ಲಿಂಗಾಯತ ಮತಗಳ ಮೇಲೆ ಕಾಂಗ್ರೆಸ್ ಕಣ್ಣು : ಮಠಾಧೀಶರನ್ನು ಭೇಟಿ ಮಾಡಿದ ಎಂ.ಬಿ.ಪಾಟೀಲ್

0
32

ಕಲಬುರಗಿ:-ರಾಜ್ಯ ರಾಜಕಾರಣದ ದಿಕ್ಸೂಚಿಯ ಬದಲಾವಣೆಗೆ ಉಪಚುನಾವಣಾ ಕದನ ಮುನ್ನುಡಿ ಬರೆಯಲಿದೆ ಎಂಬ ಚರ್ಚೆ ತೀವ್ರವಾಗುತ್ತಿದ್ದಂತೆ ಚಿಂಚೋಳಿಯಲ್ಲಿರುವ ವೀರಶೈವ, ಲಿಂಗಾಯತ ಮತಗಳನ್ನು ಸೆಳೆಯಲು ಕಾಂಗ್ರೆಸ್ ಸಹ ಬಿಜೆಪಿಯಂತೆ ಕಸರತ್ತು ಆರಂಭಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಠಾಧೀಶರನ್ನು ಭೇಟಿಯಾದ ಬೆನ್ನಲ್ಲೇ ಇದೀಗ ಗೃಹ ಸಚಿವ ಎಂ.ಬಿ.ಪಾಟೀಲ್ ಮಠಾಧೀಶರನ್ನು ಮತ್ತೊಮ್ಮೆ ಭೇಟಿ ಮಾಡಿ ಅಭ್ಯರ್ಥಿ ಸುಭಾಷ್ ರಾಠೋಡ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಕ್ಷೇತ್ರದಲ್ಲಿ ಸುಮಾರು 1.93 ಲಕ್ಷ ಮತದಾರರಿದ್ದು, ಈ ಪೈಕಿ ಸುಮಾರು 45 ಸಾವಿರ ಅತ್ಯಧಿಕ ಲಿಂಗಾಯತ ಮತದಾರರಿದ್ದು, ಲಂಬಾಣಿ 38 ಸಾವಿರ, ಕಬ್ಬಲಿಗ (ಕೋಲಿ) 35 ಸಾವಿರ, ದಲಿತ 35 ಸಾವಿರ, ಮುಸ್ಲಿಂ 25 ಸಾವಿರ, ಕುರುಬ 13 ಸಾವಿರ ಮತಗಳಿವೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿ ಪರವಾಗಿದ್ದ ಲಿಂಗಾಯತ ಮತಗಳು ಕಾಂಗ್ರೆಸ್‍ನತ್ತ ವಾಲಲು ಎಂ.ಬಿ.ಪಾಟೀಲ್ ಸಾಕಷ್ಟು ಕಸರತ್ತು ನಡೆಸಿದ್ದರು. ಇದೀಗ ಚಿಂಚೋಳಿ ಉಪಚುನಾವಣೆ ಸಂದರ್ಭದಲ್ಲೂ ಲಿಂಗಾಯತ ದಾಳವನ್ನು ಉರುಳಿಸಲು ಪಾಟೀಲ್ ಮುಂದಾಗಿದ್ದಾರೆ.
ಶನಿವಾರ ಶ್ರೀನಿವಾಸ ಸರಡಗಿ ಗುರು ಚಿಕ್ಕವೀರೇಶ್ವರ ಮಠಾಧೀಶ ರೇವಣ್ಣ ಶಿವಾಚಾರ್ಯ, ಶ್ರೀ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳನ್ನು ಭೇಟಿಯಾಗಿದ್ದರು. ಅಲ್ಲದೇ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸಹ ಮಠಾಧೀಶರ ಮೊರೆ ಹೋಗಿದ್ದರು.
ಇಂದು ಸಹ ಎಂ.ಬಿ.ಪಾಟೀಲ್ ವಿವಿಧ ಮಠಾಧೀಶರನ್ನು ಭೇಟಿಯಾಗಿ ಲಿಂಗಾಯತ ಸಮುದಾಯದ ಬೆಂಬಲ ಕೋರಿದರು.
ಚಿಂಚೋಳಿಯಲ್ಲಿ ಲಿಂಗಾಯತ, ಬಂಜಾರ ಹಾಗೂ ಕೋಲಿ ಸಮಾಜದ ಮತಗಳನ್ನು ವಿಭಜಿಸುವ ತಂತ್ರಗಾರಿಕೆಯನ್ನು ಕಾಂಗ್ರೆಸ್ ರೂಪಿಸಿದೆ. ದಲಿತ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಿಭಾಯಿಸುತ್ತಿದ್ದಾರೆ. ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಹಾಗೂ ಈಶ್ವರ ಖಂಡ್ರೆ ಅವರೂ ಸಹ ಲಿಂಗಾಯತ ಸಮಾಜದ ಮನವೊಲಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

loading...