ಕಾಂಗ್ರೆಸ್ ಪ್ರಣಾಳಿಕೆ ರೀಲ್‍, ಬಿಜೆಪಿ ರಿಯಲ್‍: ಸಿ.ಟಿ. ರವಿ

0
13

ಬೆಂಗಳೂರು:- ಚುನಾವಣಾ ವೇಳೆ ಬರೀ ಸುಳ್ಳು ಭರಸೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಕಾಂಗ್ರೆಸ್‍ ಪ್ರಣಾಳಿಕೆ ರೀಲ್‍ ಆಗಿದ್ದು, ಕೊಟ್ಟ ಮಾತಿನಂತೆ ಭರವಸೆಗಳನ್ನು ಈಡೇರಿಸುವ ಸಂಕಲ್ಪದ ಬಿಜೆಪಿ ಪ್ರಣಾಳಿಕೆ ರಿಯಲ್‍ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ಲೇವಡಿ ಮಾಡಿದ್ದಾರೆ.

ಬಿಜೆಪಿ ಚುನಾವಣಾ ಮಾಧ್ಯಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ಮರಳುಮಾಡಿ ಮತ ಗಿಟ್ಟಿಸಿಕೊಳ್ಳುವ ಯತ್ನದಲ್ಲಿ ತೊಡಗಿದೆ. ಆದರೆ, ಬಿಜೆಪಿ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳ ಪೈಕಿ ಶೇ.90ರಷ್ಟು ಈಡೇರಿಸಿದೆ. ಕಾಂಗ್ರೆಸ್ ಅನೇಕ ಭರಸೆಗಳನ್ನು ನೀಡಿದೆ. ಆದರೆ, ಕಾಂಗ್ರೆಸ್ 100ರ ಗಡಿ ದಾಟುವುದಿಲ್ಲ ಎಂಬ ಮುನ್ಸೂಚನೆಗಳು ದೊರೆಯುತ್ತಿವೆ. ಕಾಂಗ್ರೆಸ್‍ಗೆ ಅಧಿಕಾರಕ್ಕೆ ಬರುವುದೇ ಕನಸಾಗಿರುವಾಗ ಪ್ರಣಾಳಿಕೆ ಹೇಗೆ ಜಾರಿ ಮಾಡುತ್ತದೆ? ಕಾಂಗ್ರೆಸ್‍ನದ್ದು ಭರವಸೆ, ಬಿಜೆಪಿಯದ್ದು ಸಂಕಲ್ಪವಾಗಿದೆ. ಕಾಂಗ್ರೆಸ್‍ಗೆ ವೋಟ್ ಮೊದಲು, ಬಿಜೆಪಿಗೆ ದೇಶ ಮೊದಲು ಎಂದರು.

