ಜೋರ್ಫಾ ಆರ್ಚರ್‌ ಶ್ಲಾಘಿಸಿದ ಮೊಯಿನ್‌ ಅಲಿ

0
9

ಲಂಡನ್‌:- ದಕ್ಷಿಣ ಆಫ್ರಿಕಾ ವಿರುದ್ಧ ಅತ್ಯುತ್ತಮ ಬೌಲಿಂಗ್‌ ಮಾಡಿ ಮೂರು ವಿಕೆಟ್‌ ಕಬಳಿಸಿದ್ದ ಜೊರ್ಫಾ ಆರ್ಚರ್‌ ಅವರನ್ನು ತಂಡದ ಸಹ ಆಟಗಾರ ಮೊಯಿನ್‌ ಅಲಿ ಶ್ಲಾಘಿಸಿದ್ದಾರೆ.
ಕೇವಲ ಅಂತಾರಾಷ್ಟ್ರೀಯ ಪಂದ್ಯಗಳಾಡಿದ ಬಳಿಕ ಮಹತ್ವದ ಟೂರ್ನಿಯಾದ ಐಸಿಸಿ ವಿಶ್ವಕಪ್‌ಗೆ ಇಂಗ್ಲೆಂಡ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಜೊರ್ಫಾ ಆರ್ಚರ್‌ ಅವರು ನಿರೀಕ್ಷೆಗೂ ಮೀರಿದ ಬೌಲಿಂಗ್‌ ಪ್ರದರ್ಶನವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ ತೋರಿದ್ದಾರೆ. ಆ ಮೂಲಕ ತಂಡದಲ್ಲಿ ಸ್ಥಾನ ಪಡೆದಿರುವುದನ್ನು ಸಮರ್ಥಿಸಿಕೊಂಡರು.
ಐಡೆನ್‌ ಮಕ್ರಾಮ್‌, ನಾಯಕ ಫಾಫ್‌ ಡು ಪ್ಲೆಸಿಸ್‌ ಹಾಗೂ ರಸ್ಸಿ ವಾನ್‌ ಡೆರ್‌ ಡಸೆನ್‌ ಅವರ ವಿಕೆಟ್‌ಗಳನ್ನು ಕಬಳಿಸಿದರು. ಚೊಚ್ಚಲ ವಿಶ್ವಕಪ್‌ ಪದಾರ್ಪಣೆ ಮಾಡಿದ ಪಂದ್ಯದಲ್ಲೇ 27 ಕ್ಕೆ 3 ವಿಕೆಟ್‌ ಪಡೆದು ಸಾಧನೆ ಮಾಡಿದರು.
“ಆರ್ಚರ್‌ ಅದ್ಭುತ ಬೌಲರ್‌. ಅವರ ರೀತಿ ವೇಗದ ಬೌಲರ್‌ ಅನ್ನು ನಾನೆಂದೂ ವೃತ್ತಿ ಜೀವನದಲ್ಲಿ ಎದುರಿಸಿಲ್ಲ. ಅವರ ಬೌಲಿಂಗ್‌ನಲ್ಲಿ ವಿಶಿಷ್ಟ ಶೈಲಿಯನ್ನು ಕರಗತ ಮಾಡಿಕೊಂಡಿದ್ದಾರೆ. ಅವರ ವೇಗ ಕೂಡ ಅವರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ತಂಡ ಕಡಿಮೆ ಮೊತ್ತ ಕಲೆ ಹಾಕಿದರೂ ಎದುರಾಳಿ ತಂಡವನ್ನು ನಿಯಂತ್ರಿಸುವ ಸಾಮರ್ಥ್ಯ ಅವರಲ್ಲಿದೆ” ಎಂದು ಮೊಯಿನ್‌ ಅಲಿ ಕೊಂಡಾಡಿದರು.
ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ಗೆ ಜಾನಿ ಬೈರ್‌ ಸ್ಟೋ ವಿಕೆಟ್‌ ಉರುಳುತ್ತಿದ್ದಂತೆ ತಂಡದಲ್ಲಿ ತೀವ್ರ ಒತ್ತಡ ಉಂಟಾಯಿತು. ಆದರೆ, ನಂತರ ಜತೆಯಾದ ಜೋ ರೂಟ್‌ ಹಾಗೂ ಜೇಸನ್‌ ರಾಯ್‌ ಜೋಡಿ ಅದ್ಭುತ ಜತೆಯಾಟವಾಡಿತು. ನಂತರ, ಮಧ್ಯಮ ಕ್ರಮಾಂಕದಲ್ಲಿ ನಾಯಕ ಇಯಾನ್‌ ಮಾರ್ಗನ್‌ ಹಾಗೂ ಬೆನ್‌ ಸ್ಟೋಕ್ಸ್ ಜೋಡಿ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಸಫಲವಾಯಿತು.
“ದಿ ಓವಲ್‌ ಅಂಗಳದಲ್ಲಿ ಮೊದಲು ಬ್ಯಾಟಿಂಗ್‌ ಮಾಡುವುದು ಕಠಿಣವಾಗಿದೆ. ಆದಾಗ್ಯೂ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ವಿಶ್ವಕಪ್‌ ಉದ್ಘಾಟನಾ ಪಂದ್ಯ ಗೆಲುವಿಗೆ ತಂಡ ಅರ್ಹವಾಗಿದೆ” ಎಂದು ಮೊಯಿನ್‌ ಅಲಿ ತಿಳಿಸಿದ್ದಾರೆ.

loading...