ಜೇನು ಕೃಷಿಗೆ ಉಜ್ವಲವಾದ ಭವಿಷ್ಯ: ಶಾಸಕ ವಿಶ್ವೇಶ್ವರ

0
36

ಕನ್ನಡಮ್ಮ ಸುದ್ದಿ-ಶಿರಸಿ: ಜೇನು ಕೃಷಿಯಲ್ಲಿ ಹೊರಗಿನ ಜೇನು ತಳಿಗಳ ಆಯ್ಕೆಯ ಬದಲು ಮೂಲ ತಳಿಯ ಜೇನಿಗೆ ಆದ್ಯತೆ ನೀಡಬೇಕು. ಇಲಾಖೆ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
2018-19ನೇ ಸಾಲಿನ ಜಿಲ್ಲಾ ಪಂಚಾಯ್ತಿ ಯೋಜನೆ, ರಾಜ್ಯ ವಲಯ ಯೋಜನೆ ಹಾಗೂ ಆತ್ಮ ಯೋಜನೆಯಡಿ ಜೇನು ಕೃಷಿ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದಲ್ಲಿ ಜೇನಿನ ಮೂಲ ತಳಿಗಳ ಮಾಹಿತಿ ಕಡಿಮೆ. ಇದನ್ನು ತಿಳಿಸುವ ಕೆಲಸ ಆಗಬೇಕು. ಜೇನು ಕೃಷಿಯಲ್ಲಿ ಸ್ಥಳೀಯ ಜೇನು ತಳಿಗಳನ್ನು ಬಳಸಿಕೊಂಡು ಕಾರ್ಯಚಟುವಟಿಕೆ ಮಾಡಬೇಕು. ಹಾಗಾದಾಗ ಉತ್ಪಾದನೆಯೂ ಹೆಚ್ಚುತ್ತದೆ. ಜೇನು ಕುಟುಂಬಗಳ ಸುರಕ್ಷತೆಯ ಜೊತೆಗೆ ಜೇನು ತಳಿಗಳ ಉಳಿವೂ ಸಾಧ್ಯವಾಗುತ್ತದೆ ಎಂದರು.

ಸಾಕಷ್ಟು ಸಮಸ್ಯೆಗಳ ನಡುವೆಯೂ ಜೇನು ಕೃಷಿ ಮಾಡಬೇಕು. ಜೇನು ಕೃಷಿಗೆ ಉಜ್ವಲವಾದ ಭವಿಷ್ಯವಿದೆ. ಹೊರರಾಜ್ಯಗಳಿಂದ ಜೇನು ತುಪ್ಪ ತರಿಸಿಕೊಳ್ಳಲಾಗುತ್ತಿದೆ. ಔಷಧಿ ಬಳಕೆ, ಸೌಂದರ್ಯ ವರ್ದಕ ಸೇರಿದಂತೆ ಹಲವು ಕಂಪನಿಗಳು ಜೇನುತುಪ್ಪ ಬಯಸುತ್ತಿವೆ. ಈ ಭಾಗದಲ್ಲಿ ಜೇನು ತುಪ್ಪಕ್ಕೆ ಸಾಕಷ್ಟು ಬೇಡಿಕೆಯಿದೆ. ಉಪಕಸುಬಾಗಿ ಜೇನು ಕೃಷಿ ಮಾಡಿದರೆ ಲಾಭದಾಯಕ. ಕಡಿಮೆ ಶ್ರಮ ಬೇಡುವ ಈ ಕೃಷಿ ಎಲ್ಲ ಕಡೆ ಮಾಡಲು ಅವಕಾಶವಿದೆ. ಅಡಿಕೆ, ಹಲಸು ಸೇರಿದಂತೆ ಹಲವು ಉತ್ಪನ್ನಗಳ ಬ್ರಾಂಡ್ ಶಿರಸಿಯಲ್ಲಿದೆ. ಅದೇ ರೀತಿ ಜೇನುತುಪ್ಪದಲ್ಲಿಯೂ ಶಿರಸಿಯ ಬ್ರಾಂಡ್ ಬರಬೇಕು. ಮಾರುಕಟ್ಟೆಯಲ್ಲಿ ಸಾಕಷ್ಟು ಕಲಬೆರಿಕೆ ಜೇನುತುಪ್ಪಗಳು ಬರುತ್ತಿವೆ. ಇಂಥ ಸನ್ನಿವೇಶದಲ್ಲಿ ಕಲಬೆರಕೆರಹಿತ ಜೇನುತುಪ್ಪ ಮಾರುಕಟ್ಟೆಗೆ ಬರಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.
ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಇನ್ನೆರಡು ತಿಂಗಳಲ್ಲಿ ಶಿರಸಿಯಲ್ಲಿ ಜೇನು ಕೃಷಿಕರ ಸಂಘ ನೊಂದಣಿ ಮಾಡಲಾಗುವುದು ಎಂದರು. ಪ್ರತೀ ಜೇನು ಪೆಟ್ಟಿಗೆಗೆ ಶೇ.40ರಷ್ಟು ಸಹಾಯಧನ ನೀಡಲಾಗುತ್ತಿದ್ದು, ಜೇನು ಕೃಷಿಕರು ತರಬೇತಿ ಪಡೆದು ಜೇನು ಪೆಟ್ಟಿಗೆ ಪಡೆಯುವ ಕಾರ್ಯವಾಗಬೇಕು ಎಂದು ತಿಳಿಸಿದರು.

ತಾಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಉಪಾಧ್ಯಕ್ಷ ಚಂದ್ರು ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಹಳದೋಟ, ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಜೇನು ಕೃಷಿಕ ಮಧುಕೇಶ್ವರ ಹೆಗಡೆ ಹಾಗೂ ಇತರರು ಇದ್ದರು.

loading...