ಲೋಕಸಭಾ ಚುನಾವಣೆ ಫಲಿತಾಂಶ ಬರುತ್ತಿದ್ದಂತೆ ಮೈತ್ರಿ ಸರ್ಕಾರ ಪತನದ ಟೈಂ ಬಾಂಬ್ ಸ್ಪೋಟಿಸಲಿದೆ: ಸಿ ಟಿ ರವಿ

0
9

ಬೆಂಗಳೂರು:- ದೇಶಾದ್ಯಂತ ನಡೆಯುತ್ತಿರುವ ಏಳು ಹಂತಗಳ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನದ ಟೈಂ ಬಾಂಬ್ ಸ್ಪೋಟವಾಗಲಿದೆ ಎಂದು ಬಿಜೆಪಿ ಹಿರಿಯ ಮುಖಂಡ ಸಿ ಟಿ ರವಿ ಭವಿಷ್ಯ ನುಡಿದಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಪತನಕ್ಕೆ ಟೈಂಬ್ ಫಿಕ್ಸ್ ಮಾಡಲಾಗಿದೆ. ಫಲಿತಾಂಶದ ಬಳಿಕವೇ ಇದು ಸ್ಪೋಟಗೊಳ್ಳಲಿದೆ ಎಂದರು.
ಕೇರಳದ ವಯನಾಡಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸಲು ಮುಂದಾಗಿರುವುದನ್ನು ಟೀಕಿಸಿದ ಸಿ.ಟಿ. ರವಿ, ಅಮೇಥಿಯಲ್ಲಿ ಸೋಲು ಖಚಿತವಾದ ನಂತರ, ಅವರಿಗೆ ದಕ್ಷಿಣ ರಾಜ್ಯಗಳ ನೆನಪಾಗಿದೆ. ವಾಸ್ತವವಾಗಿ ಅಲ್ಪಸಂಖ್ಯಾತರು ಹೆಚ್ಚಿರುವ ಮತ್ತು ಸುರಕ್ಷಿತ ಎಂಬ ಕಾರಣಕ್ಕೆ ಅವರು ಅವರು ಈ ಕ್ಷೇತ್ರ ಆರಿಸಿಕೊಂಡಿದ್ದಾರೆ. ಆದರೆ ವಾಸ್ತವವಾಗಿ ದಕ್ಷಿಣದ ಬಗ್ಗೆ ಕಾಂಗ್ರೆಸ್ ಗೆ ಕಿಂಚಿತ್ತೂ ಒಲವಿಲ್ಲ ಎಂದರು.
ದಕ್ಷಿಣ ರಾಜ್ಯಗಳು ಇಂದಿರಾ ಗಾಂಧಿ, ಸೋನಿಂಯಾಗಾಂಧಿ ಸೇರಿ ನೆಹರೂ ಕುಟುಂಬದವರನ್ನು ಗೆಲ್ಲಿಸಿದ್ದವು. ಆದರೆ,
ಅವರು ಗೆದ್ದ ನಂತರ ದಕ್ಷಿಣ ರಾಜ್ಯಗಳ ಅಭಿವೃದ್ಧಿಗೆ ಒತ್ತು ನೀಡಿಲ್ಲ. ಸೋನಿಯಾಗಾಂಧಿ ಅವರನ್ನು ಬಳ್ಳಾರಿ ಜನ
ಆರಿಸಿ ಕಳುಹಿಸಿದ್ದರೂ, ಗೆದ್ದ ಬಳಿಕ ಅವರು ರಾಜೀನಾಮೆ ಸಲ್ಲಿಸಿದರು. ಇದರಿಂದ ಬಳ್ಳಾರಿಗೆ ನೀಡಲಾಗಿದ್ದ ವಿಶೇಷ ಪ್ಯಾಕೇಜ್ ನ
ಭರವಸೆ, ಭರವಸೆಯಾಗಿಯೇ ಉಳಿದುಕೊಂಡಿದೆ ಎಂದರು.
ದಕ್ಷಿಣ ರಾಜ್ಯಗಳ ಬಗ್ಗೆ ಕಾಂಗ್ರೆಸ್ ಗೆ ನಿರ್ಲಕ್ಷ್ಯ ಭಾವನೆಯಿದೆ. ಸಣ್ಣ ವಿಷಯವನ್ನು ಮುಂದಿಟ್ಟುಕೊಂಡು ದೇವೇಗೌಡರನ್ನು ಕಾಂಗ್ರೆಸ್ ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿತು. ನಿಜಲಿಂಗಪ್ಪ, ದೇವರಾಜ ಅರಸು, ನೀಲಂ ಸಂಜೀವರೆಡ್ಡಿ, ಪಿ.ವಿ.ನರಸಿಂಹರಾವ್ ಸೇರಿದಂತೆ ಅನೇಕ ದಕ್ಷಿಣ ಭಾರತದ ಕಾಂಗ್ರೆಸ್ ನಾಯಕರನ್ನು ಕಡೆಗೆಣಿಸಿತು ಎಂದು ಹೇಳಿದರು.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ದಕ್ಷಿಣ ರಾಜ್ಯಗಳಿಗೆ 13ನೇ ಹಣಕಾಸು ಆಯೋಗದಲ್ಲಿ 3.62 ಲಕ್ಷ ಕೋಟಿ ರೂ. ಒದಗಿಸಿತ್ತು.
