ಇಂದಿನಿಂದ ಶಾಲಾ ಪ್ರಾರಂಭೋತ್ಸವ

0
84

ಹಳಿಯಾಳ: ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಎಲ್ಲ ಮೂಲಭೂತ ಸೌಕರ್ಯಗಳೊಂದಿಗೆ ಬುಧವಾರ ಶಾಲಾ ಪ್ರಾರಂಭೋತ್ಸವ ನಡೆಯಲಿದೆ.
ಹಳಿಯಾಳ ಹಾಗೂ ದಾಂಡೇಲಿ ವ್ಯಾಪ್ತಿಯಲ್ಲಿ 99 ಕಿರಿಯ ಪ್ರಾಥಮಿಕ ಶಾಲೆ, 86 ಹಿರಿಯ ಪ್ರಾಥಮಿಕ ಶಾಲೆ ಹಾಗೂ 37 ಪ್ರೌಢಶಾಲೆಗಳಿವೆ. ಸರ್ಕಾರಿ, ಅನುದಾನಿತ, ಅನುದಾನರಹಿತ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸಮಾಜ ಕಲ್ಯಾಣ ವಸತಿ ಶಾಲೆಗಳು ಮತ್ತು ಹಿಂದುಳಿದ ವರ್ಗದ ಕಲ್ಯಾಣ ಇಲಾಖೆಯ ಶಾಲೆಗಳು ಸೇರಿದಂತೆ ಒಟ್ಟು 222 ಶಾಲೆಗಳು ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಆರಂಭಿಸಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರಅಹ್ಮದ ಮುಲ್ಲಾ ತಿಳಿಸಿದ್ದಾರೆ.
ಶಾಲಾ ಪ್ರಾರಂಭೋತ್ಸವವನ್ನು ಹಬ್ಬದಂತೆ ಮಾಡಲಾಗುವುದು. ಶಾಲೆಗಳ ಪ್ರವೇಶದ್ವಾರಕ್ಕೆ ತಳಿರು-ತೋರಣಗಳನ್ನು ಕಟ್ಟಿ ವಿದ್ಯಾರ್ಥಿಗಳಿಗೆ ಸ್ವಾಗತ ಕೋರಲಾಗುವುದು. ಅಕ್ಷರ ದಾಸೋಹ ಯೋಜನೆಯಡಿ ಬೆಳಿಗ್ಗೆ ಹಾಲು, ಮಧ್ಯಾಹ್ನ ಬಿಸಿಯೂಟದ ಜೊತೆಗೆ ಸಿಹಿಯನ್ನು ಉಣಬಡಿಸಲಾಗುವುದು. ಈ ಕಾರ್ಯಕ್ಕೆ ಆಯಾ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರು ಸಕಲ ಸಹಕಾರ ನೀಡಲಿದ್ದಾರೆ. ಶಾಲೆಗಳಲ್ಲಿ ಕುಡಿಯಲು ಶುದ್ಧ ನೀರು ಹಾಗೂ ಶೌಚಾಲಯಗಳ ಬಳಕೆಗೆ ನೀರಿನ ವ್ಯವಸ್ಥೆ ಇದ್ದು ಈವರೆಗೆ ಯಾವುದೇ ಕೊರತೆ ಕಂಡುಬಂದಿಲ್ಲ.
ಪಠ್ಯಪುಸ್ತಕಗಳ ಬೇಡಿಕೆಯ ಆಧಾರದ ಮೇಲೆ ತರಿಸಿ ಆಯಾ ವಿದ್ಯಾಲಯಗಳಿಗೆ ವಿತರಿಸಲಾಗಿದೆ. ಶೇ. 86% ರಷ್ಟು ಪಠ್ಯಪುಸ್ತಕಗಳನ್ನು ಸರಬುರಾಜು ಮಾಡಲಾಗಿದ್ದು ಉಳಿದ ಪಠ್ಯಪುಸ್ತಕಗಳು ಸಹ ಶೀಘ್ರ ಬರುವ ನಿರೀಕ್ಷೆಯಿದೆ.

loading...