ಬೆಳ್ಳಂಬೆಳಗ್ಗೆ ಬಳ್ಳಾರಿಯಲ್ಲಿ ಆದಾಯ ತೆರಿಗೆ ದಾಳಿ

0
13

ಬೆಂಗಳೂರು:- ರಾಜ್ಯದ ಪ್ರಮುಖ ಎಂಟು ಲೋಕಸಭಾ ಕ್ಷೇತ್ರಗಳ ಚುನಾವಣೆಯ ಮೇಲೆ ರಾಜ್ಯ ಚುನಾವಣಾ ಆಯೋಗ ಹದ್ದಿನ ಕಣ್ಣು ಇಟ್ಟಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿರುವಾಗಲೇ ಇಂದು ಬೆಳ್ಳಂಬೆಳಗ್ಗೆ ಬಳ್ಳಾರಿಯ ಖಾಸಗಿ ಹೋಟೆಲ್‌ವೊಂದರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ನಾಯಕ ಅನಿಲ್ ಲಾಡ್ ತಂಗಿದ್ದ ಹೋಟೆಲ್‌ ಮೇಲೆ ದಾಳಿ ನಡೆದ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದಾರೆ.

ರಾಜ್ಯದ ಬಳ್ಳಾರಿ ಸೇರಿದಂತೆ ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ ಮತ್ತು ತುಮಕೂರು ಲೋಕಸಭಾ ಕ್ಷೇತ್ರಗಳಲ್ಲಿ ಭಾರೀ ಜಿದ್ದಾಜಿದ್ದಿನ ಸ್ಪರ್ಧೆ ಜೊತೆಗೆ ಹಣಬಲ, ತೋಳ್ಬಲ ಬಳಕೆಯಾಗಲಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ, ಈ ಎಂಟು ಕ್ಷೇತ್ರಗಳ ಆಗುಹೋಗುಗಳ ಬಗ್ಗೆ ನಿರಂತರವಾಗಿ ಗಮನಿಸುತ್ತಿದೆ.

ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಬಂಗಾರಪ್ಪ ಅವರ ಪುತ್ರರಾದ ಬಿ.ವೈ.ರಾಘವೇಂದ್ರ ಮತ್ತು ಮಧು ಬಂಗಾರಪ್ಪ ಕಣದಲ್ಲಿದ್ದಾರೆ.

ಇನ್ನು ತುಮಕೂರು, ಮಂಡ್ಯ, ಹಾಸನದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಅವರ ಇಬ್ಬರು ಮೊಮ್ಮೊಕ್ಕಳಾದ ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಕಣಕ್ಕಿಳಿದಿರುವುದರಿಂದ ಮೇಲಾಗಿ, ನಿಖಿಲ್ ಅವರ ತಂದೆ ಎಚ್‌.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗಿರುವುದರಿಂದ ಅಧಿಕಾರ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಆಯೋಗ ಹದ್ದಿನ ಕಣ್ಣು ಇಟ್ಟಿದೆ.

ಕಳೆದ ವಾರ ಮಂಡ್ಯ ಮತ್ತು ಹಾಸನ ಜಿಲ್ಲೆಯ ರಾಜಕಾರಣಿಗಳ ನೆಂಟರು, ಕೆಲವು ಅಧಿಕಾರಿಗಳ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು. ಇದು ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ – ಜೆಡಿಎಸ್ ನಾಯಕರು ಆರೋಪ ಮಾಡಿದ್ದರು. ಆದರೆ ಇದನ್ನು ಅಲ್ಲಗೆಳೆದಿರುವ ಐಟಿ ಅಧಿಕಾರಿಗಳು ಹಾಸನದ ಕೆಲವು ಅಧಿಕಾರಿಗಳ ಬ್ಯಾಂಕ್ ಲಾಕರ್ ನಿಂದ ಲೆಕ್ಕವಿರದ ಆರು ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡು ಇದರ ಬಗ್ಗೆ ಸೂಕ್ತ ವಿವರಣೆ ನೀಡುವಂತೆ ಸೂಚಿಸಿದ್ದರು.

loading...