ಆರೋಗ್ಯವಂತ ಮಕ್ಕಳೆ ಭವಿಷ್ಯದ ನಾಡಿನ ಆಸ್ತಿ: ಡಾ: ರಾಜನ್ ದೇಶಪಾಂಡೆ

0
33

 

ದಾಂಡೇಲಿ: ಮಕ್ಕಳ ಆರೋಗ್ಯ ಸಂರಕ್ಷಣೆಗೆ ಪಾಲಕರು ಮೊದಲ ಆಧ್ಯತೆ ನೀಡಬೇಕು. ಆರೋಗ್ಯವಂತ ಮಕ್ಕಳೆ ಭವಿಷ್ಯದ ನಾಡಿನ ಆಸ್ತಿ. ಮಕ್ಕಳ ಪೋಷಣೆಯ ವಿಚಾರದಲ್ಲಿ ಆರೋಗ್ಯ ನಿಯಾಮವಳಿಗಳನ್ನು ಪಾಲಿಸಬೇಕು. ಸ್ವಚ್ಚತೆ ಮತ್ತು ಪೌಷ್ಟಿಕಾಂಶವುಳ್ಳ ಆಹಾರವನ್ನೆ ಮಕ್ಕಳಿಗೆ ನೀಡಬೇಕು. ಈ ನಾಡಿನ ಭವಿಷ್ಯದ ಉನ್ನತಿಗಾಗಿ ಆರೋಗ್ಯವಂತ ಮಕ್ಕಳನ್ನು ಸಮಾಜಕ್ಕೆ ನೀಡಬೇಕೆಂದು ಖ್ಯಾತ ಚಿಕ್ಕ ಮಕ್ಕಳ ತಜ್ಞರಾದ ಡಾ: ರಾಜನ್ ದೇಶಪಾಂಡೆ ಹೇಳಿದರು.
ಅವರು ಭಾನುವಾರ ನಗರದ ವೆಸ್ಟ್ಕೋಸ್ಟ್ ಪೇಪರ್ ಮಿಲ್, ಧಾರವಾಡದ ವಿಠ್ಠಲ ಮಕ್ಕಳ ವೈದ್ಯಕೀಯ ಮತ್ತು ಸ್ಪೆಶಾಲಿಟಿ ಆರೋಗ್ಯ ಕೇಂದ್ರ ಇವರ ಸಹಯೋಗದೊಂದಿಗೆ ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಇದರ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾದ ಚಿಕ್ಕ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂಥಹ ಶಿಬಿರಗಳನ್ನು ಆಯೋಜಿಸುತ್ತಿರುವ ಕಾಗದ ಕಾರ್ಖಾನೆಯ ಸಾಮಾಜಿಕ ಕಾಳಜಿ ಅಭಿನಂದನೀಯ ಎಂದು, ಶಿಬಿರಕ್ಕೆ ಡಾ: ರಾಜನ್ ದೇಶಪಾಂಡೆ ಶುಭ ಕೋರಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ವೆಸ್ಟ್ ಕೊಸ್ಟ್ ಪೇಪರ್ ಮಿಲ್ಲಿನ ಕರ‍್ಯ ನಿರ್ವಾಹಕ ನಿರ್ದೇಶಕ ರಾಜೇಂದ್ರ ಜೈನ್ ಅವರು ಮಾತನಾಡಿ ಬೆಳೆಯುತ್ತಿರುವ ಈ ಕಾಲಮಾನದಲ್ಲಿ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ನೀಡಬೇಕಾಗಿದೆ. ಅದರಲ್ಲೂ ವಿಶೇಷವಾಗಿ ಮಕ್ಕಳ ಆರೋಗ್ಯ ಸಂರಕ್ಷಣೆಗೆ ಪ್ರತಿಯೊಬ್ಬ ಪಾಲಕರು ವಿಶೇಷ ಮುತುವರ್ಜಿ ವಹಿಸಬೇಕು. ರೋಗ ಬಂದ ನಂತರ ಎಚ್ಚೆತ್ತುಕೊಳ್ಳುವುದರ ಬದಲು ರೋಗ ಬರದಂತೆ ಎಚ್ಚರ ವಹಿಸಿಕೊಳ್ಳುವ ಜಾಣತನವನ್ನು ಎಲ್ಲರು ಮೈಗೂಡಿಸಿಕೊಳ್ಳಬೇಕು. ಖ್ಯಾತ ಮಕ್ಕಳ ತಜ್ಞರಾದ ಡಾ: ರಾಜನ್ ದೇಶಪಾಂಡೆಯವರು ಈ ಶಿಬಿರದ ನೇತೃತ್ವವಹಿಸಿ ಈ ಶಿಬಿರವನ್ನು ನಡೆಸಲು ಸಹಕರಿಸುವುದು ಈ ಭಾಗದ ಮಕ್ಕಳ ಭಾಗ್ಯ ಎಂದರು.
ಈ ಸಂದರ್ಭದಲ್ಲಿ ಧಾರವಾಡದ ಸಿವಿಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ: ಸಂಗಪ್ಪ ಗಾಬಿ, ವಿಠ್ಠಲ ಮಕ್ಕಳ ವೈದ್ಯಕೀಯ ಮತ್ತು ಸ್ಪೆಶಾಲಿಟಿ ಆರೋಗ್ಯ ಕೇಂದ್ರದ ಡಾ: ಪ್ರದೀಪ ಜೋಶಿ, ಸ್ಥಳೀಯ ಸಾರ್ವಜನಿಕ ಆಸ್ಪತ್ರೆ ಹಾಗೂ ಕಾಗದ ಕಾರ್ಖಾನೆಯ ಆಸ್ಪತ್ರೆಯ ವೈದ್ಯರುಗಳು, ಧಾರವಾಡದ ವಿಠ್ಠಲ ಮಕ್ಕಳ ವೈದ್ಯಕೀಯ ಮತ್ತು ಸ್ಪೆಶಾಲಿಟಿ ಆರೋಗ್ಯ ಕೇಂದ್ರದ ತಜ್ಞ ವೈದ್ಯರುಗಳು, ಕಾಗದ ಕಾರ್ಖಾನೆಯ ಅಧಿಕಾರಿ ಬಿ.ಎಚ್. ರಾಠಿ, ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ಮೊದಲಾದವರು ಉಪಸ್ಥಿತರಿದ್ದರು.

