ಬಾಲಾಕೋಟ್‌ ವೈಮಾನಿಕ ದಾಳಿ ಬಗ್ಗೆ ಮೋದಿ ಹೇಳಿಕೆ: ವರದಿ ಕೇಳಿದ ಆಯೋಗ

0
5

ನವದೆಹಲಿ-ಬಾಲಾಕೋಟ್‌ ವೈಮಾನಿಕ ದಾಳಿ ನಡೆಸಿದವರಿಗೆ ತಮ್ಮ ಮೊದಲ ಮತ ಅರ್ಪಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹೊಸ ಮತದಾರರಿಗೆ ಕೇಳಿಕೊಂಡ ವಿಷಯಕ್ಕೆ ಸಂಬಂಧಿಸಿ ಚುನಾವಣಾ ಆಯೋಗ ಸತ್ಯಾಸತ್ಯತೆ ಪರಿಶೀಲಿಸಲು ಮುಂದಾಗಿದ್ದು, ಈ ಸಂಬಂಧ ವರದಿ ನೀಡುವಂತೆ ಮಹಾರಾಷ್ಟ್ರದ ಚುನಾವಣಾ ಅಧಿಕಾರಿಗಳಿಗೆ ಸೂಚಿಸಿದೆ.
ರಕ್ಷಣಾ ಪಡೆಗಳ ಚಟುವಟಿಕೆಗಳನ್ನು ಯಾವುದೇ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸದಂತೆ ಚುನಾವಣಾ ಆಯೋಗ ಇತ್ತೀಚೆಗಷ್ಟೇ ಸಲಹೆ ನೀಡಿತ್ತು. ಇದೀಗ ಪ್ರಧಾನಿ ಹೇಳಿಕೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮುಖ್ಯ ಚುನಾವಣಾ ಅಧಿಕಾರಿ ಅವರಿಂದ ಈ ಸಂಬಂಧ ಆಯೋಗ ವರದಿ ಕೇಳಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ಮಹಾರಾಷ್ಟ್ರದ ಲಾತೂರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ, “ನಾನು ಮೊದಲ ಬಾರಿ ಮತ ಚಲಾಯಿಸುವವರಲ್ಲಿ ಕೇಳುತ್ತೇನೆ, ಬಾಲಾಕೋಟ್‌ ವೈಮಾನಿಕ ದಾಳಿ ನಡೆಸಿದ ಸೈನಿಕರಿಗೆ ನಿಮ್ಮ ಮೊದಲ ಮತ ಅರ್ಪಣೆ ಮಾಡುತ್ತೀರಾ ? . ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಹೆಸರಿನಲ್ಲಿ ನಿಮ್ಮ ಮೊದಲ ಮತ ಹಾಕುತ್ತೀರಾ ?” ಎಂದು ಕೇಳಿದ್ದರು.
ಪ್ರಧಾನಿಯವರ ಈ ಹೇಳಿಕೆಯನ್ನು ಕಾಂಗ್ರೆಸ್‌ ಮತ್ತು ಸಿಪಿಐಎಂ ಸೇರಿದಂತೆ ಇತರ ವಿರೋಧ ಪಕ್ಷಗಳು ಖಂಡಿಸಿದ್ದವು. ಇದು ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದವು.
ನಾವು ಚುನಾವಣಾ ಆಯೋಗಕ್ಕೆ ಹಲವು ದೂರುಗಳನ್ನು ಸಲ್ಲಿಸಿದ್ದೇವೆ. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈಗ ನ್ಯಾಯಾಲಯಕ್ಕೆ ಹೋಗಲು ನಮಗೆ ಸಮಯ ಇಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್‌ ಹೇಳಿದ್ದಾರೆ.
ಸೇನಾ ಪಡೆಗಳ ಹೆಸರಿನಲ್ಲಿ ಮತ ಕೇಳುವುದನ್ನು ತಡೆಯಬೇಕು ಎಂದು ಚುನಾವಣಾ ಆಯೋಗವನ್ನು ಸಿಪಿಐಎಂ ನಿನ್ನೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ದೂರಿನಲ್ಲಿ ಒತ್ತಾಯಿಸಿತ್ತು.

ಪಕ್ಷಪಾತದ ಚುನಾವಣಾ ಹಿತಾಸಕ್ತಿಗಳಿಗಾಗಿ ರಾಷ್ಟ್ರದ ಚಿಹ್ನೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಚುನಾವಣಾ ಪೂರ್ವ ವಾತಾವರಣವನ್ನು ಧ್ರುವೀಕರಣಗೊಳಿಸಿ ನೀತಿ ಸಂಹಿತೆ ಉಲ್ಲಂಘಿಸಲಾಗುತ್ತಿದೆ. ಇದರ ವಿರುದ್ಧ ಆಯೋಗ ಕಠಿಣ ಕ್ರಮಕೈಗೊಳ್ಳಬೇಕು ಎಂದು ಸಿಪಿಐಎಂ ಪಾಲಿಟ್‌ ಬ್ಯೂರೋ ಸದಸ್ಯ ನಿಲೋತ್‌ಪಾಲ್‌ ಬಸು ದೂರಿನಲ್ಲಿ ಒತ್ತಾಯಿಸಿದ್ದಾರೆ.

loading...