ವೈದ್ಯರ ಮೇಲಿನ ಹಲ್ಲೆ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿ.ಎಂ ಭರವಸೆ

0
35

ಬೆಂಗಳೂರು:- ವೈದ್ಯರ ಮೇಲಿನ ಹಲ್ಲೆ, ದೌರ್ಜನ್ಯ ಪ್ರಕರಣಗಳ ಸಂಬಂಧ ಕಾನೂನುಗಳನ್ನು ಮಾರ್ಪಾಡು ಮಾಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ನಗರದಲ್ಲಿಂದು ಹೊಸೂರು ರಸ್ತೆಯ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಆವರಣದಲ್ಲಿ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯರ ಮೇಲಿನ ಹಲ್ಲೆಗಳು ಖಂಡನೀಯ. ಇತ್ತೀಚಿನ ದಿನಗಳಲ್ಲಿ ಹಲವು ಪ್ರಕರಣಗಳು ವರದಿಯಾಗಿದ್ದು, ಇಂತಹ ಹಲ್ಲೆಗಳಿಗೆ ಕಡಿವಾಣ ಹಾಕಲು, ತಪ್ಪಿತಸ್ಥರ ವಿರುದ್ಧ ಈಗಾಗಲೇ ಕರ್ನಾಟಕದಲ್ಲಿ 2006ನೇ ಸಾಲಿನಲ್ಲಿ ಕಾನೂನು ತಂದು, ಆರೋಪಿಗಳಿಗೆ ಮೂರು ವರ್ಷ ಜೈಲುವಾಸ ಅಂಶ ಸೇರಿಸಲಾಗಿದೆ. ಮುಂದೆ ಕಾನೂನನ್ನು ಬಿಗಿಗೊಳಿಸಿ ವೈದ್ಯರಿಗೆ ಮತ್ತಷ್ಟು ರಕ್ಷಣೆ ನೀಡಲು ಬದ್ಧ ಎಂದರು.
ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ವೈದ್ಯರ ಮೇಲೆ ಹಲ್ಲೆ ನಡೆಸುವವರ ಮೇಲೆ ಕಠಿಣ ಕ್ರಮ ಜರಿಗಿಸಬೇಕು. ಜೊತೆಗೆ ಜಾಮೀನು ರಹಿತ ಮೊಕದ್ದಮೆ ದಾಖಲಿಸಿ, ಈ ಸಂಬಂಧ ರಾಜ್ಯ ಸರ್ಕಾರ, ಪೊಲೀಸ್ ಮಹಾ ನಿರ್ದೇಶಕರು ಸುತ್ತೊಲೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಸಮಾಜದಲ್ಲಿ ಶಿಕ್ಷಣ ಮತ್ತು ಆರೋಗ್ಯ ಎನ್ನುವುದು ಜನ ಸೇವೆಯ ಕ್ಷೇತ್ರಗಳಾಗಿದ್ದು, ಇದರಲ್ಲಿ ದಾನಿಗಳ‌ ಪಾತ್ರವೂ ಬಹಳ ಮುಖ್ಯ ಎಂದ ಅವರು, ಕಾರವಾರ ಸಮೀಪದ ಮೈದನಿ ಗ್ರಾಮದ 8 ಕಿಲೋ ಮೀಟರ್ ರಸ್ತೆ ನವೀಕರಣಕ್ಕೆ ಇನ್ಫೋಸಿಸ್ ಫೌಂಡೇಶನ್ ಮುಂದಾಗಿದ್ದು, ರಾಜ್ಯ ಸರ್ಕಾರ ಅಗತ್ಯ ಸಹಕಾರ ಒದಗಿಸಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ಕಿದ್ವಾಯಿಗೆ ಅನೇಕ ಕೊಡುಗೆ ಹರಿದು ಬಂದಿದೆ. ಈ ಪೈಕಿ, ಇನ್ಫೋಸಿಸ್ ಫೌಂಡೇಶನ್ನ ಸುಧಾ ಮೂರ್ತಿ ಅವರು ಅತಿ‌ದೊಡ್ಡ ದಾನಿ. ಇದೇ ರೀತಿ, ಸರ್ಕಾರಿ ಆಸ್ಪತ್ರೆಗಳಿಗೆ ಸಂಘ-ಸಂಸ್ಥೆಗಳ ಸಹಕಾರ ದೊರೆತರೆ, ಜನ ಸಾಮಾನ್ಯರಿಗೆ ಅನುಕೂಲವಾಗಲಿದೆ ಎಂದು‌ ನುಡಿದರು.
