ಗೃಹ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಶೋಭಾ ಕರಂದ್ಲಾಜೆ ದೂರು

0
7

ಬೆಂಗಳೂರು: ಸಚಿವ ಎಂ.ಬಿ.ಪಾಟೀಲ್ ಗೃಹ ಇಲಾಖೆಯನ್ನು ತಮ್ಮ ವೈಯಕ್ತಿಕ ಉದ್ದೇಶಗಳಿಗೆ ದುರ್ಬಳಕೆ ಮಾಡಿಕೊಂಡು ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಎಂ.ಬಿ.ಪಾಟೀಲ್ ವಿರುದ್ಧ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ಸಲ್ಲಿಸಿದ್ದಾರೆ.ಲೋಕಸಭಾ ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಕರ್ನಾಟಕ ಸರ್ಕಾರವೂ ಸೇರಿದಂತೆ ಸಚಿವರು ಬಿಜೆಪಿ ಪರ ಒಲವು ಹೊಂದಿರುವವರ ಮೇಲೆ ಗುರಿಯಾಗಿಸಿಕೊಂಡಿದ್ದು, ಬಿಜೆಪಿ ಬೆಂಬಲಿಗರನ್ನು ಉದ್ದೇಶಪೂರ್ವಕವಾಗಿಯೇ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಬಂಧಿಸಲಾಗುತ್ತಿದೆ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.
ಲಿಂಗಾಯತ ಧರ್ಮವನ್ನು ಒಡೆಯುವ ಬಗ್ಗೆ ಎಂ.ಬಿ.ಪಾಟೀಲರು ಕಾಂಗ್ರೆಸ್‍ ನಾಯಕಿ ಸೋನಿಯಾ ಗಾಂಧಿ ಪತ್ರ ಬರೆದಿದ್ದು ಬಹಿರಂಗವಾಗಿಯೇ ಸಾಬೀತಾಗಿದೆ. ಪ್ರಕರಣದಲ್ಲಿ ಯಾವುದೇ ಪಾತ್ರವಹಿಸದಿರುವ ಪತ್ರಕರ್ತ ಹೇಮಂತ್ ಕುಮಾರ್ ಅವರನ್ನು ಉದ್ದೇಶಪೂರ್ವಕವಾಗಿ ಪೊಲೀಸರು ಬಂಧಿಸಿದ್ದು ಖಂಡನೀಯ. ಡಿಜಿಪಿ ನೀಲಮಣಿ ರಾಜು ಅವರನ್ನು ಬಿಜೆಪಿ ನಿಯೋಗ ಈ ಬಗ್ಗೆ ಪ್ರಶ್ನಿಸಿದಾಗ, ಅವರು ಸಮರ್ಪಕ ಉತ್ತರವನ್ನು ನೀಡುವಲ್ಲಿ ತಡಬಡಾಯಿಸಿದ್ದನ್ನು ನೋಡಿದರೆ, ಗೃಹ ಸಚಿವರ ಸೂಚನೆಯ ಅವರೆಲ್ಲ ಹೇಮಂತ್ ಕುಮಾರ್ ಅವರನ್ನು ಬಂಧಿಸಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಪ್ರಕರಣವನ್ನು ಸಿಐಡಿ ವಹಿಸಲಾಗಿದ್ದು, ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳಕರ್ ಪತಿ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳಕರ್ ಸಹ ತನಿಖೆಯಲ್ಲಿರುವುದನ್ನು ಗಮನಿಸಿದರೆ ಸರ್ಕಾರದ ಉದ್ದೇಶವೇನು ಎನ್ನುವುದು ಸ್ಪಷ್ಟವಾಗುತ್ತದೆ.

ಬೀದರ್ ಕಾಂಗ್ರೆಸ್ ಶಾಸಕ ನಾರಾಯಣಸ್ವಾಮಿ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ವಿರುದ್ಧ ಬಳಸಿದ ಅವಹೇಳನಕಾರಿ ಹೇಳಿಕೆ ವಿರೋಧಿಸಿ ಪೊಲೀಸರಿಗೆ ಮತ್ತು ಚುನಾವಣಾ ಆಯೋಗಕ್ಕೆ ಬಿಜೆಪಿ ವತಿಯಿಂದ ದೂರು ಸಲ್ಲಿಸಲಾಗಿತ್ತಾದರೂ ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮ ಜರುಗಿಸದಿರುವುದು ನೋಡಿದರೆ ಗೃಹ ಇಲಾಖೆ ಮೇಲೆ ಸರ್ಕಾರದ ಪ್ರಭಾವ ಎಷ್ಟಿದೆ ಎನ್ನುವುದು ತಿಳಿಯುತ್ತದೆ.

ಗೃಹ ಇಲಾಖೆಯನ್ನು ತಮ್ಮ ರಾಜಕೀಯ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವ ಗೃಹ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಗೃಹ ಸಚಿವರ ಆಜ್ಞೆಯ ಮೇರೆಗೆ ಪೊಲೀಸ್ ಮಹಾನಿರ್ದೇಶಕರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸುವುದನ್ನು ನಿಲ್ಲಿಸಬೇಕೆಂದು ಆದೇಶಿಸಬೇಕು ಎಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.

loading...