ಗೆಲುವಿನ ಲಯ ಮುಂದುವರಿಸುವ ವಿಶ್ವಾಸದಲ್ಲಿ ಆಸೀಸ್‌

0
7

ಲಂಡನ್‌:- ಪಾಕ್‌ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ನಾಳೆ ಇಲ್ಲಿನ ದಿ ಓವಲ್‌ ಕ್ರೀಡಾಂಗಣದಲ್ಲಿ ನಡೆಯುವ ಐಸಿಸಿ ವಿಶ್ವಕಪ್‌ 20ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದೆ.

ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಆತ್ಮವಿಶ್ವಾಸದಲ್ಲಿರುವ ಆಸ್ಟ್ರೇಲಿಯಾ ಸೆಮಿಫೈನಲ್‌ ತಲುಪುವ ಸಂಭಾವ್ಯ ತಂಡಗಳಲ್ಲಿ ಒಂದಾಗಿದೆ. ಆದರೂ, ನಾಳೆ ನಡೆಯುವ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದ್ದೆ ಆದಲ್ಲಿ ಅಂತಿಮ ನಾಲ್ಕರ ಘಟ್ಟದ ಹಾದಿಗೆ ಮತ್ತೊಂದು ಹೆಜ್ಜೆ ಇಡಲಿದೆ.
ಆಸೀಸ್‌ ಪಾಲಿಗೆ ಶುಭ ಸುದ್ದಿ ಯಾವುದೆಂದರೆ ಆಡಿದ ಎಲ್ಲ ಪಂದ್ಯಗಲ್ಲಿ ಕೇವಲ ಒಂದರಲ್ಲಿ ಮಾತ್ರ ಸೋಲು ಅನುಭವಿಸಿದೆ. ಉಳಿದ ಗೆಲುವು ಪಡೆದ ಪಂದ್ಯಗಳಲ್ಲಿ ಬೌಲಿಂಗ್‌ ವಿಭಾಗ ಯಶಸ್ವಿಯಾಗಿದೆ. ಆದರೆ, ಬ್ಯಾಟಿಂಗ್‌ ಇನ್ನಷ್ಟು ಸುಧಾರಣೆಯ ಅಗತ್ಯವಿದೆ.
ಪಾಕಿಸ್ತಾನದ ವಿರುದ್ಧ ಕಳೆದ ಪಂದ್ಯದಲ್ಲಿ ಡೇವಿಡ್‌ ವಾರ್ನರ್‌ ಅವರ ಅಮೋಘ ಶತಕ ಪ್ರಬುದ್ಧವಾಗಿ ಕೂಡಿತ್ತು. ಅಗ್ರ ಕ್ರಮಾಂಕದ ಬ್ಯಾಟಿಂಗ್‌ ವಿಭಾಗ ಸ್ಥಿರ ಪ್ರದರ್ಶನ ತೋರುವುದು ಅಗತ್ಯವಿದೆ. ಆದರೆ, ಮಧ್ಯಮ ಕ್ರಮಾಂಕದ ಅತ್ಯುತ್ತಮ ಲಯದಲ್ಲಿದೆ.
ಆಸೀಸ್‌ ಬಳಗದಲ್ಲಿ ಬೌಲಿಂಗ್‌ ವಿಭಾಗ ಬಲಿಷ್ಟವಾಗಿದೆ. ಆದರೆ, ಸ್ಪಿನ್‌ ವಿಭಾಗ ಸ್ಥಿರತೆ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ. ಆ್ಯಡಂ ಝಂಪಾ ಅವರು ಭಾರತದ ವಿರುದ್ಧ ಆಡಿದ ಕಳೆದ ಪಂದ್ಯದಲ್ಲಿ ಆರು ಓವರ್‌ಗಳಿಗೆ 50 ರನ್‌ ನೀಡಿ ದುಬಾರಿಯಾಗಿದ್ದರು. ಹಾಗಾಗಿ, ಪಾಕ್‌ ವಿರುದ್ಧದ ಪಂದ್ಯದಲ್ಲಿ ಅವರನ್ನು ಅಂತಿಮ 11ರಲ್ಲಿ ಪರಿಗಣಿಸಿರಲಿಲ್ಲ. ನಾಳಿನ ಪಂದ್ಯಕ್ಕೆ ನಥಾನ್‌ ಲಿಯಾನ್‌ಗೆ ಮಣೆ ಹಾಕುವ ಸಾಧ್ಯತೆ ಇದೆ.
