ಗೋರ್ಖಾ ಮೋರ್ಚಾ ನಾಯಕರ ವಿರುದ್ಧ ಬಲವಂತದ ಕ್ರಮ ಬೇಡ: ಪ.ಬಂಗಾಳಕ್ಕೆ ಸುಪ್ರೀಂ ಸೂಚನೆ

0
35

ನವದೆಹಲಿ:-ತಲೆಮರೆಸಿಕೊಂಡಿರುವ ಗೋರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ನಾಯಕರಾದ ರೋಷನ್‌ ಗಿರಿ ಮತ್ತು ಬಿಮಲ್‌ ಗುರುಂಗ್ ಅವರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿರುವ ಸುಪ್ರೀಂಕೋರ್ಟ್‌, ಅವರಿಬ್ಬರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಕೋಲ್ಕತ್ತಾ ಹೈಕೋರ್ಟ್‌ಗೆ ಇಂದು ನಿರ್ದೇಶನ ನೀಡಿದೆ.

ಜಿಜೆಎಂ ನಾಯಕರು ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಅರ್ಜಿಗಳನ್ನು ವಿಚಾರಣೆ ನಡೆಸಿದ ಬಳಿಕ, ನ್ಯಾಯಮೂರ್ತಿ ಅರುಣ್‌ ಮಿಶ್ರಾ ಅವರನ್ನು ಒಳಗೊಂಡ ಪೀಠ ಈ ಆದೇಶ ನೀಡಿದೆ.
ಬಿಮಲ್ ಗುರುಂಗ್ ಮತ್ತು ರೋಷನ್‌ ಗಿರಿ ಅವರು ಸಲ್ಲಿಸಿದ್ದ ಅರ್ಜಿಗಳನ್ನು ನಾವು ಇತ್ಯರ್ಥಪಡಿಸಿದ್ದೇವೆ. ಕೋಲ್ಕತ್ತಾ ಹೈಕೋರ್ಟ್‌, ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಪೀಠ ಹೇಳಿದೆ.
ತಲೆಮರೆಸಿಕೊಂಡಿದ್ದ ಗಿರಿ ಮತ್ತು ಗುರುಂಗ್‌ ಅವರು ತಮಗೆ ಲೋಕಸಭಾ ಚುನಾವಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲು ಮೂರು ವಾರಗಳ ಕಾಲ ಮಧ್ಯಂತರ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು.
ಜಾಮೀನು ಅರ್ಜಿಯನ್ನು ಇತ್ಯರ್ಥ ಪಡಿಸುವಂತೆ ಕೋಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್
ನಿರ್ದೇಶನ ನೀಡಿದೆ. ಸುಪ್ರೀಂಕೋರ್ಟ್‌ ಮಂಗಳವಾರ ತೀರ್ಪು ಕಾಯ್ದಿರಿಸಿ, ಬುಧವಾರ ಪ್ರಕಟಿಸುವುದಾಗಿ ತಿಳಿಸಿತ್ತು.

loading...