ಮೊದಲ ತ್ರಿ ಕಕ್ಷೀಯ ಉಪಗ್ರಹದ ಯಶಸ್ವಿ ಉಡಾವಣೆ : ಎಮಿಸ್ಯಾಟ್, 28 ವಿದೇಶೀ ಉಪಗ್ರಹ ಹೊತ್ತು ನಭಕ್ಕೆ ಚಿಮ್ಮಿದ ಪಿಎಸ್‌ಎಲ್‌ವಿ – ಸಿ 45

0
7

ಶ್ರೀಹರಿಕೋಟಾ, ಆಂಧ್ರಪ್ರದೇಶ:- ಮೂರು ಭಿನ್ನ ಕಕ್ಷೆಗಳಲ್ಲಿ ಏಕಕಾಲಕ್ಕೆ ಉಪಗ್ರಹಗಳನ್ನಿರಿಸುವ ಹೊಸ ತಂತ್ರಜ್ಞಾನದ ಮೊದಲ ಪ್ರಯೋಗ ಯಶಸ್ವಿಯಾಗಿದೆ.
ಇಸ್ರೋದ ಪಿಎಸ್‌ಎಲ್‌ವಿ – ಸಿ 45 ವಾಹಕದ ಮೂಲಕ 436 ಕೆಜಿ ತೂಕದ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಘ ಡಿಆರ್‌ಡಿಒದ ವಿದ್ಯುನ್ಮಾನ ಬೌದ್ಧಿಕ ಉಪಗ್ರಹ ಎಮಿಸ್ಯಾಟ್ ಮತ್ತು ಇತರ 28 ವಿದೇಶೀ ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡಲಾಯಿತು.
ಪಿಎಸ್ಎಲ್‌ವಿ ಸಿ 45 ವಾಹಕದ 47ನೇ ಉಡಾವಣೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ಇಂದು ಬೆಳಗ್ಗೆ 9.27 ಕ್ಕೆ ನಡೆಯಿತು. ಉಪಗ್ರಹ ನಭಕ್ಕೆ ಚಿಮ್ಮಿದ 17 ನಿಮಿಷಗಳ ಬಳಿಕೆ ಮುಖ್ಯ ಉಪಗ್ರಹ ಎಮಿಸ್ಯಾಟ್ ಅನ್ನು 98.376 ಡಿಗ್ರಿ ವಾಲುವಿಕೆಯೊಂದಿಗೆ 749 ಕಿಲೋಮೀಟರ್ ದೂರದ ಸೂರ್ಯ ಧ್ರುವೀಕರಣ ಕಕ್ಷೆಯಲ್ಲಿರಿಸಲಾಯಿತು.
ನಂತರ ಎರಡು ನಾಲ್ಕನೇ ಘಟ್ಟದ ಎಂಜಿನ್‌ (ಪಿಎಸ್ 4) ಮೂಲಕ 504 ಕಿಲೋಮೀಟರ್ ಕಕ್ಷೆಯಲ್ಲಿ ಎಲ್ಲಾ ವಿದೇಶೀ ಉಪಗ್ರಹಗಳನ್ನಿರಿಸಲಾಯಿತು. ಈ ಪೈಕಿ ಅಮೆರಿಕದ ಎಲ್ಲಾ 24 ಉಪಗ್ರಹಗಳು, ಲೂಥಿಯಾನದ ಎರಡು ಮತ್ತು ಸ್ಪೇನ್ ಹಾಗೂ ಸ್ವಿಡ್ಜರ್‌ಲೆಂಡ್‌ನ ತಲಾ ಒಂದು ಉಪಗ್ರಹ ಸೇರಿದ್ದು ಇದರ ಒಟ್ಟು ತೂಕ 220 ಕೆ.ಜಿ.ಯಷ್ಟಿತ್ತು. ಈ ಉಪಗ್ರಹಗಳನ್ನು ಉಡಾವಣೆಯಾದ 100 ನಿಮಿಷಗಳ ನಂತರ ಕಕ್ಷೆಯಲ್ಲಿರಿಸಲಾಯಿತು.

ನಾಲ್ಕನೇ ಘಟ್ಟದ ಎಂಜಿನ್‌ನಲ್ಲಿ ಇದೇ ಮೊದಲ ಬಾರಿಗೆ ಸೌರ ಪ್ಯಾನೆಲ್ ಅಳವಡಿಸಿದ್ದು 485 ಕಿಲೋಮೀಟರ್ ಕಕ್ಷೆಗೆ ಇಳಿಸಲಾಯಿತು. ಇದನ್ನು ಬಾಹ್ಯಾಕಾಶ ಪ್ರಯೋಗಗಳಿಗೆ ಕಕ್ಷೀಯ ವೇದಿಕೆಯಾಗಿ ಬಳಲಾಗುವುದು. ಇಲ್ಲಿ ಮುಂದಿನ ಆರು ತಿಂಗಳವರೆಗೆ ಮೂರು ವೈಜ್ಞಾನಿಕ ಸಾಧನಗಳ ಮೂಲಕ ಮಾಹಿತಿ ಸಂಗ್ರಹಿಸಲಾಗುವುದು.
ಇಡೀ ಉಡಾವಣೆ ಪ್ರಕ್ರಿಯೆ ಸುಮಾರು 150 ನಿಮಿಷಗಳ ಕಾಲ ನಡೆಯಿತು.
ಯಶಸ್ವಿ ಉಡಾವಣೆ ನಂತರ ವಿಜ್ಞಾನಿಗಳನ್ನುದ್ದೇಶಿಸಿ ಮಾತನಾಡಿದ ಇಸ್ರೋ ಅಧ್ಯಕ್ಷ ಡಾ.ಕೆ.ಸಿವನ್, ಇದನ್ನು ಸೂಕ್ತ ಮತ್ತು ಯಶಸ್ವಿ ಉಡಾವಣೆ ಎಂದು ಬಣ್ಣಿಸಿ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು.
ಶ್ರೀಹರಿಕೋಟಾದಲ್ಲಿ ಹೊಸದಾಗಿ ನಿರ್ಮಿಸಿರುವ ವೀಕ್ಷಕರ ಗ್ಯಾಲರಿ ಮೂಲಕ 1200 ಜನರು ಈ ಅಧ್ಬುತ ಉಡಾವಣೆಯನ್ನು ವೀಕ್ಷಿಸಿ ಸಂಭ್ರಮಿಸಿದರು. ಮುಂದಿನ ಉಡಾವಣೆ ವೀಕ್ಷಣೆಗೆ 5000 ಜನರಿಗೆ ಅವಕಾಶ ಮಾಡಲಾಗುವುದು ಎಂದು ಅವರು ತಿಳಿಸಿದರು.

loading...