ಬಿಜೆಪಿ ಮಾಡಿರುವ ಗಾಯಕ್ಕೆ ಕಾಂಗ್ರೆಸ್ ಪ್ರಣಾಳಿಕೆ ದಿವ್ಯ ಔಷಧ: ದಿನೇಶ್ ಗುಂಡೂರಾವ್

0
32

ಬೆಂಗಳೂರು:- ಲೋಕಸಭಾ ಚುನಾವಣೆಗೆ ಕಾಂಗ್ರೆಸ್‍ ಬಿಡುಗಡೆ ಮಾಡಿರುವ ಪ್ರಣಾಳಿಕೆ, ಕ್ರಾಂತಿಕಾರಕ ಹಾಗೂ ಐತಿಹಾಸಿಕವಾದುದು. ದೇಶವನ್ನು ಉಳಿಸುವ, ದೇಶಕ್ಕೆ ಬಿಜೆಪಿ ಮಾಡಿರುವ ಗಾಯಗಳನ್ನು ಗುಣಪಡಿಸುವ ಮತ್ತು ದೇಶವನ್ನು ಮತ್ತೆ ಒಗ್ಗೂಡಿಸುವ ಪ್ರಣಾಳಿಕೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ ಗುಂಡೂರಾವ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಇಂತಹ ಅತ್ಯುತ್ತಮ ಪ್ರಣಾಳಿಕೆಯನ್ನು ಯಾವ ಪಕ್ಷವೂ ಬಿಡುಗಡೆ ಮಾಡಿಲ್ಲ. ನಿರ್ದಿಷ್ಟ ಗುರಿ ಮತ್ತು ಸ್ಪಷ್ಟತೆ ಇರುವಂತಹ ಪ್ರಣಾಳಕೆ ಇದಾಗಿದೆ. ರಾಹುಲ್‍ ಗಾಂಧಿಯವರು ಎಲ್ಲಾ ರಾಜ್ಯಗಳ ಪ್ರವಾಸ ಮಾಡಿ, ಬುದ್ಧಿಜೀವಿಗಳು, ರೈತರು, ಯುವಕರು, ಮಹಿಳೆಯೊಂದಿಗೆ ಸಮಾಲೋಚಿಸಿದ ಬಳಿಕ ಇದನ್ನು ಸಿದ್ಧಪಡಿಸಿದ್ದಾರೆ. ಎಲ್ಲಾ ಕ್ಷೇತ್ರಗಳ ಸರ್ವಾಂಗೀಣ ಪ್ರಗತಿಗೆ ಪೂರಕವಾದ ಮತ್ತು ದೇಶ ಕಟ್ಟುವ ಸ್ಪಷ್ಟತೆ ಇರುವ ಒಂದು ‘ಡಾಕ್ಯುಮೆಂಟರಿ’ ಇದಾಗಿದೆ ಎಂದು ಬಣ್ಣಿಸಿದರು.
ಅಧಿಕಾರಕ್ಕೆ ಬರುವುದೇ ರಾಜಕೀಯ ಪಕ್ಷದ ಏಕೈಕ ಗುರಿಯಾಗಬಾರದು. ದೇಶದ ಐಕ್ಯತೆ, ಸಮಗ್ರತೆ ಕಾಪಾಡುವುದು ರಾಜಕೀಯ ಪಕ್ಷಗಳ ಜವಾಬ್ದಾರಿಯಾಗಬೇಕು ಎಂದು ಹೇಳಿದ ದಿನೇಶ್‍ ಗುಂಡೂರಾವ್‍, ಕಾಂಗ್ರೆಸ್‍ ಪ್ರಣಾಳಿಕೆ 2024ರವರೆಗೆ ಐದು ವರ್ಷಗಳಲ್ಲಿ ಅನುಷ್ಠಾನಗೊಳ್ಳಲಿದೆ. ಬಿಜೆಪಿ ಕಳೆದ ಐದು ವರ್ಷಗಳಲ್ಲಿ ದೇಶಕ್ಕೆ ಅಪಾರ ಘಾಸಿ ಮಾಡಿದೆ. ಇದಕ್ಕೆ ಈ ಪ್ರಣಾಳಿಕೆ ಸಾಂತ್ವನ ನೀಡಲಿದೆ. ಬಿಜೆಪಿ ಮಾಡಿದ ಗಾಯವನ್ನು ಗುಣಪಡಿಸಲಿದೆ ಎಂದು ಬಣ್ಣಿಸಿದರು.

