ಖಾಕಿ ದರ್ಪಕ್ಕೆ ಸಾರ್ವಜನಿಕರ ಆಕ್ರೋಶ

0
87

ಪಿಎಸ್‌ಐ ಕುಮಾರ ಹಿತ್ತಲಮನಿ ವಿರುದ್ಧ ಕ್ರಮಕ್ಕೆ ಆಗ್ರಹ

ಕನ್ನಡಮ್ಮ ಸುದ್ದಿ
ಹಾರೂಗೇರಿ ೧೨: ನ್ಯಾಯ ಕೇಳಿ ಪುರಸಭೆಗೆ ಹೋದ ಸಾರ್ವಜನಿಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಜೊತೆಗೆ ಕಪಾಳಮೋಕ್ಷ ಮಾಡಿದ ಹಾರೂಗೇರಿ ಪಿಎಸ್‌ಐ ವರ್ತನೆ ಖಂಡಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಹಾರೂಗೇರಿ ಪುರಸಭೆ ವ್ಯಾಪ್ತಿಯ ಆಸ್ತಿ ನಂ.೫೮೨ರ ಉತಾರನಲ್ಲಿ ಮೂವರ ಹೆಸರುಗಳಿದ್ದು, ಮುಖ್ಯಾಧಿಕಾರಿ ಜಿ.ವಿ. ಹಣ್ಣಿಕೇರಿ ಅದರಲ್ಲಿನ ಇಬ್ಬರು ಸೋದರಿಯರ ಹೆಸರು ಕೈಬಿಟ್ಟು ಲಲಿತಾ ಸಿದ್ರಾಮ ನಾವಿ ಹೆಸರಿನಲ್ಲಿ ದಾಖಲು ಮಾಡಲಾಗಿದೆ. ಮೂಲ ಉತಾರನಲ್ಲಿರುವಂತೆ ಮೂವರ ಹೆಸರುಗಳನ್ನು ದಾಖಲು ಮಾಡುವಂತೆ ಆಗ್ರಹಿಸಿ ಶುಕ್ರವಾರ ಪುರಸಭೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲಾಗಿತ್ತು.
ಈ ವೇಳೆ ಪ್ರತಿಭಟನಾಕಾರರು ಮತ್ತು ಮುಖ್ಯಾಧಿಕಾರಿ ಜಿ.ವಿ. ಹಣ್ಣಿಕೇರಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಸ್ಥಳಕ್ಕಾಗಮಿಸಿದ ಹಾರೂಗೇರಿ ಠಾಣೆ ಪಿಎಸ್‌ಐ ಕುಮಾರ ಹಿತ್ತಲಮನಿ ಪ್ರತಿಭಟನೆ ನಡೆಸುತ್ತಿರುವವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಇಬ್ಬರಿಗೆ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನ್ಯಾಯಕ್ಕಾಗಿ ಪ್ರತಿಭಟನೆ ಮಾಡುವವರ ಮೇಲೆ ಬಲಪ್ರಯೋಗ ಮಾಡಿದ ಪಿಎಸ್‌ಐ ಕುಮಾರ ಹಿತ್ತಲಮನಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ರಕ್ಷಣೆ ನೀಡಬೇಕಾದ ಅಧಿಕಾರಿಗಳೇ ಕಾನೂನು ಉಲ್ಲಂಘನೆ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.
ಸದರೀ ಆಸ್ತಿಯಲ್ಲಿರುವ ಹೆಸರುಗಳನ್ನು ಬದಲಾವಣೆ ಮಾಡದಂತೆ ಕಲಾವತಿ ನಾವಿ ಪುರಸಭೆಗೆ ತಕರಾರು ಅರ್ಜಿ ಸಲ್ಲಿಸಿದ್ದರು. ನಂತರ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿತ್ತು. ನ್ಯಾಯಾಲಯದ ಆದೇಶವನ್ನೂ ಕಡೆಗಣಿಸಿ ಮುಖ್ಯಾಧಿಕಾರಿ ಜಿ.ವಿ. ಹಣ್ಣಿಕೇರಿ ಮೂಲ ಉತಾರನಲ್ಲಿನ ಜಂಟಿ ಹೆಸರುಗಳಲ್ಲಿ ಇಬ್ಬರನ್ನು ಕೈಬಿಟ್ಟು, ಒಬ್ಬರ ಹೆಸರಿಗೆ ದಾಖಲಿಸಿದ್ದಾರೆ. ಮೊದಲಿದ್ದಂತೆ ಮೂವರ ಹೆಸರುಗಳನ್ನು ಜಂಟಿಯಾಗಿ ದಾಖಲಿಸಬೇಕು. ಇಲ್ಲದಿದ್ದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ನೊಂದ ಮಹಿಳೆ ಕಲಾವತಿ ನಾವಿ ಎಚ್ಚರಿಸಿದ್ದಾರೆ.
..

loading...