ವಿಲಿಯಮ್ಸನ್‌ ಶತಕ: ನ್ಯೂಜಿಲೆಂಡ್‌ಗೆ 4 ವಿಕೆಟ್‌ ಜಯ

0
18

ಬರ್ಮಿಂಗ್‌ಹ್ಯಾಮ್‌:- ಕೇನ್‌ ವಿಲಿಯಮ್ಸನ್‌ ಅವರ (106 ರನ್‌, 138 ಎಸೆತಗಳು) ಅವರ ಅಮೋಘ ಶತಕದ ಬಲದಿಂದ ನ್ಯೂಜಿಲೆಂಡ್‌ ತಂಡ ಐಸಿಸಿ ವಿಶ್ವಕಪ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಜಯ ಸಾಧಿಸಿತು. ಇದರೊಂದಿಗೆ 9 ಅಂಕಗಳೊಂದಿಗೆ ಕಿವಿಸ್‌ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿತು.
ಇಲ್ಲಿನ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ನೀಡಿದ 242 ರನ್‌ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ 48.3 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 245 ರನ್‌ ಗಳಿಸಿ ಜಯ ಸಾಧಿಸಿತು. ಈ ಸೋಲಿನೊಂದಿಗೆ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ ತಲುಪುವ ಕನಸು ನುಚ್ಚು ನೂರಾಯಿತು.

ನ್ಯೂಜಿಲೆಂಡ್‌ ಗೆಲುವಿಗೆ ಶ್ರಮಿಸಿದ ನಾಯಕ ಕೇನ್‌ ವಿಲಿಯಮ್ಸನ್‌ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತ ಅವರು ಆಫ್ರಿಕಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. 138 ಎಸೆತಗಳಲ್ಲಿ ಒಂದು ಸಿಕ್ಸ್‌ ಹಾಗೂ ಒಂಬತ್ತು ಬೌಂಡರಿಯೊಂದಿಗೆ ಅಜೇಯ 106 ರನ್‌ ಗಳಿಸಿ ವೃತ್ತಿ ಜೀವನದ 12 ನೇ ಶತಕ ಪೂರೈಸಿದರು. ಮತ್ತೊಂದು ತುದಿಯಲ್ಲಿ ಇವರಿಗೆ ಹೆಗಲು ನೀಡಿದ ಕಾಲಿನ್‌ ಗ್ರಾಂಡ್‌ಹೋಮ್‌ 47 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ ಐದು ಬೌಂಡರಿಯೊಂದಿಗೆ ಒಟ್ಟು 60 ರನ್‌ ಗಳಿಸಿದರು.
ಆರಂಭದಲ್ಲಿ ಮಾರ್ಟಿನ್‌ ಗುಪ್ಟಿಲ್‌(35 ರನ್‌) ಉತ್ತಮವಾಗಿ ಬ್ಯಾಟಿಂಗ್‌ ಮಾಡುತ್ತಿದ್ದರು. ಆದರೆ, ಫೆಹ್ಲುಕ್ವಾಯೊ ಎಸೆತದಲ್ಲಿ ಗುಪ್ಟಿಲ್‌ ಹಿಟ್‌ ವಿಕೆಟ್‌ ಮಾಡಿಕೊಂದು ನಿರಾಸೆಯಿಂದ ಪೆವಿಲಿಯನ್‌ಗೆ ಹಜ್ಜೆ ಹಾಕಿದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾ ತಂಡದಿಂದ ಹೇಳಿಕೊಳ್ಳುವಂಥ ಬ್ಯಾಟಿಂಗ್‌ ಮೂಡಲಿಲ್ಲ. ಹಾಶೀಂ ಆಮ್ಲಾ 83 ಎಸೆತಗಳಲ್ಲಿ 55 ರನ್‌, ಆರ್‌ ವಾನ್‌ ಡೆರ್‌ ಡುಸೆನ್‌ 64 ಎಸೆತಗಳಲ್ಲಿ 67 ರನ್‌ ಗಳಿಸಿದ್ದು, ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ದೊಡ್ಡ ಇನಿಂಗ್ಸ್‌ ಆಡುವಲ್ಲಿ ವಿಫಲರಾದರು.
ಅಂತಿಮವಾಗಿ ದಕ್ಷಿಣ ಆಫ್ರಿಕಾ 49 ಓವರ್‌ಗಳಿಗೆ ಆರು ವಿಕೆಟ್‌ ನಷ್ಟಕ್ಕೆ 241 ರನ್‌ ದಾಖಲಿಸಿತ್ತು. ಲೂಕಿ ಫರ್ಗುಸನ್‌ 10 ಓವರ್‌ಗಳಿಗೆ 59 ರನ್‌ ನೀಡಿ 3 ವಿಕೆಟ್‌ ಕಬಳಿಸಿದ್ದರು. ಆಫ್ರಿಕಾ ಪರ ಕ್ರಿಸ್‌ ಮೋರಿಸ್‌ 10 ಓವರ್‌ಗಳಿಗೆ 49 ರನ್‌ ನೀಡಿ ಮೂರು ವಿಕೆಟ್‌ ಕಬಳಿಸಿದ್ದರು

loading...