ಕುಮಾರಸ್ವಾಮಿ ಅವರನ್ನು ಹೊಗಳಲು ಹೋಗುವುದಿಲ್ಲ. ರೋಗಿಗಳ ಕಷ್ಟಕ್ಕೆ ಮಿಡಿಯುವ ಮನಸ್ಸು ಮುಖ್ಯಮಂತ್ರಿಗಳಿಗೆ ಇದೆ. ಎಲ್ಲಾ ಖಾಯಿಲೆಯ ಬಗ್ಗೆ ಅರಿತಿರುವ ಕುಮಾರಸ್ವಾಮಿ ಅವರು ರೋಗಿಗಳ ಕಷ್ಟಕ್ಕೆ ಮರುಗುತ್ತಾರೆ‌. ಅಷ್ಟೇ ಅಲ್ಲದೆ, ಉತ್ತರ ಕರ್ನಾಟಕ ಭಾಗದಲ್ಲೂ ಆಸ್ಪತ್ರೆಗಳನ್ನು ತೆರೆದು, ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ‌‌‌. ಉತ್ತರ ಕರ್ನಾಟಕದ ಮಂದಿ ಅಷ್ಟು ದೂರದಿಂದ ಬರುವ ಕಷ್ಟ ಅರಿತ ಮುಖ್ಯಮಂತ್ರಿ ಅಲ್ಲೂ ಸುಸಜ್ಜಿತ ಆಸ್ಪತ್ರೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದರು.
ಸಚಿವ ಇ.ತುಕಾರಾಂ ಮಾತನಾಡಿ, 45 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ ಏಕೈಕ ಮುಖ್ಯಮಂತ್ರಿ ಎಂದರೆ ಕುಮಾರಸ್ವಾಮಿ.ಇದು ರಾಜಕೀಯ ಭಾಷಣ ಅಲ್ಲ. ಆರೋಗ್ಯ ಸೇವೆಯ ಜೊತೆ ಅನ್ನದಾತರ ಸೇವೆ ಮಾಡುವ ಕೆಲಸ ಎಂದರು‌. ರಾಜ್ಯದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ರಾಂತಿಗೆ ಮುಂದಾಗೋಣ. ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳ ಕೊರತೆ ನೀಗಿಸಿ, ಜನರಿಗೆ ಉತ್ತಮ ಸೇವೆ ನೀಡಲು ಮುಂದಾಗಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಹೇಳಿದರು.
ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ.ರಾಮಚಂದ್ರ ಮಾತನಾಡಿ, ಕಿದ್ವಾಯಿಯಲ್ಲಿ ಈ ಮೊದಲು 8 ಕೊಠಡಿಗಳಿದ್ದವು. ಇದೀಗ 5 ಹೆಚ್ಚುವರಿ ಕೊಠಡಿಗಳನ್ನು ಇನ್ಫೋಸಿಸ್ ಫೌಂಡೇಶನ್ ಒದಗಿಸಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಕ್ಯಾನ್ಸರ್ ರೋಗಿಯು ಶಸ್ತ್ರಚಿಕಿತ್ಸೆಗಾಗಿ ಕಾಯುತ್ತ ಕೂರಬೇಕಿಲ್ಲ. ಜೊತೆಗೆ ಇದು ದೇಶದ ಅತ್ಯುತ್ತಮ ಶಸ್ತ್ರಚಿಕಿತ್ಸಾ ಕೊಠಡಿ ಹೊಂದಿರುವ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು‌ ಹೇಳಿದರು.
ಈ ಸಂದರ್ಭದಲ್ಲಿ ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಸುಧಾ ಮೂರ್ತಿ ಸೇರಿದಂತೆ ಪ್ರಮುಖರಿದ್ದರು.

loading...