ವಿಶ್ವೇಶ್ವರ ಭಟ್‌ ಮೇಲೆ ಪ್ರಕರಣ ದಾಖಲು ಖಂಡಿಸಿ, ಪತ್ರಕರ್ತರ ಪ್ರತಿಭಟನೆ

0
36

ಯಲಬುರ್ಗಾ: ವಿಶ್ವವಾಣಿ ಪತ್ರಿಕೆ ಸಂಪಾದಕರಾದ ವಿಶ್ವೇಶ್ವರ ಭಟ್‌ ಅವರ ಮೇಲೆ ಪೊಲೀಸ್‌ ದೂರು ದಾಖಲಿಸಿರುವುದನ್ನು ಖಂಡಿಸಿ ಯಲಬುರ್ಗಾದಲ್ಲಿ ಮಂಗಳವಾರ ಪತ್ರಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ರವಿತೇಜ ಅಬ್ಬಿಗೇರಿ ಮಾತನಾಡಿ ಪತ್ರಿಕೆಯಲ್ಲಿ ಬಂದಿರುವ ಸುದ್ದಿ ಉದ್ದೇಶಪೂರಿತವಾಗಿದ್ದರೆ, ಸುಳ್ಳು ಮಾಹಿತಿಯಾಗಿದ್ದರೆ ಸ್ಪಷ್ಟನೆ, ವಿವರಣೆ ಕೊಡುವುದು ಕ್ರಮಬದ್ದವಾದದ್ದು. ಅದನ್ನು ಬಿಟ್ಟು ಸುದ್ದಿ ನೆಪ ಮಾಡಿ ದೂರು ದಾಖಲಿಸಿರುವುದು ದ್ವೇಷದ ನಡವಳಿಕೆಗೆ ಇಂಬು ನೀಡಿದಂತಾಗಿದೆ. ಮಂಡ್ಯ ಲೋಕಸಭಾ ಪರಾಜಿತ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಕುರಿತು ಕುಡಿದ ಅಮಲಿನಲ್ಲಿ ಮಾಡಿದ ರಂಪಾಟ ಸುದ್ದಿಯನ್ನು ಪತ್ರಿಕೆ ಪ್ರಕಟಿಸಿತ್ತು ಇದಕ್ಕೆ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟರ ಮೇಲೆ 8 ಪ್ರಕರಣಗಳನ್ನು ದಾಖಲಿಸಿ ರಾಜ್ಯದಲ್ಲಿ ವರದಿ ಮಾಡುವ ವ್ಯಕ್ತಿ ಮತ್ತು ಪತ್ರಿಕಾ ಸಂಸ್ಥೆಗಳ ಮುಖ್ಯಸ್ಥರು, ವರದಿಗಾರರ ಮೇಲೆ ಈ ರೀತಿ ಪ್ರಕರಣಗಳನ್ನು ದಾಖಲಿಸಿ ಪತ್ರಿಕಾ ಸ್ವಾತಂತ್ರ್ಯಕ್ಕೆ ದಕ್ಕೆ ಮತ್ತು ಪತ್ರಕರ್ತರಲ್ಲಿ ಭೀತಿ ಹಿಟ್ಟಿಸಿ ಮಾಧ್ಯಮಗಳನ್ನು ನಿಯಂತ್ರಿಸುವ ಹುನ್ನಾರ ನಡೆಸಿರುವುದು ಸರಿಯಲ್ಲ ಎಂದು ಆಗ್ರಹಿಸಿದರು.
ಪತ್ರಕರ್ತರಾದ ಶಿವಮೂರ್ತಿ ಇಟಗಿ, ಸ.ಶರಣಪ್ಪ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಪತ್ರಕರ್ತರ ಮೇಲೆ ಪದೇ ಪದೇ ಹಲ್ಲೆ ನಡೆಯುತ್ತಿದೆ. ಪತ್ರಕರ್ತರಿಗೆ ಸರಕಾರ ರಕ್ಷಣೆ ನೀಡಬೇಕು. ಸಂಪಾದಕರ ಮೇಲೆ ಪ್ರಕರಣ ದಾಖಲಿಸಿದ್ದು ಸರಿಯಲ್ಲ ಶೀಘ್ರದಲ್ಲಿ ಪ್ರಕರಣ ಹಿಂಪಡೆಯಬೇಕು ಎಂದರು.
ತಹಸೀಲ್ದಾರ್‌ ವೈ.ಬಿ.ನಾಗಠಾಣ ಅವರಿಗೆ ಮನವಿ ಸಲ್ಲಿಸಿದರು. ಪತ್ರಕರ್ತರಾದ ವಿ.ಎಸ್‌.ಶಿವಪ್ಪಯ್ಯನಮಠ, ಫಾಲಾಕ್ಷಪ್ಪ ತಿಪ್ಪಳ್ಳಿ, ಸಂತೋಷ ಬಂಡ್ರಿ, ಖಾಜಾವಲಿ ಜರಕುಂಟಿ, ಇಮಾಂಸಾಬ ಸಂಕನೂರು, ರವಿಕುಮಾರ ಚಲವಾದಿ, ದೇವರಾಜ ದೊಡ್ಡಮನಿ, ದಾದು ಯಲಿಗಾರ, ಶ್ಯಾಮೀದ, ಶರಣು ಗುಮಗೇರಿ, ಶ್ರೀಕಾಂತಗೌಡ ಮಾಲಿಪಾಟೀಲ, ಇತರರು ಇದ್ದರು.

loading...