ನೀರು ಪೂರೈಕೆ ಸಮಸ್ಯೆ ಬಗೆಹರಿಸುವಲ್ಲಿ ವಿಶೇಷ ಕಾಳಜಿ ವಹಿಸಿ: ಡಾ. ಹರೀಶಕುಮಾರ

0
19

 

ಹಳಿಯಾಳ: ಪ್ರಸಕ್ತ ದಿನಮಾನಗಳಲ್ಲಿ ಕುಡಿಯುವ ಹಾಗೂ ನಿತ್ಯ ಬಳಕೆಯ ನೀರು ಪೂರೈಕೆ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಶೇಷ ಕಾಳಜಿ ವಹಿಸಬೇಕು ಹಾಗೂ ಮಳೆಗಾಲದ ಪೂರ್ವಭಾವಿ ತಯಾರಿ ಮಾಡಿಕೊಂಡಿರಬೇಕು ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಅವರು ತಿಳಿಸಿದರು.
ಹಳಿಯಾಳ ತಾಲೂಕ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿ ಅಭಿಜಿನ್ ಅವರ ಜೊತೆಗೂಡಿ ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ತಾಲೂಕುಗಳ ವಿವಿಧ ಇಲಾಖೆಗಳ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು.

ಗ್ರಾಮಾಂತರ ಭಾಗದಲ್ಲಿ ನೀರಿನ ತುಟಾಗ್ರತೆಗೆ ಆಗಿರುವ ಬಗ್ಗೆ ಸದಾ ಜಾಗರೂಕರಾಗಿ ಪಂಚಾಯತಿಗಳ ಕೊಳವೆಬಾವಿಗಳಲ್ಲಿ ಸಾಕಷ್ಟು ನೀರು ಲಭ್ಯವಾಗದಿದ್ದಲ್ಲಿ ಆಯಾ ಊರುಗಳ ಸುತ್ತಮುತ್ತಲು ಇರುವ ಖಾಸಗಿಯವರ ಕೊಳವೆಬಾವಿ ನೀರನ್ನು ಪಡೆದುಕೊಳ್ಳಬೇಕು. ಅನುಷ್ಠಾನ ಹಂತದಲ್ಲಿರುವ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಬೇಗ ಮುಗಿಸಲು ಕ್ರಮ ಕೈಗೊಳ್ಳಬೇಕು. ಮಳೆಗಾಲದಲ್ಲಿ ಗಾಳಿ ಹಾಗೂ ಮಳೆ, ನದಿಗೆ ಮಹಾಪೂರ ಮೊದಲಾದ ಸಂದರ್ಭಗಳನ್ನು ಎದುರಿಸಲು ಸಿದ್ಧತೆ ನಡೆಸಬೇಕು ಎಂದು ಸೂಚಿಸಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದ ನೆನೆಗುದಿಗೆ ಬಿದ್ದಿರುವ ಯಾವುದೇ ಪ್ರಕರಣಗಳನ್ನು ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತಂದು ಇತ್ಯರ್ಥಗೊಳಿಸಬೇಕು. ಕೃಷಿಕರಿಗೆ ಬಿತ್ತನೆಗೆ ಬೇಕಾದ ಬೀಜ, ಗೊಬ್ಬರಗಳ ದಾಸ್ತಾನು ಮಾಡಲು ಕ್ರಮ ಕೈಗೊಳ್ಳಬೇಕು. ರಾಸಾಯನಿಕ ಗೊಬ್ಬರಗಳ ಬದಲಿಗೆ ಸಾವಯವ ಗೊಬ್ಬರ ಬಳಸುವಂತಾಗಲು ರೈತರಿಗೆ ಅರಿವು ಮೂಡಿಸಬೇಕು. ಗ್ರಾಮಾಂತರ ಭಾಗದಲ್ಲಿಯೂ ಸಹ ಕಸದ ವಿಲೇವಾರಿಗೆ ಆಯಾ ಪಂಚಾಯತಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಾಲೂಕಾ ಅಧಿಕಾರಿಗಳಿಗೆ ಆದೇಶಿಸಿದರು.

ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ತಾಲೂಕುಗಳ ತಹಶೀಲ್ದಾರರು, ಪುರಸಭೆ ಮತ್ತು ನಗರಸಭೆಯ ಮುಖ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪಿಡಬ್ಲೂö್ಯಡಿ, ಪಶುಸಂಗೋಪನೆ, ಕೃಷಿ, ನೀರು ಹಾಗೂ ನೈರ್ಮಲ್ಯ ಉಪವಿಭಾಗಗಳು, ಅರಣ್ಯ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ ಮೊದಲಾದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

loading...