ಆಟೋನಗರಕ್ಕೆ ಗ್ಯಾರೇಜ್‍ಗಳ ಹಠಾವೋ ಎಂದು ?

0
11

ಹಿರೇಮಠ ಆರ್.ಕೆ.

ಬೆಳಗಾವಿ

ಮೆಟ್ರೋಪಾಲಿಸಿಟಿ, ಸ್ಮಾರ್ಟ್‍ಸಿಟಿ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿ ನಗರದ ಜನತೆಯ ಬಹುವರ್ಷಗಳ ಬೇಡಿಕೆಯಾಗಿದ್ದ ದಂಡುಮಂಡಳಿ ವ್ಯಾಪ್ತಿಯಲ್ಲಿದ್ದ ತರಕಾರಿ ಮಾರುಕಟ್ಟೆ ಸ್ಥಳಾಂತರ ಮಾಡುವಲ್ಲಿ ಯಶಸ್ವಾಗಿರುವ ಜಿಲ್ಲಾಡಳಿತ ಪೋರ್ಟ್ ರಸ್ತೆಯ ಪಕ್ಕದಲ್ಲಿರುವ ಗ್ಯಾರೇಜ್‍ಗಳನ್ನು ಆಟೋನಗರಕ್ಕೆ ಸ್ಥಳಾಂತರ ಮಾಡುವುದು ಎಂದು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಹಲವಾರು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ತರಕಾರಿ ಮಾರುಕಟ್ಟೆಯ ಸ್ಥಳಾಂತರದ ಅವಾಂತರ ಈಗ ಮುಕ್ತಯವಾಗಿದ್ದು, ಜಿಲ್ಲಾಡಳಿತ ಪೋರ್ಟ್ ರಸ್ತೆಯಲ್ಲಿದ್ದ ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದೆ. ನಗರದ ದಂಡುಮಂಡಳಿಯ ವ್ಯಾಪ್ತಿಯಲ್ಲಿರುವ ತರಕಾರಿ ಮಾರುಕಟ್ಟೆಯಿಂದ ನಗರದ ಸಂಚಾರದ ವ್ಯವಸ್ಥೆಗೆ ಅಡೆತಡೆಯಾಗುತ್ತಿದೆ. ಅದನ್ನು ಎಪಿಎಂಸಿಗೆ ಸ್ಥಳಾಂತರ ಮಾಡಬೇಕೆಂದು ಹಲವಾರು ಸಂಘಟನೆಗಳು ನಡೆಸಿದ ಹೋರಾಟಕ್ಕೆ ಕಡೆಗೂ ಫಲ ಸಿಕ್ಕಿದೆ. ಆದರೆ ಫೋರ್ಟ್ ರಸ್ತೆಯಲ್ಲಿರುವ ಗ್ಯಾರೇಜ್‍ಗಳ ಸ್ಥಳಾಂತರ ಮಾಡುವುದು ಎಂದು ಎನ್ನುವ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿವೆ.

ತರಕಾರಿ ಮಾರುಕಟ್ಟೆ ಸ್ಥಳಾಂತರ ಮಾಡುವಲ್ಲಿ ಜಿಲ್ಲಾಡಳಿತದ ಸಾಮಾಜಿಕ ಕಳಕಳಿ, ಜಿಲ್ಲಾ ಉಸ್ತುವಾರಿ ಸತೀಶ ಜಾರಕಿಹೊಳಿ ಅವರ ಇಚ್ಚಾಶಕ್ತಿ, ನಗರ ಪೊಲೀಸ್ ಇಲಾಖೆಯ ಕಟ್ಟನಿಟ್ಟಿನ ಕ್ರಮದಿಂದಾಗಿ ಪೋರ್ಟ್ ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆ ಎಪಿಎಂಸಿಗೆ ಸ್ಥಳಾಂತರಗೊಂಡು ಈ ಸಮಸ್ಯೆ ಇತ್ಯರ್ಥಗೊಂಡಿದೆ. ಇದರ ಕೂಗಳತೆಯ ದೂರದಲ್ಲಿರುವ ಗ್ಯಾರೇಜ್‍ಗಳ ಸ್ಥಳಾಂತರ ಎಂದು ಎನ್ನುವ ಪ್ರಶ್ನೆಯೂ ಉದ್ಬವವಾಗಿದ್ದಂತು ಸತ್ಯ.

ಬೆಳಗಾವಿ ನಗರದ ಪೋರ್ಟ್ ರಸ್ತೆಯಲ್ಲಿರುವ ಆಟೋ ಗ್ಯಾರೇಜ್‍ಗಳನ್ನು, ವಾಹನಗಳ ಬಿಡಿ ಭಾಗಗಳನ್ನು ಆಟೋ ನಗರಕ್ಕೆ ಸ್ಥಾಪಿಸುವ ಉದ್ದೇಶದಿಂದ 2006ರಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಡಾ. ಶಾಲಿನಿ ರಜನೀಶ ಅವರು ಆಟೋ ನಗರವನ್ನು ನಿರ್ಮಿಸಿ ನಗರದಲ್ಲಿರುವ ವಾಹನಗಳ ಬಿಡಿ ಭಾಗಗಳು, ಗ್ಯಾರೇಜ್ ಅಂಗಡಿಗಳನ್ನು ಆಟೋನಗರಕ್ಕೆ ಸ್ಥಳಾಂತರ ಮಾಡುವಂತೆ ಹಲವಾರು ರೀತಿಯ ಪ್ರಯತ್ನಗಳನ್ನು ನಡೆಸಿದ್ದರು.

