ಪಂಜಾಬ್‌ ವಿರುದ್ಧ ಸೇಡು ತೀರಿಸಿಕೊಳ್ಳುವ ತುಡಿತದಲ್ಲಿ ಮುಂಬೈ

0
18

ಮುಂಬೈ:- ಕಳೆದ ಪಂದ್ಯದ ಗೆಲುವಿನ ವಿಶ್ವಾಸದಲ್ಲಿರುವ ಮುಂಬೈಇಂಡಿಯನ್ಸ್ ಹಾಗೂ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡಗಳು 12ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಎರಡನೇ ಬಾರಿ ನಾಳೆ ಮುಖಾಮುಖಿಯಾಗುತ್ತಿವೆ.
ಮೊಹಾಲಿಯಲ್ಲಿ ನಡೆದಿದ್ದ ಮೊದಲ ಹಣಾಹಣಿಯಲ್ಲಿ ಪಂಜಾಬ್‌ 8 ವಿಕೆಟ್‌ಗಳಿಂದ ಮುಂಬೈ ತಂಡವನ್ನು ಸೋಲಿಸಿತ್ತು. ಹಾಗಾಗಿ, ಮುಂಬೈ ನಾಳೆ ತವರು ಅಂಗಳದಲ್ಲಿ ಸೇಡು ತೀರಿಸಿಕೊಳ್ಳುವ ತುಡಿತದಲ್ಲಿ ಕಣಕ್ಕೆ ಇಳಿಯಲಿದೆ.
ಮುಂಬೈ ಇಂಡಿಯನ್ಸ್‌ ಇದುವರೆಗೂ ಆಡಿರುವ 5 ಪಂದ್ಯಗಳಲ್ಲಿ ಎರಡರಲ್ಲಿ ಸೋಲು ಅನುಭವಿಸಿದ್ದು, 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಗುಂಪು ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಆದರೆ, ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಆಡಿದ 6 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಸಾಧಿಸಿದ್ದು, ಎರಡರಲ್ಲಿ ಸೋಲು ಕಂಡಿದೆ. ಗುಂಪು ಪಟ್ಟಿಯಲ್ಲಿ ಮೂರನೇ ಕ್ರಮಾಂಕದಲ್ಲಿದೆ.
ಪಂಜಾಬ್‌ ಹಾಗೂ ಮುಂಬೈ ಮಾ.30 ರಂದು ಮೊಹಾಲಿಯಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 176 ರನ್‌ ಗಳಿಸಿತ್ತು. 177 ರನ್‌ ಗುರಿ ಬೆನ್ನತ್ತಿದ್ದ ಪಂಜಾಬ್‌, ಕೆ.ಎಲ್‌ ರಾಹುಲ್‌ ಅವರ ಅಜೇಯ 71 ರನ್‌ ಗಳ ಸಹಾಯದಿಂದ 8 ವಿಕೆಟ್‌ಗಳಿಂದ ಜಯ ಸಾಧಿಸಿತ್ತು.
ಸೋಮವಾರ ನಡೆದಿದ್ದ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲೂ ಕಿಂಗ್ಸ್ ಇಲೆವೆನ್‌ ಪಂಜಾಬ್‌ 6 ವಿಕೆಟ್‌ಗಳಿಂದ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಹೈದರಾಬಾದ್‌, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ 150 ರನ್‌ ದಾಖಲಿಸಿತ್ತು. 151 ರನ್‌ ಗುರಿ ಬೆನ್ನತ್ತಿದ ಪಂಜಾಬ್‌ 19.5 ಓವರ್‌ಗಳಲ್ಲಿ ದಡ ಸೇರಿತ್ತು.
