ದಾಂಡೇಲಿ-ಹೊನ್ನಾವರ ಬಸ್ಸಿನ ಸ್ಥಿತಿ ಕೇಳುವವರು ಯಾರಣ್ಣ?

0
118

 

ಕನ್ನಡಮ್ಮ ಸುದ್ದಿ-ದಾಂಡೇಲಿ: ದಾಂಡೇಲಿ ಸಾರಿಗೆ ಘಟಕದ ಪ್ರಮುಖ ಲಕ್ಷಿö್ಮಪುತ್ರ ಬಸ್ಸಾಗಿರುವ ದಾಂಡೇಲಿ- ಹೊನ್ನವಾರ ಬಸ್ ಸ್ಥಿತಿ ಮಾತ್ರ ಯಾತನಮಯ. ದಾಂಡೇಲಿಯಿಂದ ಯಲ್ಲಾಪುರ, ಅಂಕೋಲಾ ಮಾರ್ಗವಾಗಿ ಹೊನ್ನಾವರಕ್ಕೆ ಹೋಗಿ ಬರುವ ಈ ಬಸ್ಸು ಅತ್ಯಂತ ಹಳೆಯದ್ದಾಗಿದ್ದು, ಈ ಬಸ್ಸನಲ್ಲಿ ಸಂಚರಿಸುವವರು ಮಾತ್ರ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ದಾಂಡೇಲಿ ಘಟಕದಿಂದ ಬಿಡಲ್ಪಡುವ ಬಸ್ (ಕೆ.ಎ.೨೫-ಎಪ್-೩೦೦೧) ಇದಾಗಿದ್ದು ಇದು ಅತ್ಯಂತ ಹಳೆಯ ರೂಟ್. ಕಳೆದ ಹತ್ತಿಪ್ಪತ್ತು ವರ್ಷಗಳಿಂದಲೂ ಈ ಬಸ್ ಈ ಮಾರ್ಗದಲ್ಲಿ ಸಂಚರಿಸುತ್ತದೆ. ದಾಂಡೇಲಿಯಿಂದ ಯಲ್ಲಾಪುರ ಮಾರ್ಗವಾಗಿ ಹೋಗಿ ಬರುವ ಹಾಗೂ ಈ ಭಾಗದ ಸಂಪರ್ಕ ಕಲ್ಪಿಸುವ ಏಕೈಕ ಬಸ್ ಇದಾಗಿದ್ದು, ಈ ಬಸ್‌ನಲ್ಲಿ ಸಾಕಷ್ಟು ಪ್ರಯಾಣಿಕರು ಸಂಚರಿಸುತ್ತಾರೆ. ನಿತ್ಯ ಆದಾಯವೂ ಸಾಕಷ್ಟಿದೆ. ಆದರೆ ಬಸ್ ಮಾತ್ರ ಸರಿಯಾಗಿಲ್ಲ.

ಮುಂಜಾನೆ ೭ ಗಂಟೆಗೆ ದಾಂಡೇಲಿಯಿಂದ ಬಿಡಲ್ಪಡುವ ಈ ಬಸ್ ಮದ್ಯಾಹ್ನ ಹೊನ್ನಾವರ ತಲುಪಿ ಮತ್ತೆ ಅಲ್ಲಿಂದ ಮರಳಿ ಸಂಜೆ ೬ ಗಂಟೆಗೆ ದಾಂಡೇಲಿ ತಲುಪುತ್ತದೆ. ಆದರೆ ಈ ಬಸ್ಸು ಮಾತ್ರ ವೇಗ ಪಡೆದುಕೊಳ್ಳುವುದೇ ಇಲ್ಲ. ಅಂಕೋಲಾದಿಂದ ದಾಂಡೇಲಿ ಬರಲು ಬಸ್ ಒಂದಕ್ಕೆ ಹೆಚ್ಚೆಂದರೆ ಮೂರು ಗಂಟೆಯ ಅವಧಿ ಸಾಕು. ಆದರೆ ಈ ಬಸ್‌ನಲ್ಲಿ ಬಂದರೆ ನಾಲ್ಕು ಗಂಟೆಗೂ ಹೆಚ್ಚಿನ ಪ್ರಯಾಣವಾಗುತ್ತದೆ. ಅರಬೈಲ್ ಘಾಟ್ ಏರಲು ಈ ಬಸ್ ಹರ ಸಾಹಸ ಪಡುತ್ತದೆ. ಆಮೆಯಂತೆ ಸಂಚರಿಸುವ ಈ ಬಸ್‌ನಲ್ಲಿ ಕುಳಿತ ಪ್ರಯಾಣಿಕರು ಮಾತ್ರ ಬಸ್‌ನ ಅವಸ್ಥೆ ಕಂಡು ಸುಸ್ತಾಗಿ ಹೋಗುತ್ತಾರೆ. ಹಾಗೆಂದು ಇದು ಚಾಲಕ ನಿರ್ವಾಹಕರ ತಪ್ಪಲ್ಲ. ಬಸ್ಸಿನ ದುಸ್ಥಿತಿಯೇ ಹಾಗಿದೆ. ಇರುವ ಚಾಲಕ ಪರಿಣಿತ ಹಾಗೂ ಅನುಭವಿಯೇ ಆಗಿದ್ದಾನೆ. ಆತ ಏನು ಮಾಡಿದರೂ ಬಸ್ ಮಾತ್ರ ವೇಗ ಪಡೆದುಕೊಳ್ಳುವುದೇ ಇಲ್ಲ. ಈ ಚಾಲಕ ಕೂಡಾ ಹೊಸ ಬಸ್ ನೀಡಿ ಎಂದು ಬಹಳ ವರ್ಷಗಳಿಂದ ಕೇಳುತ್ತಲೇ ಇದ್ದಾರೆ. ಆದರೆ ಸಾರಿಗೆ ಇಲಾಖೆ ಮಾತ್ರ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಲೇ ಇಲ್ಲ.
ಒಮ್ಮೆ ಈ ಪ್ರಯಾಣಿಸಿದವರು ಮತ್ತೊಮ್ಮೆ ಪ್ರಯಾಣಿಸಲು ಮನಸ್ಸು ಮಾಡುವುದಿಲ್ಲ. ಇದು ಮುಂದುವರೆದರೆ ಬಸ್‌ನ ಆದಾಯ ಕೂಡಾ ಕಡಿಮೆಯಾಗುವ ಸಾದ್ಯತೆ ಕೂಡಾ ಇಲ್ಲದಿಲ್ಲ. ದಾಂಡೇಲಿ-ಕಾರವಾರ-ಹೊನ್ನಾವರ ಬಸ್‌ನದ್ದೂ ಇದೇ ದುಸ್ಥಿತಿ ದಾಂಡೇಲಿಯಿಂದ ಕಾರವಾರ ಮಾರ್ಗವಾಗಿ ಹೊನ್ನಾವರಕ್ಕೆ ಇನ್ನೊಂದು ಬಸ್ ಇದೆ. ಇದರ ದುಸ್ಥಿತಿ ಕೂಡಾ ಅದೇ ಆಗಿದೆ. ಈ ಎರಡೂ ಡಕೋಟಾ ಬಸ್‌ಗಳನ್ನು ಬದಲಾಯಿಸಿ ಹೊಸ ಬಸ್ ನೀಡಬೇಕೆಂಬುದು ಪ್ರಯಾಣಿಕರ ಒತ್ತಾಯವಾಗಿದೆ. ಸಾರಿಗೆ ಇಲಾಖೆ ಆದಷ್ಟು ಬೇಗ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಬೇಕಾಗಿದೆ.

loading...