ಆಟೋನಗರಕ್ಕೆ ಸ್ಥಳಾಂತರವಾಗುವುದಾಗಿ ಹೇಳಿ ಗ್ಯಾರೇಜ್ ಮಾಲೀಕರು, ವಾಹನಗಳ ಬಿಡಿಭಾಗಗಳ ಅಂಗಡಿಯ ಮಾಲೀಕರು ಆಟೋನಗರದಲ್ಲಿ ಜಾಗೆಯನ್ನು ಪಡೆದರೂ ಇಲ್ಲಿಯವರೆಗೆ ಅವರು ತಮ್ಮ ಗ್ಯಾರೇಜ್‍ಗಳನ್ನು ಆಟೋಗಳನ್ನು ಸ್ಥಳಾಂತರ ಮಾಡದೆ ನಗರದಲ್ಲಿಯೇ ಉಳಿದುಕೊಂಡು ಸಂಚಾರ ವ್ಯವಸ್ಥೆಗೆ ಅಡ್ಡವಾಗಿ ನಿಂತಿದ್ದಾರೆ.

ಶಾಲಿನಿ ರಜನೀಶ ಅವರು ಪೋರ್ಟ್ ರಸ್ತೆಯಲ್ಲಿರುವ ಗ್ಯಾರೇಜ್‍ಗಳನ್ನು ಆಟೋನಗರಕ್ಕೆ ಸ್ಥಳಾಂತರ ಮಾಡಲು ಹಲವಾರು ರೀತಿಯ ಕಸರತ್ತುಗಳನ್ನು ಮಾಡಿದ್ದರು. ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ನೀರು ಸರಬರಾಜು ಕಡಿತಗೊಳಿಸಿ ಗ್ಯಾರೇಜ್ ಮಾಲಿಕರಿಗೆ ಬಿಸಿ ಮುಟ್ಟಿಸಿದ್ದರೂ ಅವರು ಯಾರೂ ಕ್ಯಾರೇ ಎನ್ನದೆ ಆಟೋ ನಗರಕ್ಕೆ ಸ್ಥಳಾಂತರವಾಗಿರಲಿಲ್ಲ.

ದಂಡುಮಂಡಳಿಯ ಅಧಿಕಾರಿಗಳ ಅಸಹಕಾರದಿಂದ ಈ ಗ್ಯಾರೇಜ್‍ಗಳು ಸ್ಥಳಾಂತರವಾಗಲಿಲ್ಲ ಎನ್ನುವ ಅನುಮಾನ ಸಾರ್ವಜನಿಕ ವಲಯದ್ದಾಗಿದೆ. ಬೆಳಗಾವಿ ಜಿಲ್ಲಾಡಳಿತ ತರಕಾರಿ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಿದ್ದಂತೆ ನಗರದ ಫೋರ್ಟ್ ರಸ್ತೆಯಲ್ಲಿ ನಾಯಿ ಕೊಡೆಯಂತೆ ಎದ್ದಿರುವ ಗ್ಯಾರೇಜ್‍ಗಳನ್ನು ಆಟೋನಗರಕ್ಕೆ ಸ್ಥಳಾಂತರ ಮಾಡುವುದು ಅತ್ಯಗತ್ಯವಾಗಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ಜಿಲ್ಲಾಡಳಿತ ತರಕಾರಿ ಮಾರುಕಟ್ಟೆ ಸ್ಥಳಾಂತರದ ವಿಷಯದಲ್ಲಿ ದಂಡುಮಂಡಳಿಯ ಸಹಕಾರ ಪಡೆದಂತೆ ಸಂಚಾರ ಸಮಸ್ಯೆಯ ಹಿತದೃಷ್ಠಿಯಿಂದ ಗ್ಯಾರೇಜ್‍ಗಳ ವಿಷಯದಲ್ಲೂ ದಂಡುಮಂಡಳಿಯ ಸಹಕಾರ ಪಡೆದು ಆಟೋನಗರಕ್ಕೆ ಸ್ಥಳಾಂತರ ಮಾಡುವುದು ಅತ್ಯಗತ್ಯವಾಗಿದೆ. ನಗರ ಪೊಲೀಸ್ ಇಲಾಖೆಯೂ ಕೂಡ ಈ ಬಗ್ಗೆ ಗಮನ ಹರಿಸುವುದು ಸೂಕ್ತವಾಗಿದೆ.