ಪ್ರಸಕ್ತ ಪಂಜಾಬ್‌ ತಂಡದಲ್ಲಿ ಬಲಿಷ್ಠ ಬ್ಯಾಟಿಂಗ್‌ ಲೈನ್‌ ಅಪ್‌ ಇದೆ. ವಿಶ್ವಕಪ್‌ ಭಾರತ ತಂಡದ ರೇಸ್‌ನಲ್ಲಿರುವ ಕನ್ನಡಿಗ ಕೆ.ಎಲ್‌ ರಾಹುಲ್‌ ಅದ್ಭುತ ಲಯದಲ್ಲಿರುವುದು ಪಂಜಾಬ್‌ಗೆ ಇನ್ನಷ್ಟು ಬಲಬಂದಾಗಿದೆ. ರಾಹುಲ್‌ ಹೈದರಾಬಾದ್‌ ವಿರುದ್ಧದ ಕಳೆದ ಪಂದ್ಯದಲ್ಲಿ 53 ಎಸೆತಗಳಲ್ಲಿ ಅಜೇಯ 71 ರನ್‌ ಗಳಿಸಿ ಪಂಜಾಬ್‌ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇವರಿಗೆ ಸಾಥ್‌ ನೀಡಿದ್ದ ಮಯಾಂಕ್‌ ಅಗರ್ವಾಲ್‌ 55 ರನ್‌ ಗಳಿಸಿದ್ದರು. ಇವರ ಜತೆ ವಿಂಡೀಸ್‌ ದೈತ್ಯ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಹಾಗೂ ಡೇವಿಡ್‌ ಮಿಲ್ಲರ್‌ ಉತ್ತಮ ಲಯದಲ್ಲಿದ್ದು, ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಲಿದೆ.
ಯುವ ಆಲ್‌ರೌಂಡರ್‌ ಸ್ಯಾಮ್‌ ಕರ್ರನ್‌ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಮೂಲಕವು ತಂಡಕ್ಕೆ ನೆರವಾಗಲಿದ್ದಾರೆ. ಇದು ಪಂಜಾಬ್‌ಗೆ ಪ್ಲಸ್‌ ಪಾಯಿಂಟ್, ಇನ್ನೂ ವೇಗದ ಬೌಲಿಂಗ್‌ ವಿಭಾಗದಲ್ಲಿ ಹಿರಿಯ ವೇಗಿ ಮೊಹಮ್ಮದ್‌ ಶಮಿಗೆ ಅಂಕಿತ್‌ ರಜಪೂತ್ ಸಾಥ್‌ ನೀಡಲಿದ್ದಾರೆ. ಸ್ಪಿನ್‌ ವಿಭಾಗದಲ್ಲಿ ನಾಯಕ ಅಶ್ವಿನ್‌ ಜತೆ ಮುಜೀಬ್‌ ರಹಮಾನ್‌ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಇನ್ನೂ, ರೋಹಿತ್‌ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್‌, ಏ.6 ರಂದು ಸನ್‌ ರೈಸರ್ಸ್‌ ವಿರುದ್ಧ ಅವರ ತವರು ನೆಲವಾದ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ 40 ರನ್‌ ಗಳಿಂದ ಜಯ ಸಾಧಿಸಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ್ದ ಮುಂಬೈ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಕೇವಲ 136 ರನ್‌ಗಳಿಗೆ ಸೀಮಿತವಾಗಿತ್ತು. ಬಳಿಕ, ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಸನ್‌ರೈಸರ್ಸ್‌, 17.4 ಓವರ್‌ಗಳಲ್ಲಿ ಕೇವಲ 96 ರನ್‌ಗಳಿಗೆ ಸರ್ವ ಪತನವಾಗಿತ್ತು.
ಈ ಪಂದ್ಯದ ಗೆಲುವಿನ ರೂವಾರಿ ವೆಸ್ಟ್ ಇಂಡೀಸ್‌ನ ಯುವ ಪ್ರತಿಭೆ ಅಲ್ಜರಿ ಜೋಸೆಫ್‌. ಐಪಿಎಲ್‌ ಚೊಚ್ಚಲ ಪಂದ್ಯದಲ್ಲೇ ಜೋಸೆಫ್‌ 3.4 ಓವರ್‌ಗಳಲ್ಲಿ ಒಂದು ಮೆಡಿನ್‌, 12 ರನ್‌ ನೀಡಿ ಒಟ್ಟು 6 ವಿಕೆಟ್‌ ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮಾ ಇನ್ನೂ ಲಯಕ್ಕೆ ಬಾರದೆ ಇರುವುದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಕ್ವಿಂಟಾನ್‌ ಡಿ ಕಾಕ್‌, ಸೂರ್ಯ ಕುಮಾರ್‌ ಯಾದವ್‌ ಹಾಗೂ ಯುವರಾಜ್‌ ಸಿಂಗ್‌ ಸಮಯೋಜಿತ ಬ್ಯಾಟಿಂಗ್‌ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ.