ಆದರೆ, ನರೇಂದ್ರ ಮೋದಿ ಸರ್ಕಾರ ದಕ್ಷಿಣದ ಐದು ರಾಜ್ಯಗಳಿಗೆ 9.13 ಲಕ್ಷ ಕೋಟಿ ರೂ. ಒದಗಿಸಿದೆ. ಈ ಎಲ್ಲ ಕಾರಣಗಳಿಂದ ದಕ್ಷಿಣವನ್ನು ಪ್ರತಿನಿಧಿಸುವ ಯಾವುದೇ ನೈತಿಕತೆಯನ್ನು ಕಾಂಗ್ರೆಸ್ ಉಳಿಸಿಕೊಂಡಿಲ್ಲ ಎಂದು ಸಿ.ಟಿ. ರವಿ ದೂರಿದರು.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಹುತೇಕ ಎಲ್ಲ ಸುಳ್ಳು ಭರವಸೆಗಳೇ ತುಂಬಿವೆ. ನ್ಯಾಯ್ ಯೋಜನೆಯಡಿ ಬಡವರಿಗೆ ಆದಾಯ
ಖಾತರಿ ಪಡಿಸುವುದಾಗಿ ರಾಹುಲ್‌ಗಾಂಧಿ ಹೇಳಿದ್ದಾರೆ. ಆದರೆ ಕಾಂಗ್ರೆಸ್ ಆಡಳಿತದ 55 ವರ್ಷಗಳಲ್ಲಿ ಬಡತನ ನಿರ್ಮೂಲನೆಯಾಗಿಲ್ಲ.
ಚುನಾವಣೆಗೋಸ್ಕರ ಕಾಂಗ್ರೆಸ್ ಮತಬ್ಯಾಂಕ್ ರಾಜಕಾರಣ ಮಾಡುತ್ತಾ ಬಂದಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರದ ಆಡಳಿತವಿದ್ದು, ಸತ್ತ ವ್ಯಕ್ತಿಯ ಕುಟುಂಬಕ್ಕೆ ಅಂತ್ಯ ಸಂಸ್ಕಾರಕ್ಕೆ ನೀಡುವ 5 ಸಾವಿರ ರೂ. ಹಣಕ್ಕೆ ಒಂದೂವರೆ ವರ್ಷ ಕಾಯಬೇಕಾದ ಸ್ಥಿತಿ ಇದೆ ಎಂದರು.
ಬಿಜೆಪಿ ಅಧಿಕಾರವಾಧಿಯಲ್ಲಿ ಉದ್ಯೋಗಗಳು ಖೋತಾ ಆಗಿವೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಆದರೆ, ಕಳೆದ ಆರು
ವರ್ಷಗಳಲ್ಲಿ ಕರ್ನಾಟಕದಲ್ಲಿ ಎಷ್ಟು ಹುದ್ದೆಗಳು ಭರ್ತಿಯಾಗದೇ ಉಳಿದಿವೆ? ಎಂಬುದಕ್ಕೆ ರಾಹುಲ್‌ಗಾಂಧಿ ಉತ್ತರಿಸಬೇಕು.
ದೇಶದ್ರೋಹಿಗಳಿಗೆ, ದೇಶವನ್ನು ವಿಭಜಿಸುವ ಶಕ್ತಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಐಪಿಸಿ 124 ನೇ ಸೆಕ್ಷನ್ ರದ್ದುಪಡಿಸುವುದಾಗಿ
ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಅದೇ ರೀತಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರನ್ನು ವಾಪಸ್ ಪಡೆಯುವುದಾಗಿ ಹೇಳಿದೆ. ಈ ಮೂಲಕ
ಪ್ರತ್ಯೇಕತಾವಾದಿಗಳಿಗೆ, ದೇಶದ್ರೋಹಿಗಳಿಗೆ ಕಾಂಗ್ರೆಸ್ ಬೆಂಬಲವಿದೆ ಎಂಬುದು ಅರ್ಥವಾಗುತ್ತದೆ. ಕಾಂಗ್ರೆಸ್ ಮುಳುಗುತ್ತಿರುವ
ಹಡಗಾಗಿದ್ದು, ಇದನ್ನು ದq ಸೇರಿಸಲು ರಾಹುಲ್ ಗಾಂಧಿ ಬರೀ ಸುಳ್ಳುಗಳ ಹೇಳುತ್ತಿದ್ದು, ಅವರು ಸುಳ್ಳು ಹೇಳುವ ಸಂಚಾರಿ ವಾಹನವಾಗಿದ್ದಾರೆ ಎಂದರು.
ಹಿಂದೂ ರಾಷ್ಟ್ರವಾಗಿಸಲು ಬಿಜೆಪಿ ನಾಯಕರು ಸಂಚು ರೂಪಿಸಿದ್ದಾರೆ ಎಂದು ಎಚ್.ಡಿ.ದೇವೇಗೌಡರು ಹೇಳಿದ್ದಾರೆ. ಆದರೆ,
ಭಾರತ ಹಿಂದೂ ರಾಷ್ಟ್ರವೇ ಆಗಿದ್ದು, ಇದರಲ್ಲಿ ಸಂಚು ರೂಪಿಸಬೇಕಾಗಿರುವುದು ಏನೂ ಇಲ್ಲ. ದೇವೇಗೌಡರು ಒಂದೊಂದು
ಸಮುದಾಯದ ಬಳಿ ಒಂದೊಂದು ರೀತಿ ಹೇಳುತ್ತಾರೆ ಎಂದರು.
ಬಿಜೆಪಿ ಸಹವಕ್ತಾರ ಎ.ಹೆಚ್.ಆನಂದ, ಬಿಜೆಪಿ ಮುಖಂಡರಾದ ಚಿ.ನಾ.ರಾಮು, ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

loading...