ಅನಂತ್‌ನಾಗ್ ಕ್ಷೇತ್ರದಿಂದ ಮೆಹಬೂಬ ನಾಮಪತ್ರ ಸಲ್ಲಿಕೆ

0
11

ಅನಂತ್‌ನಾಗ್‌: ಅನಂತ್‌ನಾಗ್ ಲೋಕಸಭಾ ಕ್ಷೇತ್ರದಿಂದ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬ ಮುಫ್ತಿ ಬುಧವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಫ್ತಿ, ನನ್ನ ಮಾರ್ಗದರ್ಶಕರೂ, ಬೆಂಬಲಿಗರೂ ಆಗಿದ್ದ ನನ್ನ ತಂದೆ ನಿಧನರಾದ ಬಳಿಕ ನಾನು ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದೆ. ಆದಾಗ್ಯೂ, ಇಲ್ಲಿನ ಜನರು ಪಿಡಿಪಿ ಮೇಲೆ ವಿಶ್ವಾಸ ಹೊಂದಿದ್ದಾರೆ ಎಂದು ಹೇಳಿದರು.
ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಪಿಡಿಪಿ ವರಿಷ್ಠ ಹಾಗೂ ಮೆಹಬೂಬ ಅವರ ತಂದೆ 2016 ಜನವರಿ 7ರಂದು ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅನಂತ್‌ನಾಗ್ ಕ್ಷೇತ್ರದ ಹಾಲಿ ಸಂಸದರೂ ಆಗಿದ್ದ ಮುಫ್ತಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜ್ಯದ ಮುಖ್ಯಮಂತ್ರಿಯಾಗಿದ್ದರು.
ಆದರೆ ಈ ಕ್ಷೇತ್ರಕ್ಕೆ ಭದ್ರತಾ ಕಾರಣಗಳನ್ನು ಮುಂದಿಟ್ಟು ಉಪ ಚುನಾವಣೆಯನ್ನು ಇದುವರೆಗೆ ಘೋಷಿಸಿಲ್ಲ. ಇದರಿಂದ ಕಳೆದ ಮೂರು ವರ್ಷಗಳಿಂದ ಈ ಕ್ಷೇತ್ರ ಖಾಲಿ ಉಳಿದಿದೆ.

ನ್ಯಾಷನಲ್ ಕಾಂಗ್ರೆಸ್‌ ಈಗಾಗಲೇ ಅನಂತ್‌ನಾಗ್ ಕ್ಷೇತ್ರಕ್ಕೆ ಈಗಾಗಲೇ ನಿವೃತ್ತ ನ್ಯಾಯಮೂರ್ತಿ ಹುಸೈನ್‌ ಮಸೂದಿ ಅವರನ್ನು ಕಣಕ್ಕಿಲಿಸಿದೆ. ಕಾಂಗ್ರೆಸ್‌ ಇದುವರೆಗೆ ತನ್ನ ಅಭ್ಯರ್ಥಿಯ ಹೆಸರು ಪ್ರಕಟಿಸಿಲ್ಲ. ಈ ರಾಜ್ಯದಲ್ಲಿ ಏಪ್ರಿಲ್ 23, ಏಪ್ರಿಲ್ 29 ಮತ್ತು ಮೇ 6ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

loading...