ಗಾಳಿಯ ಅಲೆಗೆ ಮನೆಯ ಛಾವಣಿಗಳು ತತ್ತರ

0
36

ಹಳಿಯಾಳ: ಶನಿವಾರ ಸಂಜೆ ಬೀಸಿದ ದೊಡ್ಡ ಗಾಳಿಗೆ ತೇರಗಾಂವ ಗ್ರಾಮದಲ್ಲಿ ೧೧ ಮನೆಗಳ ಛಾವಣಿಗಳು ಹಾರಿಹೋಗಿದ್ದು ಮರುದಿನ ರವಿವಾರ ಅವುಗಳನ್ನು ಸರಿಪಡಿಸಲು ಆಯಾ ಕುಟುಂಬದವರು ಹೆಣಗಾಟ ನಡೆಸುತ್ತಿರುವುದು ಕಂಡು ಬಂದಿತು.
ತೇರಗಾಂವದ ಅಂಬೇಡ್ಕರ್ ಗಲ್ಲಿಗೆ ನುಗ್ಗಿದ ಗಾಳಿಯ ಅಲೆಗೆ ಛಾವಣಿಗಳು ತತ್ತರಗೊಂಡಿದ್ದು ಹೆಚ್ಚಿನ ತಗಡಿನ ಮತ್ತು ಸಿಮೆಂಟ್ ಶೀಟ್‌ಗಳು ಹಾರಿಹೋಗಿ ಅನೇಕ ಮನೆಗಳಲ್ಲಿ ಮಳೆನೀರು ಪ್ರವೇಶಿಸಿ ಬದುಕು ಅಸ್ತವ್ಯಸ್ತಗೊಂಡಿತು. ಗಾಳಿಯ ರಭಸಕ್ಕೆ ಹರಿಹೋದ ಶೀಟ್‌ಗಳು ಬೇರೆಯವರ ಮನೆಯ ಮೇಲೆ ಬಿದ್ದ ಪರಿಣಾಮ ಇತರರ ಛಾವಣಿಯ ಹೆಂಚುಗಳು ಒಡೆದು ಹೋದವು.

ಶಶಿಕಲಾ ಬಸವಂತ ತಳವಾರ, ಪೈಮುದಾ ಮೆಹಬೂಬಸಾಬ ದೋಣಸಾಲ, ಜನ್ನತಬಾನು ಮಕ್ತುಮಹುಸೇನ ದೋಣಸಾಲ, ಮೋಹನ ದುರ್ಗಪ್ಪಾ ಮೇತ್ರಿ, ದೇವೇಂದ್ರ ವಿಠ್ಠಪ್ಪಾ ಕಮ್ಮಾರ, ಪರಶುರಾಮ ಮರಿಯಪ್ಪ ಮೇತ್ರಿ, ಸಾಬಪ್ಪಾ ಯಲ್ಲಪ್ಪಾ ಮಾದರ, ಬಸವರಾಜ ಮರಿಯಪ್ಪಾ ಆನೆನ್ನವರ, ಮಡಿವಾಳಿ ಕೇಶವ ಮೇತ್ರಿ, ದೇವೇಂದ್ರ ನಿಂಗಪ್ಪಾ ಮೇತ್ರಿ, ರಜಬುಲಿ ಹನುಮನಾಳ ಇವರುಗಳ ಮನೆಗಳ ಛಾವಣಿಗಳು ಹಾರಿಹೋದ ಪರಿಣಾಮ ಮನೆಗಳಿಗೆ ಭಾಗಶಃ ಜಖಂ ಗೊಂಡಿವೆ. ಸುಭಾಸ ರಾಮು ಹುಬ್ಬಳಿಕರ, ಯಲ್ಲಪ್ಪಾ ನಾಗೇಶ ಹಣಬರ, ಗುಂಡು ಸಿದ್ದಪ್ಪಾ ಹಣಬರ ಇವರುಗಳ ಶೌಚಾಲಯಗಳ ಮೇಲೆ ಮರಗಳು ಬಿದ್ದು ಶೌಚಾಲಯಗಳು ಜಖಂಗೊಂಡಿವೆ.
ಶನಿವಾರ ಸಂಜೆ ಬೀಸಿದ ಈ ದೊಡ್ಡಗಾಳಿಯ ಬಗ್ಗೆ ಅಂಬೇಡ್ಕರ್‌ಗಲ್ಲಿಯ ನಿವಾಸಿ ನಿವೃತ್ತ ಪೋಸ್ಟ್ಮನ್ ಮಲ್ಲಿಕಾರ್ಜುನ ಆನೆನ್ನವರ ತಮ್ಮ ಪ್ರತ್ಯಕ್ಷ ಅನುಭವ ಬಿಚ್ಚಿಟ್ಟರು.

ಇಷ್ಟು ದೊಡ್ಡ ಮಟ್ಟದ ಗಾಳಿ ನನ್ನ ಜೀವನದಲ್ಲಿ ಇದೇ ಮೊದಲ ಬಾರಿ ಕಂಡೆನು. ಗಾಳಿಯ ರಭಸಕ್ಕೆ ಕೆಲ ಮನೆಗಳ ಛಾವಣಿ ಶೀಟ್‌ಗಳು ಹಾರಿಹೋಗಿ ಇತರ ಮನೆಗಳ ಮೇಲೆ ಬೀಳುತ್ತಿದ್ದವು. ಗಾಳಿಯ ರಭಸಕ್ಕೆ ಛಟ್, ಛಟ್ ಎಂದು ಛಾವಣಿಗಳು ಮುರಿಯುವ ಶಬ್ದ ಬರುತ್ತಿತ್ತು.
ತೇರಗಾಂವದ ಅಂಬೇಡ್ಕರ್‌ಗಲ್ಲಿಯಲ್ಲಿ ಈ ಪ್ರಾಕೃತಿಕ ವಿಕೋಪದಿಂದ ಆಗಿರುವ ನಷ್ಟದ ಬಗ್ಗೆ ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ವರದಿ ಸಲ್ಲಿಸಿದ್ದಾರೆ ಎಂದು ತಹಶೀಲ್ದಾರ ಶಿವಾನಂದ ಉಳ್ಳೆÃಗಡ್ಡಿ ತಿಳಿಸಿದ್ದಾರೆ.

loading...