ಡಾ. ಶ್ರೀಕಂಠಗೌಡ ಅಯ್ಯನಗೌಡ್ರ ಸರ್ವಾಧ್ಯಕ್ಷರಾಗಿ ಆಯ್ಕೆ

0
20

ಕನ್ನಡಮ್ಮ ಸುದ್ದಿ-ಸವಣೂರ: ಸವಣೂರ ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಜ.9 ರಂದು ಏರ್ಪಡಿಸಲಾಗಿರುವ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಸ್ಥಾನ ಸಾಹಿತಿ ಡಾ. ಶ್ರೀಕಂಠಗೌಡ ವಿ. ಅಯ್ಯನಗೌಡ್ರ ಅವರಿಗೆ ಒಲಿದಿದೆ.
ಸಮ್ಮೇಳನಾಧ್ಯಕ್ಷರ ಪರಿಚಯ: ಸವಣೂರ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸರ್ವ ಸಮ್ಮತದಿಂದ ಆಯ್ಕೆಯಾಗಿರುವ ಸಾಹಿತಿ ಡಾ. ಎಸ್.ವಿ.ಅಯ್ಯನಗೌಡ್ರ ತಾಲೂಕಿನ ಜೇಕಿನಕಟ್ಟಿ ಗ್ರಾಮದವರು. 1952 ಫೆಬ್ರವರಿ 22 ರಂದು ಜನಿಸಿದರು. 1974 ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ.ಕನ್ನಡ ಹಾಗೂ 1983 ರಲ್ಲಿ ಶ್ರೀ ಮೈಲಾರ ಬಸವಲಿಂಗ ಶರಣರ: ಸಮಗ್ರ ಸಾಹಿತ್ಯ ದರ್ಶನ ವಿಷಯದಲ್ಲಿ ಪಿಎಚ್‍ಡಿ ಪದವಿಯನ್ನು ಪಡೆದುಕೊಂಡಿದ್ದಾರೆ. 1983ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರವಾಚಕರಾಗಿ, 1999ರಲ್ಲಿ ಪ್ರಾಧ್ಯಾಪಕರಾಗಿ ಕರ್ನಾಟಕ ವಿಶ್ವವಿದ್ಯಾಲಯದ ಕರ್ನಾಟಕ ಕಾಲೇಜಿನಲ್ಲಿ, ಸ್ನಾತಕೋತ್ತರ ಕೇಂದ್ರಗಳಾದ ಬೆಳಗಾವಿ, ಹಾವೇರಿಗಳಲ್ಲಿ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ, ಪ್ರಭಾರಿ ಆಡಳಿತಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಸಾರಾಂಗದಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ.
ಡಾ. ಶ್ರೀಕಂಠಗೌಡ ವಿ. ಅಯ್ಯನಗೌಡ್ರ ಅವರು ಸಂಶೋದಕರಾಗಿ ವಚನ ಸ್ವರ, ವಚನ ರಚನೆ, ಕವಿ, ವಿಮರ್ಶಕರಾಗಿ, ಆತ್ಮಚರಿತ್ರೆ, ಪ್ರವಾಸ ಕಥನ, ಗ್ರಂಥ ಸಂಪಾಕರು, ಅನುವಾದ, 12 ಎಂಪಿಲ್, 27 ಪಿಎಚ್‍ಡಿ ವಿದ್ಯಾರ್ಥಿಗಳ ಮಾರ್ಗದರ್ಶಕರಾಗಿ, ಪತ್ರಿಕೆಗಳ ಸಂಪಾದಕರಾಗಿ, ವಿವಿಧ ಸಂಘ-ಸಂಸ್ಥೆಗಳ ಸದಸ್ಯರಾಗಿ ಕಾರ್ಯ ಕೈಗೊಂಡಿದ್ದಾರೆ. ಶರಣರ ಕಾಯಕ ಧಾಸೋಹ ತತ್ವಗಳನ್ನು ಮೈಗೊಡಿಸಿಕೊಂಡು 66 ವರ್ಷಗಳ ಶರಣರ ಬದುಕನ್ನು ಬದುಕುತ್ತಿರುವ ಅಯ್ಯನಗೌಡ್ರ ಅವರು ಡಾ. ಎಂ.ಎಸ್. ಸುಂಕಾಪೂರ ಮಾರ್ಗದರ್ಶನದಲ್ಲಿ ಮೈಲಾರ ಬಸವಲಿಂಗ ಶರಣರ ಜೀವನ ಹಾಗೂ ಸಮಗ್ರ ಕೃತಿಗಳ ದರ್ಶನ ಎಂಬ ವಿಷಯದ ಮೇಲೆ 1983ರಲ್ಲಿ ಪಿಎಚ್‍ಡಿ ಪದವಿಯನ್ನು ಬಂಗಾರದ ಪದಕದೊಂದಿಗೆ ಪಡೆದು ತಾಲೂಕಿಗೆ ಹೆಮ್ಮೆಯನ್ನು ತಂದಿದ್ದಾರೆ.
2006ರಲ್ಲಿ ‘ಆಧುನೀಕ ಜಗತ್ತಿಗೆ ಶ್ರೀ ಬಸವೇಶ್ವರರ ಹೊಸ ಸಂದೇಶ’ ಸಂಶೋದಿತ ಕೃತಿಯನ್ನು ದೆಹಲಿ ಯುಜಿಸಿಗೆ ಸಲ್ಲಿಸಿದ ಹಿನ್ನಲೆಯಲ್ಲಿ 2007ರಲ್ಲಿ ದಿ ಬೆಸ್ಟ್ ಸಿಟಿಜನ್ ಆಫ್ ಇಂಡಿಯಾ ಪ್ರಶಸ್ತಿಯನ್ನು ಹಾಗೂ ಕೀರ್ತಿಯನ್ನು ತಮ್ಮದಾಗಿಸಿಕೊಂಡಿರುವ ಡಾ.ಎಸ್.ವಿ.ಅಯ್ಯನಗೌಡ್ರ, ಸಾಹಿತ್ಯ ಕ್ಷೇತ್ರದಲ್ಲಿ ಸದಾ ಒಂದಿಲ್ಲೊಂದು ಸೇವೆಯಲ್ಲಿ ತೊಡಗಿ ತಮ್ಮ ಸಾಹಿತ್ಯ ಕೃಷಿ ನಡೆಸಿದ್ದಾರೆ. ಅವರಿಗೆ ಈ ಭಾರಿಯ ಸಮ್ಮೇಳನಾಧ್ಯಕ್ಷ ಸ್ಥಾನ ಒಲಿದಿರುವುದು ಸಾಹಿತ್ಯ ವಲಯದಲ್ಲಿ ಸಂತಸ ಮೂಡಿದೆ.

loading...