ಮನರೇಗಾದಿಂದ ದುಡಿಯುವ ಕೈಗಳಿಗೆ ಉದ್ಯೋಗ ಕೊಡಿಸುವ ಕೆಲಸ

0
46

ಹಳಿಯಾಳ: ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ (ಮನರೇಗಾ) ಯೋಜನೆಯಡಿ ಹಳಿಯಾಳ ತಾಲೂಕಿನಲ್ಲಿ ಗುರಿಮೀರಿ ಸಾಧನೆ ಮಾಡಲಾಗಿದೆ. ದುಡಿಯುವ ಕೈಗಳಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡಲಾಗಿದೆ.
ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮಹೇಶ ಕುರಿಯವರ ಹಾಗೂ ಮನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಪರಶುರಾಮ ಘಸ್ತೆ ಇವರುಗಳು ಮನರೇಗಾ ಯೋಜನೆಯ ಸಾಧನೆಯ ಕುರಿತು ಅಂಕಿ-ಅಂಶಗಳೊಂದಿಗೆ ವಿವರಣೆ ನೀಡಿದ್ದಾರೆ. 2018-19ನೇ ಸಾಲಿನಲ್ಲಿ 1,60,796 ಮಾನವ ದಿನಗಳ ಗುರಿ ಹೊಂದಲಾಗಿತ್ತು. ಆದರೆ ಗುರಿಮೀರಿ 1,74,595 ಮಾನವ ದಿನಗಳ ಸೃಜನೆ ಮಾಡಲಾಗಿದೆ. ತನ್ಮೂಲಕ ಕೂಲಿಕಾರರಿಗೆ 3 ಕೋಟಿ 79 ಲಕ್ಷ ರೂ. ಕೂಲಿ ನೀಡಲಾಗಿದೆ. ಪ್ರಸಕ್ತ ವರ್ಷ ಇಲ್ಲಿಯವರೆಗೆ 34596 ಮಾನವ ದಿನಗಳ ಸೃಜನೆ ಮಾಡಲಾಗಿದ್ದು 1 ಕೋಟಿ 24 ಲಕ್ಷ ರೂ. ಪಗಾರ ಪಾವತಿಸಲಾಗಿದೆ.
ಯೋಜನೆಯಡಿ ಕಾರ್ಮಿಕರಿಗೆ ಕೆಲಸ ನೀಡುವುದರ ಜೊತೆಗೆ ಮಳೆನೀರು ಹಿಡಿದಿಟ್ಟುಕೊಳ್ಳುವ ಅಂತರ್ಜಲ ಹೆಚ್ಚಿಸುವ ಕಾಮಗಾರಿಗಳಿಗೆ ವಿಶೇಷ ಆದ್ಯತೆ ನೀಡಲಾಯಿತು. ತಾಲೂಕಿನಲ್ಲಿ ಒಟ್ಟು 21 ಕೆರೆಗಳ ಹೂಳೆತ್ತುವುದು, ಅರಣ್ಯದಲ್ಲಿ ಮಣ್ಣು ತೇವಾಂಶ ರಕ್ಷಣೆಯ 18 ಕಾಮಗಾರಿಗಳು ನಡೆದಿವೆ. ಅಂಬೇವಾಡಿ ಹಾಗೂ ನಾಗಶೆಟ್ಟಿಕೊಪ್ಪ ಗ್ರಾಮಗಳಲ್ಲಿ 2 ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗಿದ್ದು, ವೈಯಕ್ತಿಕವಾಗಿ 81 ದನದ ಕೊಟ್ಟಿಗೆಗಳು ಪ್ರಗತಿಯಲ್ಲಿವೆ. 9 ಕಡೆಗಳಲ್ಲಿ ಶಾಲಾ ಆವರಣಗೋಡೆ, 3 ಆಟದ ಮೈದಾನಗಳು ಸಿದ್ಧಗೊಂಡಿವೆ. 6 ಕಡೆ ರಸ್ತೆ ಮೆಟ್ಲಿಂಗ್‌ ಕಾಮಗಾರಿಗಳು ನಡೆಯುತ್ತಿವೆ. 10 ಭೂ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಮದ್ನಳ್ಳಿ ಹಾಗೂ ತೇರಗಾಂವದಲ್ಲಿ ಸಾಮೂಹಿಕವಾಗಿ ರೈತರಕಣ ಸಜ್ಜುಗೊಂಡಿದೆ.
ವಸತಿ ಯೋಜನೆಯಡಿ ರಾಜೀವಗಾಂಧಿ ವಸತಿ ನಿಗಮದಿಂದ ಮನೆ ನಿರ್ಮಿಸಿಕೊಳ್ಳಲು 1 ಲಕ್ಷ 20 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. ಈ ಮನೆ ನಿರ್ಮಾಣ ಕಾಮಗಾರಿಗೆ ನರೇಗಾ ಯೋಜನೆಯಡಿ ಒಟ್ಟು 90 ದಿನದ ಮಾನವದಿನಗಳ ಲೆಕ್ಕದಂತೆ 22,410 ರೂ. ನೀಡಬಹುದಾಗಿದೆ.
-: ಪ್ರಸಕ್ತ ವರ್ಷದ ಗುರಿ :-
ಪ್ರಸಕ್ತ ವರ್ಷ ಪ್ರತಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಒಟ್ಟು 500 ರಷ್ಟು ಸಸಿ ನೆಡುವ ಗುಂಡಿಗಳನ್ನು ಮನರೇಗಾ ಯೋಜನೆಯಡಿ ತೋಡಲಾಗುವುದು. ಕಾರ್ಮಿಕರು 2 ಅಡಿ ಅಗಲ * 2 ಅಡಿ ಉದ್ದ * 1 ಅಡಿ ಆಳದ ಗುಂಡಿಗಳನ್ನು ರಸ್ತೆಯ ಬದಿ, ಕೆರೆಯ ಬದಿ ಹಾಗೂ ಸರ್ಕಾರಿ ಕಟ್ಟಡಗಳ ಆವರಣದ ಒಳಗಡೆ ನಿರ್ಮಿಸಲಿದ್ದಾರೆ. ಮಳೆನೀರು ಕೊಯ್ಲು ಯೋಜನೆಯು ಸಹ ಇದ್ದು ಗ್ರಾಮ ಪಂಚಾಯತಿ ಕಟ್ಟಡಗಳಿಗೆ ಮೊದಲ ಆದ್ಯತೆ ನೀಡಿ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಡಾ. ಮಹೇಶ ಕುರಿಯವರ ಹಾಗೂ ಮನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಪರಶುರಾಮ ಘಸ್ತೆ ಇವರುಗಳು ತಿಳಿಸಿದ್ದಾರೆ.

loading...