ಕಿವಿಸ್ ವಿರುದ್ಧ ಸೇಡು ತೀರಿಸಿಕೊಳ್ಳುವ ತುಡಿತದಲ್ಲಿ ಭಾರತ

0
13

ನಾಟಿಂಗ್‌ಹ್ಯಾಮ್‌, ಜೂ 12 (ಯುಎನ್‌ಐ) ಆಡಿದ ಎಲ್ಲ ಪಂದ್ಯಗಳಲ್ಲಿ ಗೆದ್ದು ಪ್ರಸಕ್ತ ಆವೃತ್ತಿಯ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಮುಂದುವರಿಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ನಾಳೆ ಇಲ್ಲಿನ ಟ್ರೆಂಟ್‌ ಬ್ರಿಡ್ಜ್‌ ಅಂಗಳದಲ್ಲಿ ಮುಖಾಮುಖಿಯಾಗುತ್ತಿವೆ.
ನ್ಯೂಜಿಲೆಂಡ್‌ ಆಡಿದ ಮೂರು ಪಂದ್ಯಗಳಲ್ಲಿ ಗೆದ್ದು ಅತ್ಯುತ್ತಮ ಲಯದಲ್ಲಿದೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 10 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಬಳಿಕ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯಗಳಲ್ಲಿಯೂ ತನ್ನ ಪಾರಮ್ಯ ಮೆರೆದಿತ್ತು.
ಮತ್ತೊಂದೆಡೆ ವಿಶ್ವಕಪ್‌ ಗೆಲ್ಲುವ ಫೇವರಿಟ್‌ ತಂಡವಾಗಿರುವ ಭಾರತ, ಬಲಿಷ್ಠ ತಂಡಗಳಾದ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಗೆದ್ದು ವಿಶ್ವಾಸದಲ್ಲಿದೆ. ಆದರೆ, ವಿಶ್ವಕಪ್‌ ಟೂರ್ನಿ ಆರಂಭಕ್ಕೂ ಮುನ್ನ ಕೇನ್‌ ವಿಲಿಯಮ್ಸನ್‌ ಪಡೆಯ ವಿರುದ್ಧ ಭಾರತ ಹೀನಾಯ ಸೋಲು ಅನುಭವಿಸಿತ್ತು. ಇದು ತಂಡದ ಆಟಗಾರರ ಮನಸ್ಸಿನಲ್ಲಿದೆ.

ಲಂಡನ್‌ ದಿ ಓವಲ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಕಿವಿಸ್‌ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಟ್ರೆಂಟ್‌ ಬೌಲ್ಟ್‌ ಅವರ ವೇಗ ಹಾಗೂ ಸ್ವಿಂಗ್‌ ಮಾರಕ ದಾಳಿಗೆ ಭಾರತದ ಬ್ಯಾಟ್ಸ್‌ಮನ್‌ಗಳು ನೆಲಕಚ್ಚಿದ್ದರು. ಅದರಂತೆ ಭಾರತ ಕೇವಲ 179 ರನ್‌ಗಳಿಗೆ ಆಲೌಟ್‌ ಆಗಿತ್ತು. ನಂತರ ಸುಲಭ ಗುರಿ ಬೆನ್ನತ್ತಿದ್ದ ಕಿವಿಸ್‌ ಗೆದ್ದು ವಿಶ್ವಾಸ ಹೆಚ್ಚಿಸಿಕೊಂಡಿತ್ತು.

