ಯುವಜನತೆ ಸಂಪ್ರದಾಯ ಉಳಿಸಿ-ಬೆಳೆಸಲಿ: ಡಾ. ಆನಂದ

0
7

ಕನ್ನಡಮ್ಮ ಸುದ್ದಿ-ಧಾರವಾಡ: ಇಂದಿನ ಮೊಬೈಲ್ ಮತ್ತು ಕಂಪ್ಯೂಟರಗಳನ್ನು ಅತಿಯಾಗಿ ಬಳಸುವ ನಮ್ಮ ಯುವಕ-ಯುವತಿಯರು ಮನೋಗ್ಲಾನಿಗಳಿಂದ ಬಳಲುತ್ತಿದ್ದಾರೆ ಎಂದು ಖ್ಯಾತ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಹೇಳಿದರು.
ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರತಿಷ್ಠಾನ ಉತ್ತರಾಧಿಮಠ ದತ್ತಿ ಕಾರ್ಯಕ್ರಮ ಅಂಗವಾಗಿ ಆಯೋಜಿಸಿದ್ದ ಸತ್ಯಪ್ರಮೋದ ಹರಿದಾಸ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಾಸ ಸಾಹಿತ್ಯದ ರೂಪಕ ಉದ್ಘಾಟನೆಗೊಳಿಸಿ ಮಾತನಾಡಿದರು. ಮನಮುಟ್ಟುವ, ಹೃದಯ ತಟ್ಟುವ, ಪರಿಶುದ್ಧವಾದ ಸುಶ್ರಾವ್ಯ ಸಂಗೀತ ಅನೇಕ ಮನೋವ್ಯಾಧಿಗಳನ್ನು ಗುಣಪಡಿಸುವುದು. ಹರಿದಾಸರ ಹಾಡುಗಳನ್ನು ಪಾಲಕರು ತಮ್ಮ ಮಕ್ಕಳಿಗೆ ಹೇಳಿಕೊಡುವುದರ ಮೂಲಕ ಸಂಪ್ರದಾಯ, ಸಂಸ್ಕಾರಗಳನ್ನು ಕೊಡುವುದರಿಂದ ಯಾವುದೇ ಮನೋರೋಗಗಳು ಕಾಡಲಾರವು ಎಂದರು. ಸಾಹಿತಿ ಶ್ರೀನಿವಾಸ ಕುಲಕರ್ಣಿ ಮಾತನಾಡಿ, ಕೇವಲ ಭೌತಿಕತೆಯೇ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಸುಹಾಸಿನಿಯರು ಅಲ್ಲಲ್ಲಿ ಭಜನಾ ಮಂಡಳಿ ರಚಿಸಿಕೊಂಡು ಹರಿದಾಸರ ಹಾಡುಗಳನ್ನು ಪ್ರಚುರಪಡಿಸುವುದರ ಮೂಲಕ ಸಂಪ್ರದಾಯಗಳನ್ನು ಉಳಿಸಿ-ಬೆಳೆಸಿಕೊಂಡು ಹೊರಟಿದುದು ಸಂತೋಷಕರ ಸಂಗತಿ ಎಂದರು. ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆವಹಿಸಿ ಮಾತನಾಡಿ, ಬ್ರಾಹ್ಮಣ ಹೆಂಗಳೆಯರು ನೂರಾರು ಸಂಖ್ಯೆಯಲ್ಲಿ ಸಂಘಟಿತರಾಗಿ ‘ಸಂಪ್ರದಾಯ-ಸಂಸ್ಕಾರ’ ಗಳನ್ನು ಮುಂದುವರೆಸುತ್ತಿರುವುದನ್ನು ಬೇರೆಯವರು ಅವರನ್ನು ಅನುಸರಿಸಬೇಕೆಂದು ಹೇಳಿದರು. ಕಾರ್ಯಕ್ರಮದ ಪೂರ್ವದಲ್ಲಿ ಹರಿದಾಸ ಮಹಿಳೆಯರ ಹಾಡುಗಳ ಸ್ಪರ್ಧೆ ಜರುಗಿತು. ಸತ್ಯಪ್ರಮೋದ ಹರಿದಾಸ ಪ್ರತಿಷ್ಠಾನದ ಅಧ್ಯಕ್ಷ ಎಸ್.ಬಿ. ಗುತ್ತಲ ದತ್ತಿ ಕುರಿತು ಮಾತನಾಡಿದರು.
ಕೃಷ್ಣ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ಉಡಿಕೇರಿ ಸ್ವಾಗತಿಸಿದರು. ಎಸ್.ಬಿ.ಗಾಮನಗಟ್ಟಿ ವಂದಿಸಿದರು. ಸತೀಶ ತುರಮರಿ ನಿರೂಪಿಸಿದರು.

loading...