ರಾಜೇಶ ತಿವಾರಿಯವರು ಸ್ವಾಗತಿಸಿದ ಕರ‍್ಯಕ್ರಮಕ್ಕೆ ಎಸ್.ಜಿ.ಜಾಲಿಹಾಳ ವಂದಿಸಿದರು. ಶಿಬಿರದಲ್ಲಿ ಒಟ್ಟು ೧೦೧೨ ಮಕ್ಕಳ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು. ದಾಂಡೇಲಿ ಹಾಗೂ ದಾಂಡೇಲಿ ಸುತ್ತಮುತ್ತಲ ಜನರು ತಮ್ಮ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ದಾಂಡೇಲಿ ನಗರ ಪ್ರದೇಶದ ಹೊರಗಿನ ಹಳ್ಳಿ ಜನರಿಗೆ ಅನುಕೂಲವಾಗಲೆಂದು ೪ ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಶಿಬಿರದಲ್ಲಿ ಭಾಗವಹಿಸಿದವರಿಗೆ ಚಹಾ ಮತ್ತು ತಿಂಡಿಯ ವ್ಯವಸ್ಥೆ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ವಿವಿಧ ತಜ್ಞ ೧೯ ವೈದ್ಯರುಗಳು ಭಾಗವಹಿಸಿ ಮಕ್ಕಳ ಆರೋಗ್ಯ ತಪಾಸಣೆಯನ್ನು ನಡೆಸಿಕೊಟ್ಟರು.

loading...