ಉಳಿದ ಪಂದ್ಯಗಳಿಗೆ ತಿರುಗೇಟು ನೀಡುತ್ತೇವೆ : ಡುಪ್ಲೆಸಿಸ್‌

0
11

ಲಂಡನ್‌:- ಬಾಂಗ್ಲಾದೇಶದ ವಿರುದ್ಧ ಐಸಿಸಿ ವಿಶ್ವಕಪ್‌ ಎರಡನೇ ಪಂದ್ಯದಲ್ಲೂ ದಕ್ಷಿಣ ಆಫ್ರಿಕಾ ಸೋಲು ಅನುಭವಿಸಿದ ಬಳಿಕ ಪ್ರತಿಕ್ರಿಯಿಸಿದ ನಾಯಕ ಫಾಫ್‌ ಡು ಪ್ಲೆಸಿಸ್‌ ಮುಂದಿನ ಪಂದ್ಯಗಳಿಗೆ ನಾವು ಇನ್ನಷ್ಟು ಬಲಿಷ್ಠಗೊಂಡು ಎದುರಾಳಿ ತಂಡಗಳಿಗೆ ಕಠಿಣ ಪೈಪೋಟಿ ನೀಡಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂಗ್ಲೆಂಡ್‌ ವಿರುದ್ಧ ಹೀನಾಯವಾಗಿ ಸೋಲು ಕಂಡಿದ್ದ ದಕ್ಷಿಣ ಆಫ್ರಿಕಾ, ಬಾಂಗ್ಲಾ ನೀಡಿದ 331 ರನ್‌ ಗುರಿ ಬೆನ್ನತ್ತಿ ಕೇವಲ 21 ರನ್‌ಗಳಿಂದ ಸೋಲು ಅನುಭವಿಸಿತ್ತು. ಕಳೆದ ಪಂದ್ಯಕ್ಕಿಂತ ಈ ಕಾದಾಟದಲ್ಲಿ ಆಫ್ರಿಕಾ ತನ್ನ ಪ್ರದರ್ಶನದಲ್ಲಿ ಸುಧಾರಣೆ ಕಂಡಿದೆ.
ಪಂದ್ಯದ ಬಳಿಕ ಮಾತನಾಡಿದ ಅವರು, “ಭಾನುವಾರದ ಪಂದ್ಯದಲ್ಲಿ ನಾವು ರೂಪಿಸಿದ್ದ ಯೋಜನೆ ಸಕಾರವಾಗಲಿಲ್ಲ. ಪಂದ್ಯದ ಆರಂಭದಲ್ಲೇ ಲುಂಗಿ ಎನ್‌ಗಿಡಿ ಸ್ನಾಯು ಸೆಳೆತದ ಗಾಯಕ್ಕೆ ಒಳಗಾದರು. ಇದು ನಮ್ಮ ಬೌಲಿಂಗ್‌ ವಿಭಾಗದ ಮೇಲೆ ಗಂಭೀರ ಪರಿಣಾಮ ಬೀರಿತು. ಅದರಿಂದಾಗಿ ಬಾಂಗ್ಲಾ 330 ರನ್‌ ಗಳಿಸಲು ಸಾಧ್ಯವಾಯಿತು. ಬ್ಯಾಟಿಂಗ್‌ನಲ್ಲೂ ಕೂಡ ಪ್ರತಿಯೊಬ್ಬರು ಉತ್ತಮ ಪ್ರದರ್ಶನ ತೋರಿದ್ದರು. ಆದರೆ, ಅಂತಿಮವಾಗಿ 21 ರನ್‌ ಗಳಿಂದ ಸೋಲು ಅನುಭವಿಸಬೇಕಾಯಿತು” ಎಂದರು.
” ಈ ಪಂದ್ಯ ನಮಗೆ ಸುಲಭವಾಗಿರಲಿಲ್ಲ. ದಕ್ಷಿಣ ಆಫ್ರಿಕಾ ಕ್ರೀಡಾ ಸ್ಫೂರ್ತಿಯ ರಾಷ್ಟ್ರವಾಗಿದೆ. ನಮ್ಮ ಆಟಗಾರರು ಭಾನುವಾರದ ಪಂದ್ಯದಲ್ಲಿ ನಿಜವಾದ ಕೌಶಲ ಪ್ರದರ್ಶನ ತೋರುವಲ್ಲಿ ಎಡವಿದ್ದಾರೆ. ಆದರೆ, ಮುಂದಿನ ಪಂದ್ಯಗಳಲ್ಲಿ ಖಂಡಿತ ನಮ್ಮ ಆಟಗಾರರು ಉತ್ತಮ ತಮ್ಮ ಸಾಮರ್ಥ್ಯ ಸಾಬೀತುಪಡಿಸಲಿದ್ದಾರೆ. ಬಾಂಗ್ಲಾ ವಿರುದ್ಧ 50 ರಿಂದ 60 ರಷ್ಟು ಪ್ರದರ್ಶನದಲ್ಲಿ ಬೆಳವಣಿಗೆ ಸಾಧಿಸಿದ್ದೇವೆ ” ಎಂದು ಭರವಸೆ ನೀಡಿದ್ದಾರೆ.
ದಕ್ಷಿಣ ಆಫ್ರಿಕಾ ಜೂ. 5 ರಂದು ಭಾರತದ ವಿರುದ್ಧ ಸೆಣಸಲಿದೆ.

loading...