ರಮೇಶ ಕತ್ತಿ ನಡೆ ಕಾಂಗ್ರೆಸ್ ಕಡೆ !

0
17

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಬಿಜೆಪಿ ಟಿಕೆಟ್ ಮಾಜಿ ಸಂಸದ ರಮೇಶ ಕತ್ತಿಗೆ ಕೊನೆಯ ಕ್ಷಣದಲ್ಲಿ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಮಾತುಗಳು ಜೋರಾಗಿ ಕೇಳಿಬರುತ್ತಿವೆ.


ಚಿಕ್ಕೋಡಿ ಲೋಕಸಭಾ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಂಸದ ರಮೇಶ ಕತ್ತಿ ಅವರಿಗೆ ಪಕ್ಷದ ವರಿಷ್ಠರು ಕೈಬಿಟ್ಟು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಚಿಕ್ಕೋಡಿ ಸದಲಗಾ ಕ್ಷೇತ್ರದಲ್ಲಿ ಸೋಲು ಕಂಡಿದ್ದ ಅಣ್ಣಾಸಾಹೇಬ ಜೊಲ್ಲೆಗೆ ಮಣೆ ಹಾಕಿರುವ ಹಿನ್ನೆಲೆಯಲ್ಲಿ ಕತ್ತಿ ಸಹೋದರರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಮೂಲಕ ಬಿಜೆಪಿಗೆ ಏ.4ರ ವರೆಗೆ ಗಡವು ನೀಡಿದ್ದಾರೆ. ಇತ್ತ ಟಿಕೆಟ್ ಘೋಷಣೆಯಾದ ಕೂಡಲೇ ಪ್ರಚಾರದ ಕಾರ್ಯ ಆರಂಭಿಸಿರುವ ಅಣ್ಣಾಸಾಹೇಬ ಹಾಗೂ ಚಿಕ್ಕೋಡಿ ಬಿಜೆಪಿ ಮುಖಂಡರ ವಿರುದ್ದ ಮುನ್ನಿಸಿಕೊಂಡಿರುವ ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಅವರ ಪುತ್ರ ಅಮಿತ್ ಕೋರೆ ಬಿಜೆಪಿ ತೋರೆದು ರಮೇಶ ಕತ್ತಿ ಅವರೊಂದಿಗೆ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ವಿಷಯ ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
ಮಾಜಿ ಸಂಸದ ರಮೇಶ ಕತ್ತಿ ಅವರಿಗೆ ಲೋಕಸಭಾ ಚುನಾವಣೆಗೆ ಕೊನೆಯ ಕ್ಷಣದ ವರೆಗೂ ಟಿಕೆಟ್ ನೀಡುವುದಾಗಿ ಬಿಜೆಪಿ ಹೇಳಿಕೊಂಡು ಬಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅಣ್ಣಾಸಾಹೇಬ ಜೊಲ್ಲೆಗೆ ಟಿಕೆಟ್ ನೀಡಿರುವುದರಿಂದ ಕತ್ತಿ ಸಹೋದರರಿಗೆ ಮುಖಭಂಗವಾಗಿದ್ದಂತೂ ಸತ್ಯ.
ಬಿಜೆಪಿ ವರಿಷ್ಠರ ನಡುವೆ ಮುನ್ನಿಸಿಕೊಂಡಿರುವ ಮಾಜಿ ಸಂಸದ ರಮೇಶ ಕತ್ತಿ ಅವರ ಬಂಡಾಯವನ್ನು ಕಾಂಗ್ರೆಸ್ ನಾಯಕರು ಸೂಕ್ಷ್ಮವಾಗಿ ಗಮನಿಸಿ ಪಕ್ಷಕ್ಕೆ ಬರಮಾಡಿಕೊಳ್ಳುವ ಸಿದ್ದತೆ ನಡೆಸಿದ್ದಾರೆ. ಇತ್ತ ರಮೇಶ ತಮ್ಮ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆದು ತಮ್ಮ ಮುಂದಿನ ರಾಜಕೀಯದ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಈಗಾಗಲೇ ಶನಿವಾರ ತಡರಾತ್ರಿ ಕಾಂಗ್ರೆಸ್‍ನ ನಾಯಕರು ಬಿಜೆಪಿಯ ಮಾಜಿ ಸಂಸದ ರಮೇಶ ಕತ್ತಿ ಅವರೊಂದಿಗೆ ಬೆಂಗಳೂರಿನಲ್ಲಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ರಮೇಶ ಕತ್ತಿ ಒಂದು ವೇಳೆ ಕಾಂಗ್ರೆಸ್‍ನಿಂದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ನಡೆಸಿದರೇ ಚಿಕ್ಕೋಡಿಯ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಕ್ಷೇತ್ರವನ್ನು ತ್ಯಾಗ ಮಾಡುತ್ತಾರೆಯೇ ಎನ್ನುವ ಪ್ರಶ್ನೆ ಉದ್ಬವಾಗಿದೆ.
ಬಿಜೆಪಿಯಿಂದ ಟಿಕೆಟ್ ಸಿಗಲಿಲ್ಲ ಎಂಬ ಕಾರಣದಿಂದ ಬಿಜೆಪಿಯಿಂದ ಕಾಂಗ್ರೆಸ್‍ಗೆ ರಮೇಶ ಕತ್ತಿ ಸೇರ್ಪಡೆಗೊಳ್ಳಲಿದ್ದಾರೆ. ಚಿಕ್ಕೋಡಿಯ ಬಿಜೆಪಿ ನಾಯಕರ ಮನಸ್ತಾಪದಿಂದ ಅಮಿತ್ ಕೋರೆಯೂ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎನ್ನುವ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ.

 

loading...