ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಭಯ್ ಶ್ರೀನಿವಾಸ್ ಓಕಾ ಪ್ರಮಾಣವಚನ

0
10

ಬೆಂಗಳೂರು;-ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಅಭಯ್ ಶ್ರೀನಿವಾಸ್ ಓಕಾ ಅವರು ಇಂದು ಪ್ರಮಾಣವಚನ ಸ್ವೀಕರಿಸಿದರು.
ರಾಜ್ಯಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಜುಬಾಯಿ ವಾಲಾ ಅವರು ಓಕಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮೇಯರ್ ಗಂಗಾಂಬಿಕೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಓಕಾ ಕುಟುಂಬದ ಸದಸ್ಯರು, ಹಿರಿಯ ವಕೀಲರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮೇ 25ರಂದು ಹೈಕೋರ್ಟ್ ನ ಬೇಸಿಗೆ ರಜೆ ಪೂರ್ಣಗೊಂಡ ನಂತರ ಸಿಜೆ ಕಲಾಪದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಏಪ್ರಿಲ್ 8ರಂದು ಓಕಾ ಅವರನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸುವಂತೆ ಶಿಫಾರಸು ಮಾಡಿತ್ತು. ಅದರ ಆಧಾರದ ಮೇಲೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಏ.30ರಂದು ಓಕಾ ಅವರನ್ನು ಸಿಜೆಯಾಗಿ ನೇಮಿಸಿ ಆದೇಶ ಹೊರಡಿಸಿದ್ದರು.
ಮೇ 25 ರಂದು ಜನಿಸಿದ ಓಕಾ ಅವರು, 1983ರಲ್ಲಿ ವಕೀಲರಾಗಿ ನೋಂದಣಿ ಹೊಂದಿದ್ದರು. ಆರಂಭದಲ್ಲಿ ವಕೀಲರಾದ ತಮ್ಮ ತಂದೆಯೊಂದಿಗೆ ಕೆಲಸ ಮಾಡಿದ ಅವರು, 1985ರಲ್ಲಿ ಬಾಂಬೆಯ ವಿ.ಪಿ.ಟಿಪ್ನಿಸ್ ಲಾ ಛೇಂಬರ್ ಗೆ ಸೇರ್ಪಡೆಗೊಂಡರು. ನಂತರ, 2003 ರಲ್ಲಿ ಬಾಂಬೆ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು, 2005 ರಲ್ಲಿ ಖಾಯಂ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು.

loading...