ಅವಧೂತ ಪರಂಪರೆಯ ಅಮೂಲ್ಯ ರತ್ನ ವೀರಪ್ಪಜ್ಜ: ಶ್ರೀಗಳು

0
66

ಕನ್ನಡಮ್ಮ ಸುದ್ದಿ-ನರೇಗಲ್ಲ: ಅವಧೂತ ಅನ್ನುವುದು ಒಂದು ಪಂಥವಲ್ಲ. ಅದೊಂದು ಚಿತ್ತಸ್ಥಿತಿ. ಎಲ್ಲ ಹಂಗೂ, ಬಂಧನಗಳನ್ನು ಕಳಚಿಕೊಳ್ಳುವ ಸ್ಥಿತಿ. ಎಲ್ಲ ಪ್ರಾಕೃತಿಕ, ಸಾಮಾಜಿಕ ಬಂಧನಗಳನ್ನು ಕೊಡವಿಕೊಂಡವರು. ಅವೆಲ್ಲದರಿಂದ ಬಿಡುಗಡೆ ಹೊಂದಿದವರು. ಇಂತಹ ಸಾಧನೆಮ ಮೇರು ಶಿಖರ ಕೋಡಿಕೊಪ್ಪದ ವೀರಪ್ಪಜ್ಜನವರು ಎಂದು ಹಾಲಕೆರೆ ಡಾ. ಅಭಿನವ ಅನ್ನದಾನ ಸ್ವಾಮೀಜಿ ಹೇಳಿದರು.
ಕೋಡಿಕೊಪ್ಪದ ವೀರಪ್ಪಜ್ಜನ ಮಠದಲ್ಲಿ ಸೋಮವಾರ ಹಠಯೋಗಿ ವೀರಪ್ಪಜ್ಜನ ಜೀವನ ಚರಿತ್ರೆಯ ಇಂಗ್ಲಿಷ್ ಹಾಗೂ ಮರಾಠಿ ಆವೃತ್ತಿ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಗದ ಕಣ್ಣಿಗೆ ಹುಚ್ಚನಾಗಿ ಕಂಡು ಜಗದ ಕತ್ತಲನ್ನು ತೊಡೆದ ಮಹಾನ್ ಅವತಾರಿ ಪುರುಷ ವೀರಪ್ಪಜ್ಜ. ತಮಗೆ ತಿಳಿದದ್ದನ್ನು ತಮಗೆ ತಿಳಿದ ಭಾಷೆಯಲ್ಲಿ, ಅಂದರೆ ದೇಸಿ ಭಾಷೆಯಲ್ಲಿ ಹೇಳಿದ್ದಾರೆ. ವೀರಪ್ಪಜ್ಜನ ವಾಣಿ ಯಾವುದು ಹೌದು ಅದು ಅಲ್ಲ ಯಾವುದು ಅಲ್ಲ ಅದು ಹೌದು ಎಂಬ ದಿವ್ಯವಾಣಿಯ ನಿಗೂಢ ಅರ್ಥ ಅರಿಯಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ನಾನಾ ರೀತಿಯ ವಿಶ್ಲೇಷಣೆಗಳನ್ನು ಮಾಡಿದರೂ ಅದರ ನೀಜ ಅರ್ಥ ಮಾತ್ರ ತಿಳಿಯದಾಗಿದೆ. ವೀರಪ್ಪಜ್ಜನ ಪವಾಡಗಳನ್ನು ಮಾಡುವ ಮೂಲಕ ಜನಮಾನಸದಲ್ಲಿ ಚೀರಸ್ಥಾಯಿಯಾಗಿದ್ದಾನೆ ಎಂದರು.
ಡಾ. ಮಲ್ಲಿಕಾರ್ಜುನಯ್ಯ ಚಪ್ಪನ್ನಮಠ ಮಾತನಾಡಿ, ರಾಜ್ಯ ಸೇರಿದಂತೆ ಸುತ್ತಲಿನ ಹತ್ತಾರು ಬೇರೆ ರಾಜ್ಯಗಳಲ್ಲಿ ವೀರಪ್ಪಜ್ಜನ ಭಕ್ತರಿದ್ದು, ಅವರಿಗೆ ವೀರಪ್ಪಜ್ಜನ ಪವಾಡಗಳನ್ನು ಮುಟ್ಟಿಸುವ ಉದ್ದೇಶದಿಂದ ಇಂಗ್ಲಿಷ್ ಹಾಗೂ ಮರಾಠಿ ಭಾಷೆಯಲ್ಲಿ ಜೀವನ ಚರಿತ್ರೆಯನ್ನು ಮುದ್ರಿಸಲಾಗಿದೆ. ಇದರ ಸದುಪಯೋಗವನ್ನು ಭಕ್ತಾದಿಗಳು ಪಡೆದುಕೊಳ್ಳಬೇಕು ಎಂದರು. ದರೂರಿನ ಕೊಟ್ಟೂರು ದೇಶಿಕರು ಸಮ್ಮುಖ ವಹಿಸಿದ್ದರು. ಎಂ.ಎ. ಹಿರೇವಡೇಯರ, ಸಂಜಯ ಕುಲಕರ್ಣಿ, ಬಸಪ್ಪ ಯಕ್ಕುಂಡಿ, ಬಸವರಾಜ ಜಾಲಿಹಾಳ, ಬಿ.ಬಿ. ಮಲ್ಲನಗೌಡ್ರ, ಎಸ್.ಆರ್. ರಾಗಿ, ಎಸ್.ಎನ್. ದಿಂಡೂರ, ಅಣ್ಣಪ್ಪ ಜೋಳದ, ಸೋಮನಾಥ ಸಂಗನಾಳಮಠ, ರುದ್ರಯ್ಯ ಸಂಶಿಮಠ, ಶ್ರೀಪಾದ ಜೋಶಿ, ಬಸನಗೌಡ ಬಿಷ್ಟನಗೌಡ್ರ ಇದ್ದರು. ವಿಜಯಕುಮಾರ ಅಂಗಡಿ ಸಂಗೀತ ಸೇವೆ ಸಲ್ಲಿಸಿದರು. ಎಚ್.ಬಿ. ಶಿರಗುಂಪಿ ಸ್ವಾಗತಿಸಿದರು. ಎಂ.ಎಸ್. ಧಡೇಸೂರಮಠ ನಿರೂಪಿಸಿದರು. ಡಾ. ಎಲ್.ಎಸ್. ಗೌರಿ ವಂದಿಸಿದರು.

loading...