ಕೋಟೆ ಕೆರೆ ಪ್ರವೇಶ ಶುಲ್ಕ ಮರುಪರಿಶೀಲನೆ ; ಆಯಕ್ತ ಮೇಘಣ್ಣನವರ ಭರವಸೆ

0
27

ಬೆಳಗಾವಿ: ಕೋಟೆ ಕೆರೆಯ ಆವರಣದ ಪ್ರವೇಶಕ್ಕೆ ಶುಲ್ಕ ವಿಧಿಸಿರುವ ಹಿಂದಿನ ಜಿಲ್ಲಾಧಿಕಾರಿ ಡಾ. ವಿಶಾಲ್ ಅವರ ನಿರ್ಧಾರವನ್ನು ಸಕಾರಾತ್ಮಕವಾಗಿ ಮರು ಪರಿಶೀಲಿಸಲಾಗುವದೆಂದು ಪ್ರಾದೇಶಿಕ ಆಯುಕ್ತ ಪಿ. ಎ. ಮೇಘಣ್ಣವರ ಹಾಗೂ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಶುಕ್ರವಾರ ಕನ್ನಡಪರ ಹಾಗೂ ಇತರ ಸಂಘಟನೆಗಳ ಮುಖ್ಯಸ್ಥರಿಗೆ ಭರವಸೆ ನೀಡಿದ್ದಾರೆ.

ಮುಂಜಾನೆ ಪ್ರಾದೇಶಿಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರವೇಶ ಶುಲ್ಕ ಹೇರಿಕೆಯ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆದ ನಂತರ ಉಭಯ ಹಿರಿಯ ಅಧಿಕಾರಿಗಳು ಸಂಘಟನೆಗಳ ಮುಖ್ಯಸ್ಥರಿಗೆ ಈ ಭರವಸೆ ಕೊಟ್ಟಿದ್ದಾರೆ.

ಪ್ರವೇಶ ಶುಲ್ಕ ವಿಧಿಸಿ ಹಿಂದಿನ ಜಿಲ್ಲಾಧಿಕಾರಿಗಳು ನಿರ್ಧಾರ ಕೈಕೊಳ್ಳುವ ಮೊದಲು ಪರಿಶೀಲಿಸಿದ ಅಂಶಗಳನ್ನು ಮರು ಪರಿಶೀಲಿಸಿ ಸಕಾರಾತ್ಮಕ ನಿರ್ಣಯ ಕೈಕೊಳ್ಳಲು ತಾವು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದಾಗಿ ಮೇಘಣ್ಣವರ ಅವರು ಸಭೆಗೆ ತಿಳಿಸಿದರು.

ಮರು ಪರಿಶೀಲನೆ ನಿರ್ಧಾರ ಕೈಕೊಳ್ಳುವ ಮೊದಲು ತಾವು ಈ ಸಂಬಂಧದ ಕಡತದಲ್ಲಿಯ ಅಂಶಗಳನ್ನು ಪರಿಶೀಲಿಸುವದಾಗಿ ಬೊಮ್ಮನ್ನಹಳ್ಳಿ ಅವರು ಭರವಸೆ ನೀಡಿದರು.

ಆರಂಭದಲ್ಲಿ ಮನವಿ ಸಲ್ಲಿಸಿ ಮಾತನಾಡಿ, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಹಿಂದಿನ ಜಿಲ್ಲಾಧಿಕಾರಿಗಳು ತಪ್ಪು ತಿಳುವಳಿಕೆಯಿಂದಾಗಿ ಹಾಗೂ ವಾಸ್ತವತೆಯ ಅರಿವಿನ ಅಭಾವದಿಂದಾಗಿ ಕೈಕೊಂಡಿರಬಹುದಾದ ಈ ನಿರ್ಧಾರದಿಂದಾಗಿ ಕೋಟೆ ಕೆರೆಯ ಆವರಣದಲ್ಲಿ ನಿತ್ಯ ವಾಯುವಿಹಾರ ಮಾಡುವ ಸಾಮಾನ್ಯ ಜನರಿಗೆ ತೊಂದರೆಯಾಗಿದೆ. ಈ ನಿರ್ಧಾರವನ್ನು ಹಿರಿಯ ಅಧಿಕಾರಿಗಳು ಪುನರ್ ಪರಿಶೀಲಿಸಬೇಕು ಎಂದು ಮನವಿ ಮಾಡಿಕೊಂಡರು.

ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಶೀಬಿ. ತಿಪ್ಪೇಸ್ವಾಮಿ ಅವರು ಮಾತನಾಡಿ , ಜನರ ಅಭಿಪ್ರಾಯವನ್ನು ಕೇಳದೆ ಏಕಪಕ್ಷಿಯವಾಗಿ ಕೈಕೊಂಡ ಶುಲ್ಕ ಹೇರಿಕೆ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವ ತಳವಾರ, ಯುವ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ಜಿಲ್ಲಾ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಸಲೀಮ ಖತೀಬ, ಎಂ.ಜಿ. ಮಕಾನದಾರ, ಶಿವಪ್ಪ ಶಮರಂತ, ರಾಜು ಕುಸೋಜಿ, ಸಾಗರ ಬೊರಗಲ್ಲ, ಬಾಬು ಸಂಗೋಡಿ, ಎಂ.ಕೆ. ಕುಂದರಗಿ, ರಜತ ಅಂಕಲೆ ಮುಂತಾದವರು ಹಾಜರಿದ್ದರು.

loading...