ಹೆಬ್ಬೆರಳು ಗಾಯದಿಂದ ವಿಶ್ರಾಂತಿ ಪಡೆಯುತ್ತಿರುವ ಕಳೆದ ಪಂದ್ಯದ ಶತಕವೀರ ಶಿಖರ್‌ ಧವನ್‌ ನಾಳಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದು ಭಾರತ ತಂಡಕ್ಕೆ ನಷ್ಟವಾಗಿದೆ. ಆದರೂ, ರೋಹಿತ್‌ ಶರ್ಮಾ ಅವರ ಆರಂಭಿಕ ಜತೆಗಾರನಾಗಿ ಕೆ.ಎಲ್‌ ರಾಹುಲ್‌ ಕಣಕ್ಕೆ ಇಳಿಯುವ ಸಾಧ್ಯತೆ ದಟ್ಟವಾಗಿದೆ. ರೋಹಿತ್‌ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ತಮ್ಮ ಪ್ರಬುದ್ಧ ಬ್ಯಾಟಿಂಗ್‌ನಿಂದ ಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಅವರು ಉತ್ತಮ ಲಯದಲ್ಲಿದ್ದು, ನಾಳಿನ ಪಂದ್ಯದಲ್ಲಿ ರಾಹುಲ್‌ ಜತೆ ಉತ್ತಮ ಆರಂಭ ನೀಡುವ ವಿಶ್ವಾಸದಲ್ಲಿದ್ದಾರೆ.
ಧವನ್ ಅವರಿಂದ ತೆರವಾಗಿರುವ ಸ್ಥಾನಕ್ಕೆ ಯಾರನ್ನು ನಾಳೆ ಕಣಕ್ಕೆ ಇಳಿಸಲಿದ್ದಾರೆಂಬುದು ತೀವ್ರ ಕುತೂಹಲ ಕೆರಳಿಸಿದೆ. ಬ್ಯಾಟಿಂಗ್‌ ಶಕ್ತಿಯಾಗಿ ದಿನೇಶ್‌ ಕಾರ್ತಿಕ್‌ ಅವರಿಗೆ ಅವಕಾಶ ನೀಡಬಹುದು. ಇಲ್ಲವಾದಲ್ಲಿ ಬೌಲಿಂಗ್‌ ಆಯ್ಕೆ ಪರಿಗಣಿಸಿ ರವೀಂದ್ರ ಜಡೇಜಾ ಅಥವಾ ವಿಜಯ್‌ ಶಂಕರ್‌ ಅವರಿಗೆ ಮಣೆ ಹಾಕಬಹುದು.
ಆದರೆ, ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಸತತ ಎರಡು ಪಂದ್ಯಗಳು ರದ್ದಾಗಿವೆ. ಅದರಂತೆ ನಾಟಿಂಗ್‌ಹ್ಯಾಮ್‌ನಲ್ಲೂ ಕೂಡ ವಾತಾವರಣ ಚೆನ್ನಾಗಿಲ್ಲ. ಹಾಗಾಗಿ, ನಾಳೆ ಮಳೆ ಬರುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ, ನಾಳಿನ ಪಂದ್ಯಕ್ಕೆ ಮಳೆ ಭೀತಿ ಶುರುವಾಗಿದೆ.
ಇಲ್ಲಿನ ಟ್ರೆಂಟ್‌ ಬ್ರಿಡ್ಜ್‌ ಮೈದಾನದ ಪಿಚ್‌ ಸಾಮಾನ್ಯವಾಗಿ ಬ್ಯಾಟಿಂಗ್‌ ಸ್ನೇಹಿಯಾಗಿದೆ. ಆದರೆ, ಮೋಡಕವಿದ ವಾತಾವರಣವಿದ್ದರೆ ಖಂಡಿತ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ. ಇಲ್ಲಿಯವರೆಗೂ ಉಭಯ ತಂಡಗಳು ವಿಶ್ವಕಪ್‌ ಎಲ್ಲ ಆವೃತ್ತಿಗಳಲ್ಲಿ ಏಳು ಬಾರಿ ಮುಖಾಮುಖಿಯಾಗಿವೆ. ಭಾರತ ಮೂರರಲ್ಲಿ ಗೆಲುವು ಸಾಧಿಸಿದರೆ, ಕಿವಿಸ್‌ ನಾಲ್ಕು ಬಾರಿ ಜಯ ಕಂಡಿದೆ. ಆದರೆ, ವಿರಾಟ್‌ ಕೊಹ್ಲಿ ಪಡೆ ಈ ದಾಖಲೆಯನ್ನು ಉತ್ತಮಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ತಂಡಗಳು

ಭಾರತ:

ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ(ಉಪನಾಯಕ), ಮಹೇಂದ್ರ ಸಿಂಗ್‌ ಧೋನಿ (ವಿ.ಕೀ), ಶಿಖರ್‌ ಧವನ್‌, ಕೆ.ಎಲ್ ರಾಹುಲ್‌, ದಿನೇಶ್‌ ಕಾರ್ತಿಕ್, ಭುವನೇಶ್ವರ್‌ ಕುಮಾರ್‌, ಜಸ್ಪ್ರಿತ್‌ ಬುಮ್ರಾ, ಮೊಹಮ್ಮದ್‌ ಶಮಿ, ಯಜುವೇಂದ್ರ ಚಾಹಲ್‌, ಕುಲ್ದೀಪ್‌ ಯಾದವ್‌, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ವಿಜಯ್‌ ಶಂಕರ್, ರವೀಂದ್ರಾ ಜಡೇಜಾ.

ನ್ಯೂಜಿಲೆಂಡ್‌:
ಕೇನ್‌ ವಿಲಿಯಮ್ಸನ್‌(ನಾಯಕ), ರಾಸ್‌ ಟೇಲರ್‌, ಟ್ರೆಂಟ್‌ ಬೌಲ್ಟ್‌, ಮಾರ್ಟಿನ್‌ ಗುಪ್ಟಿಲ್‌, ಕಾಲಿನ್‌ ಡಿ ಗ್ರಾಂಡ್‌ಹೋಮ್‌, ಕಾಲಿನ್‌ ಮನ್ರೊ, ಜೇಮ್ಸ್‌ ನಿಶ್ಯಾಮ್ಸ್‌, ಮಿಚೆಲ್‌ ಸ್ಯಾಂಟ್ನರ್‌, ಟಾಮ್‌ ಬಂಡೆಲ್‌, ಟಾಮ್‌ ಲಥಾಮ್‌, ಹೆನ್ರಿ ನಿಕೋಲ್ಸ್, ಲುಕಿ ಫರ್ಗುಸನ್, ಮ್ಯಾಟ್‌ ಹೆನ್ರಿ, ಟಿಮ್‌ ಸೌಥೆ, ಇಶ್‌ ಸೋಧಿ
ಸಮಯ: ನಾಳೆ ಮಧ್ಯಾಹ್ನ 03:00
ಸ್ಥಳ: ಟ್ರೆಂಟ್‌ ಬ್ರಿಡ್ಜ್‌, ನಾಟಿಂಗ್‌ಹ್ಯಾಮ್‌

loading...