ಬಿಜೆಪಿ ಆಡಳಿತದಲ್ಲಿ ದೇಶಕ್ಕೆ ಸಾಮಾಜಿಕವಾಗಿ ಅಪಾರ ಹಾನಿಯಾಗಿದೆ. ಗೋ ಹತ್ಯೆಯ ಹೆಸರಿನಲ್ಲಿ ಹಿಂಸೆ, ದಲಿತರು, ವಿದ್ಯಾರ್ಥಿಗಳ ಮೇಲೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ ನಡೆದಿದೆ. ಇವೆಲ್ಲವೂ ಹೋಗಲಾಡಿಸಲು ಈ ಪ್ರಣಾಳಿಕೆಗೆ ಸಾಧ್ಯವಾಗಲಿದೆ ಎಂದು ಹೇಳಿದರು.
ದೇಶ ಆರ್ಥಿಕವಾಗಿ ಜರ್ಜರಿತವಾಗಿದೆ. ಆದರೆ ಈ ವಿಷಯವನ್ನು ಮುಚ್ಚಿಡಲಾಗಿದೆ. ನೈಜ ಅಂಕಿ ಅಂಶಗಳನ್ನು ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ಹಣಕಾಸಿನ ಕೊರತೆ ಇವರು ಹೇಳುವುದಕ್ಕಿಂತ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಮೂರ್ಖತನದ ತೀರ್ಮಾನಗಳಿಂದ ದೇಶದ ಆರ್ಥಿಕತೆ ಕುಸಿದಿದೆ. ಬ್ಲಾಕ್‍ ಸಚಿವ ಅರುಣ್‍ ಜೇಟ್ಲಿಯವರ ನಿರುಪಯುಕ್ತ ತೀರ್ಮಾನಗಳು ದೇಶಕ್ಕೆ ಮಾರಕವಾಗಿವೆ.

