹಿತಿ ನೀಡಲಾಗಿದೆ ಎಂದರು.
ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿರ್ಮಾಣವಾಗುತ್ತಿರುವ ಶಿಶು ಮತ್ತು ತಾಯಿಯ ಕಟ್ಟಡಕ್ಕೆ ಎಂ ಸ್ಯಾಂಡ್ ಬಳಸಲಾಗುತ್ತಿದೆ. ಎಂ ಸ್ಯಾಂಡ್ ಹೆಚ್ಚು ವರ್ಷ ಬಾಳಿಕೆ ಬರಲ್ಲ ಎಂಬ ಮಾತಿದೆ. ಈ ಕಟ್ಟಡಕ್ಕೆ ಮರಳು ಬಳಸಲು ಸೂಚಿಸಿ ಎಂದು ಅಧ್ಯಕ್ಷೆ ಶ್ರೀಲತಾ ಕಾಳೇರಮನೆ ವೈದ್ಯಾಧಿಕಾರಿಗೆ ಸೂಚನೆ ನೀಡಿದರು. ಜನೌಷಧಿ ಕೇಂದ್ರದಲ್ಲಿ ಎಲ್ಲಾ ಔಷಧಿಗಳು ಸಿಗುತ್ತಿಲ್ಲ ಎಂದು ಜನ ಖಾಸಗಿ ಮೆಡಿಕಲ್‍ಗೆ ಹೋಗುತ್ತಿದ್ದಾರೆ. ಸರ್ಕಾರದ ಜನೌಷಧಿ ಕೇಂದ್ರದ ಕುರಿತಂತೆ ಜನರಲ್ಲಿ ತಪ್ಪು ತಿಳುವಳಿಕೆ ಮೂಡುತ್ತಿದೆ. ಈ ಕೇಂದ್ರ ಸರಿಯಾಗಿ ನಿರ್ವಹಣೆ ಮಾಡುವಂತೆ ಸದಸ್ಯರು ಆಗ್ರಹಿಸಿದರು. ಪಶುಸಂಗೋಪನಾ ಇಲಾಖೆಯಿಂದ ಜಾನುವಾರುಗಳಿಗೆ ಕಾಲುಬಾಯಿ ಬೇನೆ ಲಸಿಕೆ ಹಾಕಿಸಿದರೂ ಸಹ ತಾಲೂಕಿನ ಬೆಂಗಳೆ, ಓಣಿಕೇರಿ ಭಾಗದಲ್ಲಿ ರೋಗ ಕಾಣಿಸಿಕೊಂಡಿದೆ. ಇಲಾಖೆಯಿಂದ ನೀಡಲಾದ ಚುಚ್ಚುಮದ್ದುಗಳು ಕಳಪೆ ಗುಣಮಟ್ಟದ್ದಾಗಿದ್ದೇ ರೋಗ ಹರಡಲು ಕಾರಣ ಎಂದು ರೈತರು ಆರೋಪಿಸುತ್ತಿದ್ದಾರೆ. ಇಲಾಖೆಯಿಂದ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹೆಗಡೆ ಪ್ರಶ್ನಿಸಿದರು.

loading...