ಅಗ್ರ ಕ್ರಮಾಂಕದಲ್ಲಿ ಹೇಳಿಕೊಳ್ಳುವಂತ ಬ್ಯಾಟಿಂಗ್‌ ಬಂದಿಲ್ಲ. ಆದರೆ, ಮಧ್ಯಮ ಕ್ರಮಾಂಕ ಬಲಿಷ್ಠವಾಗಿದೆ. ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ ಹಾಗೂ ಕಿರೋನ್‌ ಪೊಲಾರ್ಡ್‌ ಅವರು ತಂಡಕ್ಕೆ ಅಗತ್ಯಕ್ಕೆ ತಕ್ಕಂತೆ ನೆರವಾಗುತ್ತಿದ್ದಾರೆ.
ಬೌಲಿಂಗ್‌ ವಿಭಾಗದಲ್ಲಿ ಜಸ್ಪ್ರೀತ್ ಬೂಮ್ರಾ ಸಮಯೋಜಿತ ಬೌಲಿಂಗ್‌ ಮಾಡುವಲ್ಲಿ ಯಶಸ್ವಿಯಾಗಿದ್ದು, ಅವರಿಗೆ ಜೇಸನ್‌ ಬೆಹ್ರನ್‌ ಡ್ರಾಪ್‌ ಹಾಗೂ ಅಲ್ಜರಿ ಜೋಸೆಫ್‌ ಸಾಥ್‌ ನೀಡಲಿದ್ದಾರೆ. ಸ್ಪಿನ್ ವಿಭಾಗವನ್ನು ಕೃನಾಲ್‌ ಪಾಂಡ್ಯ ಹಾಗೂ ರಾಹುಲ್‌ ಚಾಹರ್‌ ನಿರ್ವಹಿಸಲಿದ್ದಾರೆ.
ಸಂಭಾವ್ಯ ಆಟಗಾರರು
ಮುಂಬೈ ಇಂಡಿಯನ್ಸ್‌:
ಯುವರಾಜ್ ಸಿಂಗ್, ರೋಹಿತ್ ಶರ್ಮಾ (ನಾಯಕ), ಕಿರೋನ್ ಪೊಲಾರ್ಡ್, ಜೇಸನ್ ಬೆಹ್ರನ್‌ಡ್ರಾಫ್‌, ಸೂರ್ಯಕುಮಾರ್ ಯಾದವ್, ಕ್ವಿಂಟನ್ ಡಿ ಕಾಕ್ (ವಿ.ಕೀ), ಜಸ್ಪ್ರಿತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಅಲ್ಜರಿ ಜೋಸೆಫ್‌, ಕೃನಾಲ್ ಪಾಂಡ್ಯ, ರಾಹುಲ್ ಚಾಹರ್.
ಕಿಂಗ್ಸ್‌ ಇಲೆವೆನ್‌ ಪಂಜಾಬ್‌:
ಕೆ.ಎಲ್‌. ರಾಹುಲ್ (ವಿ.ಕೀ), ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್, ಸರ್ಫರಾಜ್ ಖಾನ್, ಡೇವಿಡ್ ಮಿಲ್ಲರ್, ಮನ್ದೀಪ್ ಸಿಂಗ್, ಸ್ಯಾಮ್ ಕರ್ರನ್, ರವಿಚಂದ್ರನ್ ಅಶ್ವಿನ್, ಅಂಕಿತ್ ರಜಪೂತ್‌, ಮೊಹಮ್ಮದ್ ಶಮಿ, ಮುಜೀಬ್ ಉರ್ ರಹಮಾನ್.
ಸಮಯ: ನಾಳೆ ರಾತ್ರಿ 08:00

ಸ್ಥಳ: ವಾಂಖೆಡೆ ಕ್ರೀಡಾಂಗಣ, ಮುಂಬೈ

loading...