ಸಿಜೆಐ “ಸಿಲುಕಿಸುವ” ಪಿತೂರಿ ಆರೋಪ; ತನ್ನಆದೇಶ ಅಪರಾಹ್ನದ ವರೆಗೆ ಕಾಯ್ದಿರಿಸಿದ ಸುಪ್ರೀಂ

0
26

ನವದೆಹಲಿ:- ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುಖ್ಯನ್ಯಾಯಮೂರ್ತಿ ರಂಜನ್ ಗೋಗೊಯ್ ಅವರನ್ನು “ಸಿಲುಕಿಸಲು” ಪಿತೂರಿ ನಡೆಸಲಾಗಿದೆ ಎಂದು ವಕೀಲರೊಬ್ಬರು ಮಾಡಿರುವ ಆರೋಪ ಸಂಬಂಧ ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಇಂದು ಅಪರಾಹ್ನ 2 ಗಂಟೆಗಳ ವರೆಗೆ ಕಾಯ್ದಿರಿಸಿದೆ.
ಮುಖ್ಯನ್ಯಾಯಮೂರ್ತಿ ಅವರ ವಿರುದ್ಧ ಇಂತಹ ಆರೋಪಗಳನ್ನು ಹೊರಿಸಲು ನೆರವಾಗುವಂತೆ ತಮಗೆ ಭಾರಿ ಮೊತ್ತದ ಹಣ ನೀಡುವ ಅಮಿಷ ಒಡ್ಡಲಾಗಿತ್ತು ಎಂದು ವಕೀಲ ಉತ್ಸವ್ ಬೈನ್ಸ್ ಆರೋಪಿಸಿದ್ದರು.
ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ, ವಕೀಲ ಉತ್ಸವ್ ಬೈನ್ಸ್, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರನ್ನು, ಆರೋಪ ಕುರಿತಂತೆ ವಿಚಾರಣೆ ನಡೆಸಿ, ಈ ಸಂಬಂಧ ತನ್ನ ಆದೇಶವನ್ನು ಅಪರಾಹ್ನ 2 ಗಂಟೆಗೆ ಪ್ರಕಟಿಸುವುದಾಗಿ ತಿಳಿಸಿದೆ.
ಇದು ತುಂಬಾ ಗಂಭೀರವಾದ ವಿಷಯವಾಗಿದೆ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ಈ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟರು.
ನಮ್ಮನ್ನು ಯಾವುದೇ ಶಕ್ತಿ ರಿಮೋಟ್ ಕಂಟ್ರೋಲ್ ನಂತೆ ಬಳಸಲು ಸಾಧ್ಯವಿಲ್ಲ, ಈ ಆರೋಪದಿಂದ ನಮಗೆ ತೀವ್ರ ನೋವಾಗಿದೆ, ಇಂತಹ ಆರೋಪಗಳಿಂದ ನ್ಯಾಯಾಂಗ ವ್ಯವಸ್ಥೆ ಬದುಕುಳಿಯಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಮಿಶ್ರಾ ಬೇಸರದಿಂದ ನುಡಿದರು.
ವಕೀಲ ಉತ್ಸವ್ ಬೈನ್ಸ್, ಪ್ರಕರಣ ಕುರಿತಂತೆ ಬೃಹತ್ ಪ್ರಮಾಣ ವಿವರ ಬಹಿರಂಗಪಡಿಸಿದರೆ, ಸರ್ಕಾರದ ಉತ್ತರವೇನು ಎಂದು ನ್ಯಾಯಪೀಠ ಅಟಾರ್ನಿ ಜನರಲ್ ಅವರನ್ನು ಕೋರಿದಾಗ, ದಾಖಲೆಗಳನ್ನು ಹಾಜರುಪಡಿಸುವಂತೆ ಸಮೆನ್ಸ್ ಹೊರಡಿಸುವ ಅಧಿಕಾರ ಸುಪ್ರೀಂ ಕೋರ್ಟ್ ಗೆ ಇದೆ ಎಂದು ಆಟಾರ್ನಿ ಜನರಲ್ ಹೇಳಿದರು.ಕಳೆದ ಮೂರು -ನಾಲ್ಕು ವರ್ಷಗಳಿಂದ ನ್ಯಾಯಾಂಗವನ್ನು ಗುರಿಯಾಗಿಸಿ ನಡೆಸಲಾಗುತ್ತಿರುವ ದಾಳಿಗಳ ಕುರಿತು ನ್ಯಾಯಮೂರ್ತಿ ಮಿಶ್ರಾ ತೀವ್ರ ಕಳವಳ ವ್ಯಕ್ತಪಡಿಸಿದರು
ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಅವರು ಕಳೆದ ವರ್ಷದ ಅಕ್ಟೋಬರ್ ನಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ನ ಮಾಜಿ ಮಹಿಳಾ ಕಿರಿಯ ಸಹಾಯಕಿಯೊಬ್ಬರು ಅಪೆಕ್ಸ್ ನ್ಯಾಯಾಲಯದ 22 ನ್ಯಾಯಮೂರ್ತಿಗಳಿಗೆ ದೂರು ಸಲ್ಲಿಸಿದ್ದರು.

loading...