ಮಳೆಯಿಂದ ಶ್ರೀಲಂಕಾಗೆ ಎರಡು ಪಂದ್ಯಗಳು ನಷ್ಟವಾಗಿದೆ. ಇನ್ನುಳಿದ ಎರಡರಲ್ಲಿ ಒಂದು ಪಂದ್ಯದಲ್ಲಿ ಜಯ ಹಾಗೂ ಮತ್ತೊಂದುಲ್ಲಿ ಸೋಲು ಅನುಭವಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಲಂಕಾ ಎರಡು ಪಂದ್ಯಗಳನ್ನು ಪೂರ್ಣಗೊಳಿಸಿದ್ದು, ತಂಡ ಹೇಳಿಕೊಳ್ಳುವಂಥ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಆದರೆ, ನಾಳಿನ ಆಸ್ಟ್ರೇಲಿಯಾ ವಿರುದ್ಧ ಪುಟಿದೇಳುವ ವಿಶ್ವಾಸದಲ್ಲಿದೆ.
ಅಫ್ಘಾನಿಸ್ತಾನ ವಿರುದ್ಧದ ಕಳೆದ ಪಂದ್ಯದಲ್ಲಿ ಶ್ರೀಲಂಕಾ ಆರಂಭದಲ್ಲಿ ಉತ್ತಮ ಬ್ಯಾಟಿಂಗ್‌ ಮಾಡಿ ಎರಡು ವಿಕೆಟ್‌ ಕಳದುಕೊಂಡು 144 ರನ್‌ ಗಳಿಸಿತ್ತು. ಬಳಿಕ 201 ರನ್‌ಗಳಿಗೆ ಸರ್ವಪತನವಾಗಿತ್ತು. ಆದರೂ ಪಂದ್ಯದಲ್ಲಿ ಬೌಲಿಂಗ್‌ ಪಡೆಯ ನೆರವಿನಿಂದ ಲಂಕಾ ಜಯ ಸಾಧಿಸಿತ್ತು. ನಾಳಿನ ಪಂದ್ಯದಲ್ಲಿ ಬಲಿಷ್ಟ ಆಸೀಸ್‌ ವಿರುದ್ಧ ಗೆಲುವು ಪಡೆಯಬೇಕಾದರೆ, ಎಲ್ಲ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ತೋರುವುದು ಅನಿವಾರ್ಯ. ಲಂಕಾ ಪರ ನಾಯಕ ದಿಮುತ್‌ ಕರುಣರತ್ನೆ ಹಾಗೂ ಕುಸಾಲ್‌ ಪೆರೆರಾ ಅವರು ಮಾತ್ರ ರನ್‌ ಗಳಿಸುತ್ತಿದ್ದಾರೆ. ಹಾಗಾಗಿ, ಇನ್ನುಳಿದವರು ಇವರಿಗೆ ಸಾಥ್‌ ನೀಡುವ ಅಗತ್ಯವಿದೆ.
ಕೀ ಆಟಗಾರರು
ಡೇವಿಡ್‌ ವಾರ್ನರ್‌: ಸ್ಟೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಎರಡು ನಿಧಾನಗತಿಯ ಅರ್ಧ ಶತಕ ಗಳಿಸಿದ್ದ ಬಳಿಕ ಅವರ ಮೇಲೆ ಟೀಕೆಗಳು ಶುರವಾಗಿತ್ತು. ಆದರೆ, ಪಾಕಿಸ್ತಾನದ ವಿರುದ್ಧ ಸಿಡಿಸಿದ್ದ ಶತಕ ಎಲ್ಲರ ಟೀಕೆಗಳಿಗೂ ಉತ್ತರಿಸಿತ್ತು. 111 ಎಸೆತಗಳಲ್ಲಿ 107 ರನ್‌ ಗಳಿಸಿದ್ದರು. ಲಯಕ್ಕೆ ಮರಳಿರುವ ವಾರ್ನರ್‌ ಲಂಕೆ ವಿರುದ್ಧ ಕೂಡ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.
ತಿಸಾರ ಪೆರೆರಾ:
ಏಕದಿನ ಮಾದರಿಯಲ್ಲಿ ಬೌಲಿಂಗ್‌ ಆಲ್‌ರೌಂಡರ್‌ ತಿಸಾರ್‌ ಪೆರೆರಾ ಅವರು ಉತ್ತಮ ಆಟಗಾರ. ಆದರೆ, ಅವರು ವಿಶ್ವಕಪ್‌ ಟೂರ್ನಿಯಲ್ಲಿ ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಸ್ವಾಭಾವಿಕವಾಗಿ ಇವರು ಆಕ್ರಮಣಕಾರಿ ಬ್ಯಾಟ್ಸ್‌ಮನ್‌ ಆಗಿದ್ದು, ನಾಳಿನ ಪಂದ್ಯದಲ್ಲಿ ಹೆಚ್ಚಿನ ನಿರೀಕ್ಷೆ ಇದೆ.