ನೋಟು ಅಮಾನ್ಯೀಕರಣ, ಜಟಿಲ ಜಿಎಸ್‍ಟಿ ಕಾಯ್ದೆಯಿಂದಾಗಿ 4 ಲಕ್ಷ ಕೋಟಿ ರೂ. ದೇಶಕ್ಕೆ ನಷ್ಟವಾಗಿದೆ. ಯುಪಿಎ 1 ಮತ್ತು 2ರ ಅವಧಿಯಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಉತ್ತಮವಾಗಿತ್ತು. ಆದರೆ ಜಿಎಸ್‍ಟಿ ಜಾರಿಗೆ ತಂದ ಬಳಿಕ ಇದು ಕುಸಿತ ಕಂಡಿತು. ಬಿಜೆಪಿಯ ಆಡಳಿತದಿಂದ ಸಾಮಾಜಿಕ ಮತ್ತು ಆರ್ಥಿಕ ತಲ್ಲಣಗಳು ಉಂಟಾದವು ಎಂದು ಹರಿಹಾಯ್ದರು.ಇನ್ನು ಭದ್ರತೆ ವಿಷಯದಲ್ಲೂ ಬಿಜೆಪಿ ಸರ್ಕಾರ ವೈಫಲ್ಯ ಕಂಡಿದೆ. ಶಾಂತವಾಗಿದ್ದ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಯುಪಿಎ ಸರ್ಕಾರವಿದ್ದಾಗ ಕಾಶ್ಮೀರದಲ್ಲಿ ಸುಸೂತ್ರವಾಗಿ ಚುನಾವಣೆ ನಡೆದಿತ್ತು, ಉಗ್ರರ ಉಪಟಳವೂ ಕಡಿಮೆಯಾಗಿತ್ತು. ಆದರೆ ಬಿಜೆಪಿ ಸರ್ಕಾರದ ನಿಲುವುಗಳ ಪರಿಣಾಮದಿಂದಾಗಿ ಅಲ್ಲಿನ ಜನ ಅಭದ್ರತೆಯಿಂದ ಬದುಕುವಂತಾಗಿದೆ.
ಉಗ್ರರ ಚಟುವಟಿಕೆಗಳು ಕೂಡ ಹೆಚ್ಚಾಗಿವೆ. ಅತಿ ಹೆಚ್ಚಿನ ಸಾವು ನೋವುಗಳು ಕಳೆದ ಐದು ವರ್ಷಗಳಲ್ಲಿ ನಡೆದಿವೆ. ದೇಶಕ್ಕೆ ಬಾಹ್ಯ ಬೆದರಿಕೆ ಮತ್ತು ಆಂತರಿಕೆ ಬೆದರಿಕೆಯೂ ಹೆಚ್ಚಾಗಿದೆ ಎಂದು ದಿನೇಶ್‍ ಗುಂಡೂರಾವ್ ಟೀಕಾಪ್ರಹಾರ ನಡೆಸಿದರು.
ಗುಂಪು ಹತ್ಯೆ, ವಿಚಾರವಾದಿಗಳಾದ ಗೌರಿ, ಕಲಬುರ್ಗಿ, ಪನ್ಸಾರೆ ಹತ್ಯೆ ನಡೆದಿದೆ. ನಕ್ಸಲರ ಅಟ್ಟಹಾಸ ಹೆಚ್ಚಾಗಿವೆ. ಈಶಾನ್ಯ ರಾಜ್ಯಗಳಲ್ಲೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಜನ ಆಕ್ರೋಶಗೊಂಡು ಬೀದಿಗಿಳಿದಿದ್ದಾರೆ. ಈ ಎಲ್ಲಾ ಸಮಸ್ಯೆಗಳಿಗೆ ಕಾಂಗ್ರೆಸ್‍ ಪ್ರಣಾಳಿಕೆ ಪರಿಹಾರ ಒದಗಿಸಲಿದೆ ಎಂದು ದಿನೇಶ್ ‍ಹೇಳಿದರು.
ಕನಿಷ್ಠ ಆದಾಯ ಯೋಜನೆ (ನ್ಯಾಯ್‍)ಯನ್ನು ಬಿಜೆಪಿಯವರು ಟೀಕಿಸುತ್ತಿದ್ದಾರೆ. ಅದಕ್ಕೆ ಹಣ ಎಲ್ಲಿಂದ ತರುತ್ತಾರೆ ? ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಆದರೆ ನಾವು ಮೋದಿಯವರಂತೆ ಸುಳ್ಳು ಹೇಳುವುದಿಲ್ಲ. ಈ ಪ್ರಣಾಳಿಕೆ ಕೇವಲ ಪ್ರಣಾಳಿಕೆ ಮಾತ್ರವಲ್ಲ ಇದು ನಮ್ಮ ವಾಗ್ದಾನ ಎಂದು ರಾಹುಲ್‍ ಗಾಂಧಿಯವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಇದು ಔಪಚಾರಿಕ ಪ್ರಣಾಳಿಕೆಯಲ್ಲ. ಪ್ರಸಿದ್ಧ ಅರ್ಥಶಾಸ್ತ್ರಜ್ಞ ಡಾ.ಮನಮೋಹನ್‍ ಸಿಂಗ್, ಮಾಜಿ ಹಣಕಾಸು ಸಚಿವ ಚಿದಂಬರಂ ಅವರಂತಹ ಮೇಧಾವಿಗಳು ಕುಳಿತು ಚರ್ಚಿಸಿ ರೂಪಿಸಿದ ಯೋಜನೆಯಾಗಿದೆ. ಇದಕ್ಕೆ ಎಲ್ಲಿಂದ ಹಣ ಹೊಂದಿಸಬೇಕು ಎಂಬ ಸ್ಪಷ್ಟತೆ ಅವರಿಗಿದೆ. ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ. ಈ ಪ್ರಣಾಳಿಕೆಯ ಎಲ್ಲಾ ಅಂಶಗಳನ್ನು ಜಾರಿ ಮಾಡಿಯೇ ತೀರುತ್ತೇವೆ ಎಂದು ಅವರು ಹೇಳಿದರು.
ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ಕಾಂಗ್ರೆಸ್‍ ಬದ್ಧವಾಗಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಈ ಯೋಜನೆ ಜಾರಿಯಾಗಲಿದೆ. ಈ ಕಾಯ್ದೆ ಜಾರಿ ಮಾಡುವಂತೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು. ಮಾತ್ರವಲ್ಲ ರಾಜ್ಯಸಭೆಯಲ್ಲಿ ಮಸೂದೆಗೆ ಒಪ್ಪಿಗೆ ನೀಡುವುದಾಗಿ ಭರವಸೆ ನೀಡಿದ್ದರು. 2014ರ ಬಿಜೆಪಿಯ ಪ್ರಣಾಳಿಕೆಯಲ್ಲಿ ಈ ವಿಷಯ ಇದ್ದರೂ ಮೋದಿ ಸರ್ಕಾರ ಮಸೂದೆಯನ್ನು ಜಾರಿ ಮಾಡಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲ ಅಧಿವೇಶನದಲ್ಲೇ ಮಹಿಳಾ ಮೀಸಲಾತಿ ಕಾಯ್ದೆ ಜಾರಿಗೆ ಬರಲಿದೆ ಎಂದು ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರದ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಹೇಳಿದ ಅವರು, ಮೋದಿ ಸರ್ಕಾರ ಸಾಮಾಜಿಕವಾಗಿ ಪರಿಣಾಮ ಬೀರುವ ಒಂದೇ ಒಂದು ಯೋಜನೆಯನ್ನು ಜಾರಿಗೆ ತಂದಿಲ್ಲ. ಅದು ಜಾರಿಗೆ ತಂದ ಯೋಜನೆ ಸಾಮಾಜಿಕವಾಗಿ ದುಷ್ಟಪರಿಣಾಮ ಬೀರುವಂತಹದ್ದು. ನರೇಗಾ, ಆಹಾರ ಭದ್ರತೆ, ಶಿಕ್ಷಣದ ಹಕ್ಕು, ಮಾಹಿತಿ ಹಕ್ಕು ಮುಂತಾದ ಕ್ರಾಂತಿಕಾರಿ ಯೋಜನೆಗಳನ್ನು ಕಾಂಗ್ರೆಸ್ ಜಾರಿಗೆ ತಂದಿತ್ತು. ಆದರೆ ಬಿಜೆಪಿ ಇಂತಹ ಯಾವುದೇ ಒಂದು ಯೋಜನೆಯನ್ನೂ ಜಾರಿಗೆ ತಂದಿಲ್ಲ ಎಂದು ಟೀಕಿಸಿದರು.

 

loading...