ಕಾಂಗ್ರೆಸ್ ಅನ್ಯಾಯ ಮಾಡಿದ್ದರಿಂದಲೇ ನ್ಯಾಯ್ ಯೋಜನೆ ಪ್ರಕಟಿಸಿದೆ. ನೋಟು ಅಮಾನ್ಯೀಕರಣದಿಂದ ಸಾಕಷ್ಟು ಹಾನಿಯಾಗಿದೆ ಎಂದು ಸುಳ್ಳು ಪ್ರಚಾರದಲ್ಲಿ ಕಾಂಗ್ರೆಸ್ ತೊಡಗಿದೆ. ನೋಟು ಅಮಾನ್ಯೀಕರಣದಿಂದ ಹಣಕ್ಕೆ ವಾರಸುದಾರರು ಯಾರೆಂದು ಗೊತ್ತಾಗಿದೆ. ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಾಗಿದೆ. ಬೇನಾಮಿ ಕಂಪೆನಿಗಳಿಗೆ ಬೀಗ ಬಿದ್ದಿದೆ ಎಂದು ಹೇಳಿದರು.
ಲೋಕಸಭಾ ಚುನಾವಣೆ-2019ಗೆ ಬಿಜೆಪಿ ಬಿಡುಗಡೆ ಮಾಡಿರುವ ಸಂಕಲ್ಪ ಪತ್ರ, 75 ಭರವಸೆಗಳನ್ನು ಒಳಗೊಂಡಿದೆ. ದೇಶಾದ್ಯಂತ 6 ಕೋಟಿ ಜನರ ಅಭಿಪ್ರಾಯ, ಸಲಹೆಗಳನ್ನು ಪಡೆದು ಪ್ರಣಾಳಿಕೆ ಸಿದ್ದಪಡಿಸಲಾಗಿತ್ತು. ಪ್ರತಿ ಮನೆಯನ್ನು ಗುರಿಯಾಗಿಸಿಕೊಂಡು ಪ್ರಣಾಳಿಕೆ ರಚಿಸಲಾಗಿದೆ. 2030ರ ಒಳಗೆ ಭಾರತ ಸಂಪೂರ್ಣ ಬಡತನ ಮುಕ್ತವಾಗಲು ಅಲ್ಪಕಾಲೀನ ಮತ್ತು ದೀರ್ಘಕಾಲೀನ ಯೋಜನೆಗಳು ರೂಪಿಸಲಾಗುವುದು. ಎಲ್ಲ ವರ್ಗಗಳ ಕಲ್ಯಾಣ ಮತ್ತು ಹಿತಾಸಕ್ತಿ ಕಾಪಾಡುವ ಅಂಶಗಳು ಪ್ರಣಾಳಿಕೆಯಲ್ಲಿ ಒಳಗೊಂಡಿವೆ. ರೈತರು, ಶ್ರಮಿಕರು, ಅಸಂಘಟಿತ ವಲಯಗಳ ಕಾರ್ಮಿಕರ ಆದಾಯ ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಅಂಶವೂ ಸೇರಿದೆ ಎಂದು ಅವರು ಹೇಳಿದರು.
ಎಲ್ಲ ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳ ಮೂಲಕ ಒಂದು ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ, 60 ವರ್ಷ ದಾಟಿದ ರೈತರಿಗೆ ಮಾಸಿಕ ಪಿಂಚಣಿ ನೀಡುವ ಯೋಜನೆಗಳು ಐತಿಹಾಸಿಕ ಕ್ರಮಗಳಾಗಲಿವೆ. ಈ ಮೂಲಕ ಸ್ವಾಮಿನಾಥನ್ ವರದಿ ಅನುಷ್ಠಾನಗೊಳಿಸಲು ಬಿಜೆಪಿ ದಿಟ್ಟ ಹೆಜ್ಜೆ ಇಟ್ಟಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ 25 ಲಕ್ಷ ಕೋಟಿ ರೂ. ಒದಗಿಸುವ ಮೂಲಕ ಗ್ರಾಮೀಣ ಮತ್ತು ನಗರಗಳ ನಡುವಿನ ಅಂತರ ಕಡಿಮೆ ಮಾಡುವ ಸಂಕಲ್ಪವನ್ನು ಬಿಜೆಪಿ ಮಾಡಿದೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದೇಶದ್ರೋಹ ಕಾನೂನು ರದ್ದು ಪಡಿಸುವ, ಸಶಸ್ತ್ರ ಪಡೆಗಳ ವಿಶೇಷಾಧಿಕಾರ ವಾಪಸ್ ಪಡೆಯುವುದಾಗಿ ಹೇಳಲಾಗಿದೆ. ಆದರೆ, ಬಿಜೆಪಿ ಪ್ರಣಾಳಿಕೆಯಲ್ಲಿ ಭಯೋತ್ಪಾದನೆ ಬಗ್ಗೆ ಶೂನ್ಯ ಸಹನೆ ಪ್ರಕಟಿಸಲಾಗಿದ್ದು, ಸೇನೆಯ ಸಶಸ್ತ್ರೀಕರಣಕ್ಕೆ ವಿಶೇಷ ಒತ್ತುನೀಡಲಾಗಿದೆ. ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಸಂವಿಧಾನದ 370ನೇ ಹಾಗೂ 35 ಎ ವಿಧಿಗಳನ್ನು ಹಿಂತೆಗೆದುಕೊಳ್ಳುವ ದಿಟ್ಟ ನಿಲುವನ್ನೂ ತೆಗೆದುಕೊಳ್ಳಲಾಗಿದೆ. ಈ ಮೂಲಕ ಪ್ರತ್ಯೇಕತಾವಾದದ ಬೇರನ್ನೇ ಕಿತ್ತು ಹಾಕುವ ಸಂಕಲ್ಪ ಮಾಡಲಾಗಿದೆ ಎಂದರು.
ರಾಮಮಂದಿರ ನಿರ್ಮಾಣ ಬಿಜೆಪಿ ಸಂಕಲ್ಪ:
ರಾಮಮಂದಿರ ನಿರ್ಮಾಣ ಬಿಜೆಪಿ ಸಂಕಲ್ಪವಾಗಿದೆ. ಕಾಂಗ್ರೆಸ್ ಪಕ್ಷ ರಾಮ ಮಂದಿರ ನಿರ್ಮಾಣ ಕುರಿತ ವಿಚಾರಣೆಗಳಿಗೆ ನ್ಯಾಯಾಲಯ ತಡೆ ಒಡ್ಡುತ್ತಿದೆ. ಸಿದ್ದರಾಮಯ್ಯ ಅವರು ರಾಮಮಂದಿರವನ್ನು ಬಿಜೆಪಿ ನಿರ್ಮಾಣ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರಿಗೆ ರಾಮನ ಬಗ್ಗೆ ಅಸಹನೆ ಇದೆ. ಅವರ ಬ್ರೈನ್ ಸಾಫ್ಟ್ ವೇರ್ ಗೆ ವೈರಸ್ ಅಟ್ಯಾಕ್ ಆಗಿದೆ ಎಂದು ವ್ಯಂಗವಾಡಿದರು.
ಕಳೆದ ಐದು ವರ್ಷಗಳಲ್ಲಿ ಎಲ್ಲ ಮನೆಗಳಿಗೆ ವಿದ್ಯುತ್, ಶೌಚಾಲಯ, ಹಳ್ಳಿಗಳಿಗೆ ರಸ್ತೆ ಮುಂತಾದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಲಾಗಿದೆ. ಪೆಟ್ರೋಲ್ ಡೀಸೆಲ್ ದರ ಕಡಿಮೆಯಾಗಿದೆ. ಜಿಡಿಪಿ ವೃದ್ಧಿಸಿ, ಹಣದುಬ್ಬರ ಕಡಿಮೆಯಾಗಿದೆ. ದೇಶದ ಸದೃಢ ಅರ್ಥಿಕತೆ ಬಗ್ಗೆ ವಿಶ್ವಸಂಸ್ಥೆಯೇ ಪ್ರಶಂಸೆ ವ್ಯಕ್ತಪಡಿಸಿದೆ.
ರಾಜ್ಯಸಭೆಯಲ್ಲಿ ಬಹುಮತ ಬಂದರೆ ದೇಶ ಒಳತಿಯ ಅನೇಕ ಕಾನೂನು ಜಾರಿ:
ಸಮಾನ ನಾಗರಿಕ ಸಂಹಿತೆ ಬಿಜೆಪಿ ಸಂಕಲ್ಪವಾಗಿದೆ. ಇದಕ್ಕಾಗಿ ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು. 2020ರಲ್ಲಿ ರಾಜ್ಯಸಭೆಯಲ್ಲಿ ಬಿಜೆಪಿಗೆ ಬಹುಮತ ಬಂದರೆ ಸಂವಿಧಾನದ ಆಶಯಗಳಿಗೆ ಧಕ್ಕೆಯಾಗದಂತೆ ಸೂಕ್ತ ಕಾನೂನು ತಿದ್ದುಪಡಿ ಮೂಲಕ ಸಮಾನ ನಾಗರಿಕ ಸಂಹಿತೆ ಸೇರಿದಂತೆ ದೇಶಕ್ಕೆ ಒಳಿತಾಗುವ ಹಲವು ಕಾನೂನುಗಳನ್ನು ಜಾರಿಗೊಳಿಸಲಾಗುವುದು ಎಂದು ಸಿ.ಟಿ.ರವಿ ಹೇಳಿದರು.

loading...