ಐಸಿಸಿ ವಿಶ್ವಕಪ್‌ ಉದ್ಘಾಟನಾ ಪಂದ್ಯ: ಆಂಗ್ಲರಿಗೆ ಆಫ್ರಿಕನ್ನರು ಸವಾಲು

0
45

ಲಂಡನ್‌:- ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ತೀವ್ರ ಕುತೂಹಲ ಕೆರಳಿಸಿರುವ ಐಸಿಸಿ ವಿಶ್ವಕಪ್‌ ಟೂರ್ನಿಯನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್‌ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಪ್ರಸಕ್ತ ಆವೃತ್ತಿಯ ವಿಶ್ವಕಪ್‌ನ ಉದ್ಘಾಟನಾ ಪಂದ್ಯ ನಾಳೆ ಇಲ್ಲಿನ ಕೆನ್ನಿಂಗ್ಟನ್‌ ಓವಲ್‌ ಮೈದಾನದಲ್ಲಿ ನಡೆಯಲಿದ್ದು, ಚೊಚ್ಚಲ ವಿಶ್ವಕಪ್‌ ಮೇಲೆ ಕಣ್ಣಿಟ್ಟಿರುವ ಆತಿಥೇಯ ಇಂಗ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.

ಇಂಗ್ಲೆಂಡ್‌ ಬ್ಯಾಟಿಂಗ್‌ ಲೈನ್‌ ಅಫ್‌ ಅದ್ಭುತವಾಗಿದ್ದು, ಬೌಲಿಂಗ್‌ ವಿಭಾಗದಲ್ಲಿ ಒಟ್ಟು ಏಳು ಮಂದಿ ಇದ್ದಾರೆ. ಸದ್ಯದ ಪ್ರದರ್ಶನ ಗಮನಿಸಿದರೆ ಈ ಬಾರಿಯ ವಿಶ್ವಕಪ್‌ ಗೆಲ್ಲುವ ಫೇವರಿಟ್‌ ತಂಡವಾಗಿ ಇಂಗ್ಲೆಂಡ್‌ ಮುಂಚೂಣಿಯಲ್ಲಿದೆ. ಐಸಿಸಿ ವಿಶ್ವಕಪ್‌ನಲ್ಲಿ ಒಟ್ಟು ಆರು ಬಾರಿ ಇಂಗ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಿದ್ದು, ತಲಾ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿವೆ.

ಎದುರಾಳಿ ದಕ್ಷಿಣ ಆಫ್ರಿಕಾ ಈ ಬಾರಿ ವಿಶ್ವಕಪ್‌ ಗೆಲ್ಲುವ ಸಂಭಾವ್ಯ ತಂಡ ಎಂದು ಪರಿಗಣಿಸುವುದು ಕಷ್ಟ. ಆದರೆ, ಕಗಿಸೋ ರಬಾಡ, ಲುಂಗಿ ಎನ್‌ಗಿಡಿ ಹಾಗೂ ಡೇಲ್‌ ಸ್ಟೇನ್‌ ಅವರನ್ನೊಳಗೊಂಡ ಬೌಲಿಂಗ್‌ ಲೈನ್‌ ಅಫ್‌ ಬಲಿಷ್ಠವಾಗಿದೆ. ಎಂಥ ತಂಡವನ್ನು ಬೇಕಾದರೂ ನೆಲಕ್ಕೆ ಉರುಳಿಸುವ ಸಾಮರ್ಥ್ಯ ಅವರಲ್ಲಿದೆ. ಆದರೆ, ಡೇಲ್‌ ಸ್ಟೇನ್‌ ಭುಜದ ಗಾಯದಿಂದ ಚೇತರಿಕೆ ಕಾಣುತ್ತಿದ್ದು, ನಾಳಿನ ಉದ್ಘಾಟನಾ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಎರಡೂ ಅಭ್ಯಾಸ ಪಂದ್ಯಗಳಲ್ಲಿ ಉಭಯ ತಂಡಗಳು ಒಂದೊಂದು ಪಂದ್ಯದಲ್ಲಿ ಜಯ ಸಾಧಿಸಿವೆ. ದಕ್ಷಿಣ ಆಫ್ರಿಕಾ ಮೊದಲ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 87 ರನ್‌ಗಳಿಂದ ಜಯ ಸಾಧಿಸಿತ್ತು. ಆದರೆ, ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯಬೇಕಿದ್ದ ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆದರೆ, ಆತಿಥೇಯ ಇಂಗ್ಲೆಂಡ್‌ ಮೊದಲ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 12 ರನ್‌ಗಳಿಂದ ಸೋಲು ಒಪ್ಪಿಕೊಂಡಿತ್ತು. ನಂತರ ಎರಡನೇ ಅಭ್ಯಾಸ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ 9 ವಿಕೆಟ್‌ಗಳಿಂದ ಜಯ ಸಾಧಿಸಿತ್ತು.
ಇಂಗ್ಲೆಂಡ್‌ ತಂಡದಲ್ಲಿ ಪ್ರಸ್ತುತ ಜೋಸ್‌ ಬಟ್ಲರ್‌ ಭರ್ಜರಿ ಲಯದಲ್ಲಿದ್ದಾರೆ. ಎದುರಾಳಿ ಬೌಲರ್‌ಗಳ ಯಾವುದೇ ಎಸೆತವನ್ನು ಸುಲಭವಾಗಿ ಬೌಂಡರಿ ಗೆರೆ ದಾಟಿಸುವ ಸಾಮರ್ಥ್ಯ ಅವರಲ್ಲಿದೆ. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುವ ಇವರು ಕ್ರೀಸ್‌ನಲ್ಲಿ ನಿಂತರೆ ಎದುರಾಳಿ ಬೌಲರ್‌ಗಳಿಗೆ ನಡುಕು ಉಂಟುಮಾಡುತ್ತಾರೆ. ಜತೆಗೆ, ಜಾನಿ ಬೈರ್‌ಸ್ಟೋ, ಜೇಸನ್‌ ರಾಯ್‌ ಅದ್ಭುತ ಲಯದಲ್ಲಿದ್ದಾರೆ.
ಯುವ ಪ್ರತಿಭೆ ಜೋಫ್ರಾ ಆರ್ಚರ್‌ ಅವರು ಇಂಗ್ಲೆಂಡ್‌ ಬೌಲಿಂಗ್‌ ವಿಭಾಗದಲ್ಲಿ ತೀವ್ರ ನಿರೀಕ್ಷೆ ಮೂಡಿಸಿದ್ದಾರೆ. ಇತ್ತೀಚೆಗಷ್ಟೆ ಅಂತಾರಾಷ್ಟ್ರೀಯ ವೇದಿಕೆಗೆ ಪದಾರ್ಪಣೆ ಮಾಡಿದ್ದ ಆರ್ಚರ್‌ ಗಮನಾರ್ಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್‌ ಪರ ಆರಂಭಿಕರಾಗಿ ದಾಳಿ ಮಾಡುವ ಸಾಧ್ಯತೆ ಇದೆ.

ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್‌ ಡುಪ್ಲೇಸಿಸ್ ಪ್ರಸ್ತುತ ಉತ್ತಮ ಲಯದಲ್ಲಿದ್ದು, ಅದೇ ಲಯವನ್ನು ಟೂರ್ನಿಯಲ್ಲಿ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಇವರಿಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳು ಸಾಥ್‌ ನೀಡುವ ಅಗತ್ಯವಿದೆ.
ಇನ್ನೂ ಬೌಲಿಂಗ್‌ ವಿಭಾಗದಲ್ಲಿ ಕಗಿಸೋ ರಬಾಡ ದಕ್ಷಿಣ ಆಫ್ರಿಕಾ ತಂಡದ ಕೀ ಬೌಲರ್‌. ಇತ್ತೀಚೆಗಷ್ಟೆ ಮುಕ್ತಾಯವಾಗಿದ್ದ ಐಪಿಎಲ್‌ ಟೂರ್ನಿಯಲ್ಲಿ ಅದ್ಭುತ ಬೌಲಿಂಗ್‌ ಪ್ರದರ್ಶನ ತೋರಿದ್ದರು. ಅದೇ ಲಯ ಮಹತ್ವದ ಟೂರ್ನಿಯಲ್ಲೂ ಮುಂದುವರಿಸುವ ಇರಾದೆಯಲ್ಲಿದ್ದಾರೆ. ಡೇಲ್‌ ಸ್ಟೇನ್ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಅವರು ಈ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇವರ ಬದಲು ಕ್ರಿಸ್‌ ಮೋರಿಸ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಇಮ್ರಾನ್‌ ತಾಹೀರ್‌ ಮೇಲೆಯೂ ಸಾಕಷ್ಟು ನಿರೀಕ್ಷೆ ಇಡಲಾಗಿದೆ.
ಸಂಭಾವ್ಯ ಆಟಗಾರರು
ಇಂಗ್ಲೆಂಡ್‌: ಜೇಸನ್ ರಾಯ್, ಜಾನಿ ಬೈರ್‌ಸ್ಟೋ, ಜೋ ರೂಟ್, ಇಯಾನ್ ಮೊರ್ಗನ್ (ನಾಯಕ), ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ (ವಿ.ಕೀ), ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಲಿಯಾಮ್ ಪ್ಲಂಕೆಟ್‌/ ಮಾರ್ಕ್ ವುಡ್, ಜೊಫ್ರಾ ಆರ್ಚರ್, ಆದಿಲ್ ರಶೀದ್.
ದಕ್ಷಿಣ ಆಫ್ರಿಕಾ: ಹಾಶಿಮ್ ಅಮ್ಲಾ, ಕ್ವಿಂಟಾನ್ ಡಿ ಕಾಕ್ (ವಿ.ಕೀ), ಐಡೆನ್ ಮಾಕ್ರಾಮ್‌ / ರಾಸ್ಸಿ ವ್ಯಾನ್ ಡೆರ್ ಡಸೆನ್, ಫಾಫ್ ಡು ಪ್ಲೆಸಿಸ್ (ನಾಯಕ), ಜೆ.ಪಿ ಡುಮಿನಿ, ಡೇವಿಡ್ ಮಿಲ್ಲರ್, ಆ್ಯಂಡಿಲೆ ಫೆಹಲುಕ್ವೇವೊ, ಕ್ರಿಸ್ ಮೋರಿಸ್, ಕಗಿಸೋ ರಬಾಡ, ಲುಂಗಿ ಎನ್‌ಗಿಡಿ, ಇಮ್ರಾನ್ ತಾಹೀರ್.

ಸ್ಥಳ: ಕೆನ್ನಿಂಗ್ಟನ್‌ ಓವಲ್‌, ಲಂಡನ್‌

ಸಮಯ: ಮಧ್ಯಾಹ್ನ 03:00(ಭಾರತದ ಕಾಲಮಾನ)

loading...