ಶ್ರೀಲಂಕಾ:
ದಿಮುತ್‌ ಕರುಣರತ್ನೆ(ನಾಯಕ), ಆವಿಷ್ಕಾ ಫೆರ್ನಾಂಡೊ, ಸುರಂಗ ಲಕ್ಮಲ್‌, ಲಸಿತ್‌ ಮಲಿಂಗಾ, ಏಂಜೆಲೊ ಮ್ಯಾಥ್ಯೂಸ್‌, ಜೀವನ್‌ ಮೆಂಡೀಸ್, ಕುಸಾಲ್‌ ಮೆಂಡೀಸ್‌(ವಿ.ಕೀ), ಕುಸಾಲ ಪೆರೆರಾ(ವಿ.ಕೀ), ತಿಸಾರ ಪೆರೆರಾ, ನುವಾನ್‌ ಪ್ರದೀಪ್‌, ಧನಂಜಯ್‌ ಡಿ ಸಿಲ್ವಾ, ಮಿಲಿಂದಾ ಸಿರಿವರ್ಧನ, ಲಹಿರು ತಿರಿಮನ್ನೆ, ಇಸುರು ಉದನ, ಜೆಫ್ರಿ ವಾಂಡರ್ಸ್ಸೆ

ಆಸ್ಟ್ರೇಲಿಯಾ:
ಆ್ಯರೋನ್‌ ಫಿಂಚ್‌ (ನಾಯಕ), ಉಸ್ಮಾನ್‌ ಖವಾಜ, ಡೇವಿಡ್‌ ವಾರ್ನರ್‌, ಸ್ಟೀವ್‌ ಸ್ಮಿತ್‌, ಶಾನ್‌ ಮಾರ್ಷ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌, ಮಾರ್ಕುಸ್‌ ಸ್ಟೋಯಿನಿಸ್‌, ಅಲೆಕ್ಸ್‌ ಕ್ಯಾರಿ(ವಿ.ಕೀ), ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಕೇನ್‌ ರಿಚರ್ಡ್ಸ್‌ನ್‌, ನಥಾನ್‌ ಕೌಲ್ಟರ್‌ ನೈಲ್‌, ಜೇಸನ್‌ ಬೆಹ್ರನ್‌ಡ್ರಾಫ್‌, ನಥಾನ್‌ ಲಿಯಾನ್‌, ಆ್ಯಡಂ ಝಂಪಾ
ಸಮಯ: ನಾಳೆ ಮಧ್ಯಾಹ್ನ 03:00
ಸ್ಥಳ: ದಿ ಓವಲ್‌, ಲಂಡನ್‌

loading...