ನೀರಿನ ಅಭಾವ ನೀಗಿಸಿದ ತಹಶೀಲ್ದಾರ ಶಿವಾನಂದ

0
31

ಹಳಿಯಾಳ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ಊರಿನ ಸಮೀಪದಲ್ಲಿರುವ ಖಾಸಗಿಯವರ ಕೊಳವೆಬಾವಿ ನೀರನ್ನು ಪಡೆದು ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ ಶಿವಾನಂದ ಉಳ್ಳೇಗಡ್ಡಿ ತಿಳಿಸಿದ್ದಾರೆ.
8 ಗ್ರಾಮ ಪಂಚಾಯತಿಗಳ ಪೈಕಿ 17 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು ಅದನ್ನು ಬಗೆಹರಿಸಲು ತಾಲೂಕಾಡಳಿತ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಊರಿನ ಸಮೀಪದಲ್ಲಿರುವ ತಮ್ಮ ಗದ್ದೆಗಳಲ್ಲಿ ನೀರಾವರಿಗಾಗಿ ವ್ಯವಸ್ಥೆ ಮಾಡಿಕೊಂಡಿರುವ ಕೊಳವೆಬಾವಿಗಳ ರೈತರ ಜೊತೆ ಮಾತುಕತೆ ನಡೆಸಿ ಅವರ ಕೊಳವೆಬಾವಿ ನೀರನ್ನು ಗ್ರಾಮಸ್ಥರ ಕುಡಿಯುವ ಹಾಗೂ ನಿತ್ಯ ಬಳಕೆಯ ನೀರಿನ ಅವಶ್ಯಕತೆ ಪೂರೈಸಲು ಬಳಸಲಾಗುತ್ತಿದೆ. ಊರಿನ ಸಮೀಪದಲ್ಲಿರುವ ಅಂತಹ ಕೊಳವೆಬಾವಿಗಳಿಂದ ನೀರನ್ನು ಪೈಪ್‌ಲೈನ್‌ ಮೂಲಕ ಪಡೆದುಕೊಂಡು ಊರಿನಲ್ಲಿ ಸಿಂಟೆಕ್ಸ್‌ ಟ್ಯಾಂಕ್‌ ಅಳವಡಿಸಿ ಗ್ರಾಮಸ್ಥರಿಗೆ ವಿತರಿಸಲಾಗುತ್ತಿದೆ. ಖಾಸಗಿಯವರು ತಮ್ಮ ಕೊಳವೆಬಾವಿ ನೀರು ನೀಡಿದ್ದಕ್ಕೆ ಪ್ರತಿಯಾಗಿ ಸರ್ಕಾರ ನಿಗದಿಸಿದಂತೆ ಭಾಡಿಗೆಯನ್ನು ಕೊಡ ಮಾಡಲಾಗುತ್ತಿದೆ.
ಕೆಲ ಗ್ರಾಮಗಳಲ್ಲಿ ಅಂತರ್ಜಲ ಕುಸಿದಿರುವ ಕಾರಣ ಗ್ರಾಮ ಪಂಚಾಯತಿಗಳ ಮೂಲಕ ನೀರು ಸರಬರಾಜು ಮಾಡುವ ಕೊಳವೆಬಾವಿಗಳಲ್ಲಿ ನೀರು ಲಭ್ಯವಾಗದ ಕಾರಣ ಖಾಸಗಿಯವರ ಬೋರವೆಲ್‌ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಊರಿನ ಸಮೀಪದಲ್ಲಿ ಕೊಳವೆಬಾವಿ ಹೊಂದಿರುವ ರೈತರ ಸಹಕಾರದಿಂದ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಬರದಂತೆ ವಿಶೇಷ ನಿಗಾವಹಿಸಲಾಗಿದೆ. ಜಿಲ್ಲಾಧಿಕಾರಿಗಳ ಸ್ಪಷ್ಟ ಸೂಚನೆಯಂತೆ ತಾವು ಆಯಾ ಗ್ರಾಮ ಪಂಚಾಯತ ವ್ಯಾಪ್ತಿಗೆ ತೆರಳಿ ಅಲ್ಲಿನ ಪಿಡಿಓ, ಸ್ಥಳೀಯ ಪ್ರಮುಖರು ಹಾಗೂ ಖಾಸಗಿ ಬೋರವೆಲ್‌ ಮಾಲೀಕರೊಂದಿಗೆ ಮಾತುಕತೆ ಮಾಡಿ ಅವರ ಮನವೊಲಿಸಿ ಹಳ್ಳಿಗರ ನೀರಿನ ದಾಹವನ್ನು ನೀಗಿಸುವ ಕಾರ್ಯ ಮಾಡಿರುವುದಾಗಿ ತಹಶೀಲ್ದಾರ ಶಿವಾನಂದ ಉಳ್ಳೇಗಡ್ಡಿ ಹೇಳಿದ್ದಾರೆ.

loading...