ದೇಶಪಾಂಡೆ ವಿರುದ್ಧ ಆರೋಪ ಸರಿಯಲ್ಲ: ಘೋಟ್ನೇಕರ

0
60

ಹಳಿಯಾಳ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಧರ್ಮವನ್ನು ಪಾಲಿಸಿ ಜೆಡಿಎಸ್‌ ಅಭ್ಯರ್ಥಿ ಪರ ಸಾಕಷ್ಟು ಪ್ರಚಾರ ಮಾಡಿದರೂ ಸಹ ಅಭ್ಯರ್ಥಿ ಆನಂದ ಅಸ್ನೋಟಿಕರ ಅವರು ಸಚಿವ ಆರ್‌.ವಿ. ದೇಶಪಾಂಡೆಯವರ ವಿರುದ್ಧ ಮಾಡಿದ ಆರೋಪವನ್ನು ಖಂಡಿಸುವುದಾಗಿ ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೋಟ್ನೇಕರ ಹೇಳಿದ್ದಾರೆ.
ತಮ್ಮ ಕಾರ್ಯಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಘೋಟ್ನೇಕರ ಮಾತನಾಡಿದರು. ಸೋಲನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಬೇಕು. ನಮ್ಮ ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷ ಹೆಚ್ಚಿನ ಶಕ್ತಿ ಹೊಂದಿಲ್ಲ ಎಂದು ಮೊದಲೇ ಹೇಳಲಾಗಿತ್ತು. ಪರಿಸ್ಥಿತಿ ಹೀಗಿದ್ದರೂ ಸಹ ಅಭ್ಯರ್ಥಿಯನ್ನಾಗಿಸಿ ಜೆಡಿಎಸ್‌ದವರಿಗೆ ನೀಡಲಾಯಿತು. ಹಗಲು-ರಾತ್ರಿ ಜೆಡಿಎಸ್‌ ಅಭ್ಯರ್ಥಿ ಪರವಾಗಿ ದುಡಿದಿದ್ದೆವು. ಚುನಾವಣಾ ಫಲಿತಾಂಶದ ನಂತರ ಅಭ್ಯರ್ಥಿ ಆನಂದ ಅಸ್ನೋಟಿಕರ್‌ ದೇಶಪಾಂಡೆ ವಿರುದ್ಧ ಆರೋಪ ಮಾಡಿದ್ದು ನಮಗೆ ನೋವುಂಟು ಮಾಡಿದೆ ಎಂದರು.
-: ಚಾಡಿ ಮಾತು ಕೇಳಿ ಬೇರೆಯವರ ತೇಜೋವಧೆ ಸರಿಯಲ್ಲ :-
ನಾನು 1975 ರಿಂದ ಉದ್ಯಮ ವೃತ್ತಿಯಲ್ಲಿ ತೊಡಗಿಸಿಕೊಂಡು ರಾಜಕೀಯ ಮಾಡುತ್ತಿದ್ದೇನೆ. ನನಗೆ ನನ್ನ ದಂಧೆಯೇ ಮೊದಲು ರಾಜಕೀಯ ಎರಡನೇಯದ್ದು ಆಗಿದೆ. ಕ್ಲಾಸ್‌ 1 ಗುತ್ತಿಗೆದಾರನಾಗಿರುವ ನನ್ನ ಮಗ ಟೆಂಡರ್‌ ಇಲ್ಲದೇ ಒಂದು ಕೆಲಸ ಮಾಡಿದ್ದರೂ ಸಹ ನಾನು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಶ್ರೀಕಾಂತ ಘೋಟ್ನೇಕರ ಹೇಳಿದರು.
ಹಳಿಯಾಳದಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಕೆಲಸ ಸಿಗದೇ ಹೆಚ್ಚಿನ ಕೆಲಸಗಳು ಹೊರಗಿನವರಿಗೆ ದೊರೆಯುತ್ತಿವೆ. ಜಿಲ್ಲೆಯಲ್ಲಿ ಎನ್‌.ಎಸ್‌. ನಾಯಕ ಹಾಗೂ ಶಿವರಾಮ ಇವರು ಪ್ರಭಾವಿ ಗುತ್ತಿಗೆದಾರರಾಗಿದ್ದು ಇವರುಗಳಿಗೆ ಹೆಚ್ಚಿನ ಕೆಲಸ ಸಿಗುತ್ತದೆ. ದಾಂಡೇಲಿ, ಜೋಯಿಡಾ ಭಾಗದಲ್ಲಿ ಕಳಪೆ ಕಾಮಗಾರಿ ಆದ ಬಗ್ಗೆ ಪತ್ರಿಕೆಯಲ್ಲಿ ವರದಿ ಬಂದರೂ ಕ್ರಮವಾಗಿಲ್ಲ ಏಕೆ?
ನಾವು ಕಳಪೆ ಕಾಮಗಾರಿ ಮಾಡಿಲ್ಲ. ನನ್ನ ಮಗ ಟೆಂಡರ್‌ ಇಲ್ಲದೇ ಯಾವುದೇ ಕೆಲಸ ಮಾಡುವುದಿಲ್ಲ. ಸಚಿವ ಆರ್‌.ವಿ. ದೇಶಪಾಂಡೆಯವರು ಪದೇ ಪದೇ ಬೇರೆಯವರ ಮಾತು ಕೇಳಿ ಬೇರೆಯವರಿಗೆ ತೇಜೋವಧೆ ಮಾಡುವುದು ಸರಿಯಲ್ಲ. ಹಳಿಯಾಳ ಕ್ಷೇತ್ರದಲ್ಲಿ ಯಾವ-ಯಾವ ಕೆಲಸ ಎಲ್ಲಿಲ್ಲಿ & ಯಾರ್ಯಾರು ಮಾಡಬೇಕು ಎಂಬುದು ಒಂದು ಕಡೆಯಿಂದ ಕಂಟ್ರೋಲ್‌ ಆಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಜನರ ಕಷ್ಟ ಆಲಿಸಲು ಅವರ ಮೊಬೈಲ್‌ ಕರೆಗಳನ್ನು ಸ್ವೀಕರಿಸದೇ ಇರುವ ವ್ಯಕ್ತಿ ಒಂದೆಡೆಯಾದರೆ ಇನ್ನೊಂದೆಡೆ ನಾನು ಹೆಚ್ಚಿನ ಸಮಯ ಜನರಿಗೆ ಲಭ್ಯವಿದ್ದು ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದರು ಘೋಟ್ನೇಕರ.
ಸಣ್ಣ ನೀರಾವರಿ ಇಲಾಖೆಯಲ್ಲಿ ಆಂಧ್ರಪ್ರದೇಶದ ಗುತ್ತಿಗೆದಾರರೊಬ್ಬರು ಕಾಮಗಾರಿ ಮೊತ್ತಕ್ಕಿಂತ ಹೆಚ್ಚಿನ ದರ ನಮೂದಿಸಿದರೂ ಗುತ್ತಿಗೆ ಪಡೆದಿದ್ದಾರೆ. ಕಾಮಗಾರಿ ಮೊತ್ತಕ್ಕಿಂತ ಕಡಿಮೆ ದರ ಹಾಕಿದ ಗುತ್ತಿಗೆದಾರರಿಗೆ ಕಾಮಗಾರಿ ಸಿಕ್ಕಿಲ್ಲ. ಇದು ಸಚಿವ ಆರ್‌.ವಿ. ದೇಶಪಾಂಡೆಯವರ ಗಮನಕ್ಕೆ ಇಲ್ಲವೇ ಎಂದು ಪ್ರಶ್ನಿಸಿದರು.

loading...