———————

ಉದ್ಯಮದ ಹೆಸರಿನಲ್ಲಿ ಮನೆ ಕಟ್ಟಿ ಬಾಡಿಗೆ ಕೊಡುವುದೇ ಹೆಚ್ಚು

ಆಟೋನಗರವನ್ನು ಉದ್ಯಮಕ್ಕಾಗಿಯೇ ಜಾಗೆಯನ್ನು ಮೀಸಲಿಟ್ಟಿದ್ದಾರೆ. ಆದರೆ ಇದು ಉದ್ಯಮಕ್ಕೆ ಬಳಕೆಯಾಗದೆ ಮನೆಗಳ ನಿರ್ಮಾಣಕ್ಕೆ ಮೀಸಲಾಗಿವೆ. ಇಲ್ಲಿ ಆಟೋ ಉದ್ಯಮ ಸಂಸ್ಥೆಗಿಂತ ಉದ್ಯಮದ ಹೆಸರಿನಲ್ಲಿ ಮನೆಗಳನ್ನು ನಿರ್ಮಿಸಿ ವಾಸ ಮಾಡುವವರ ಸಂಖ್ಯೆಯೇ ಹೆಚ್ಚಾಗಿದೆ. ಜಿಲ್ಲಾಡಳಿತದ ನಿರ್ಲಕ್ಷ್ಯದಿಂದಾಗಿ ಫೋರ್ಟ್ ರಸ್ತೆಯಲ್ಲಿರುವ ಬಿಡಿ ಭಾಗ, ಗ್ಯಾರೇಜ್‍ನ ಉದ್ಯಮಿಗಳು ಆಟೋ ನಗರಕ್ಕೆ ಸ್ಥಳಾಂತರವಾಗದ ಹಿನ್ನೆಲೆಯಲ್ಲಿ ಈ ಸಮಸ್ಯೆ ಉಲ್ಬಣವಾಗುತ್ತಿದೆ ಎಂದು ಆಟೋ ನಗರದ ಸ್ಥಳೀಯರು ಆರೋಪಿಸುತ್ತಿದ್ದಾರೆ.

——————-

ಮಲ್ಟಿಲೇವಲ್ ಪಾರ್ಕಿಂಗ್ ನಿರ್ಮಾಣವಾಗಲಿ !

ಸಂಚಾರ ಹಾಗೂ ಪಾರ್ಕಿಂಗ್ ಸಮಸ್ಯೆಯಿಂದ ನಲುಗಿರುವ ಬೆಳಗಾವಿ ನಗರದಲ್ಲಿ ಫೋರ್ಟ್ ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಈಗಾಗಲೇ ಎಪಿಎಂಸಿಗೆ ಸ್ಥಳಾಂತರಿಸಲಾಗಿದೆ. ಆ ಜಾಗೆಯಲ್ಲಿ ಪಾರ್ಕಿಂಗ್ ಸಮಸ್ಯೆ ದೂರ ಮಾಡಲು ಕಿಲ್ಲಾ ಕೋಟೆಯ ಹಿಂಬದಿಯಲ್ಲಿ ಸಾಕಷ್ಟು ಜಾಗೆ ಖಾಲಿ ಉಳಿಯುತ್ತದೆ. ಹೊರಗಡೆಯಿಂದ ಬರುವ ಟ್ರಕ್, ಟಿಂಪೋ, ಕಾರ್ ಹಾಗೂ ದ್ವಿಚಕ್ರ ವಾಹನಕ್ಕೆ ಪಾರ್ಕಿಂಗ್ ಮಾಡಿದರೆ ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ ಹಾಡಿದ್ದಂತಾಗುತ್ತದೆ. ಮಹಾನಗರ ಪಾಲಿಕೆ ಹಾಗೂ ನಗರ ಪೊಲೀಸ್ ಇಲಾಖೆ ಈ ಜಾಗೆಯನ್ನು ಪಾರ್ಕಿಂಗ್‍ಗೆ ಮೀಸಲಿಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

—————–

ಸಂಚಾರ ಸಮಸ್ಯೆಯಿಂದ ಪೋರ್ಟ್ ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿಗೆ ಸ್ಥಳಾಂತರಿಸಲಾಗಿದೆ. ನಗರ ಬೆಳೆದಂತೆ ಸಂಚಾರ ಸಮಸ್ಯೆಯು ದಟ್ಟವಾಗುತ್ತದೆ. ಈ ನಿಟ್ಟಿನಲ್ಲಿ ಪೊರ್ಟ್ ರಸ್ತೆಯಲ್ಲಿರುವ ಗ್ಯಾರೇಜ್‍ಗಳನ್ನು ಆಟೋನಗರಕ್ಕೆ ಸ್ಥಳಾಂತರ ಮಾಡಿದರೆ ಹೆಚ್ಚಿನ ಅನುಕೂಲವಾಗುತ್ತದೆ.

*ಅಶೋಕ ಚಂದರಗಿ, ಕನ್ನಡ ಹೋರಾಟಗಾರ

loading...