ಜಿಂದಾಲ್‌ಗೆ ನೀಡಿದ್ದ ಭೂಮಿಯ ಲೆಕ್ಕತಪಾಸಣೆಗೆ ಎಚ್ ಕೆ ಪಾಟೀಲ್ ಒತ್ತಾಯ

0
11

ಬೆಂಗಳೂರು:- ಜಿಂದಾಲ್ ಕಂಪನಿಗೆ ಸರ್ಕಾರಿ ಭೂಮಿ ಮಾರಾಟ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಎಚ್‌ ಕೆ ಪಾಟೀಲ್, ಇಂದು ಮತ್ತೆ ಕಂಪನಿಯ ವಿರುದ್ಧ ಧ್ವನಿ ಎತ್ತಿದ್ದಾರೆ.

ಜಿಂದಾಲ್ ಕಂಪನಿಗೆ ಈ ಹಿಂದೆ ನೀಡಿದ್ದ ಭೂಮಿಯ ಲೆಕ್ಕ ತಪಾಸಣೆ ಆಗಬೇಕು. ಅದು ಆದಷ್ಟು ಬೇಗ ಆಗುವುದು ಸೂಕ್ತ ಎಂದು ಹುಬ್ಬಳ್ಳಿ ಯಲ್ಲಿಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಜಿಂದಾಲ್‌ಗೆ 3666 ಎಕರೆ ಭೂಮಿ ಪರಭಾರೆ ಮಾಡುವುದಕ್ಕೆ ಈ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಿದ್ದೆ. ಇದರಿಂದ ಸರ್ಕಾರ ಪರಿಶೀಲನೆ ನಡೆಸಲು ಸಚಿವ ಸಂಪುಟ ಉಪ ಸಮಿತಿ ರಚಿಸಿದೆ. ಈ ವಿಷಯವಾಗಿ ಗಂಭೀರ ಅಧ್ಯಯನ ಮಾಡಲು ಸಮಿತಿ ರಚಿಸಿದ್ದು, ಸಕಾರಾತ್ಮಕ ನಿರ್ಣಯವಾಗಿದೆ. ಸಾರ್ವಜನಿಕರು, ರಾಜಕೀಯ ಪಕ್ಷಗಳ ಆಕ್ಷೇಪಗಳನ್ನು ಸಮಿತಿ ಆಲಿಸಬೇಕು. ಬಳಿಕ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದ ಅವರು, ಈ ಸಮಿತಿ ಕಾಟಾಚಾರಕ್ಕೆ ಕೆಲಸ ಮಾಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಂದಾಲ್‌ಗೆ ಜಮೀನು ಕೊಡಲು ಮೇ 27ರ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ತಕ್ಷಣವೇ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದ ಎಚ್‌ ಕೆ ಪಾಟೀಲ್‌ ಈ ತೀರ್ಮಾನದ ಪುನರ್‌ ಪರಿಶೀಲನೆಗೆ ಒತ್ತಾಯಿಸಿದ್ದರು. ಆದರೆ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್‌, ಜಿಂದಾಲ್‌ಗೆ ಭೂಮಿ ನೀಡಿದ್ದನ್ನು ಸಮರ್ಥಿಸಿಕೊಂಡಿದ್ದರು. ಸಂಸ್ಥೆಯಿಂದ ಸರಕಾರಕ್ಕೆ ಹಣ ಬರುವುದು ಬಾಕಿಯಿಲ್ಲವೆಂದೂ ಸಮಜಾಯಿಷಿ ನೀಡಿದ್ದರು. ಜತೆಗೆ ಈ ಸಂಗತಿಯನ್ನು ಟ್ವೀಟ್‌ ಮೂಲಕ ಹಂಚಿಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿ ಜಾರ್ಜ್‌ ಅವರಿಗೆ 6 ಪುಟಗಳ ಸುದೀರ್ಘ ಪತ್ರ ಬರೆದಿದ್ದ ಪಾಟೀಲ್‌, ”ಮಾಧ್ಯಮಗಳಿಗೆ ನೀಡಿದ ತಪ್ಪು ಹೇಳಿಕೆ ವಾಪಸ್‌ ಪಡೆದು ಈ ಪ್ರಕರಣ ಸಂಬಂಧ ಅಧ್ಯಯನ ಕೈಗೊಳ್ಳಬೇಕು. ಸಂಪುಟದ ನಿರ್ಣಯ ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದ್ದರು.

”ಜಿಂದಾಲ್‌ನಿಂದ ರಾಜ್ಯ ಸರಕಾರದ ಅಧೀನದ ಎಂಎಂಎಲ್‌ ಸಂಸ್ಥೆಗೆ ಅಸಲು, ಬಡ್ಡಿ ಸೇರಿ 2 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ಪಾವತಿಯಾಗಬೇಕಿದೆ. ಈ ಹಣ ವಸೂಲಿ ಸಂಬಂಧ ಕೋರ್ಟ್‌ನಲ್ಲಿ ಪ್ರಕರಣ ಬಾಕಿಯಿದೆ. ಈ ನಡುವೆಯೂ ಜಿಂದಾಲ್‌ಗೆ ಅನುಕೂಲ ಮಾಡಿಕೊಡುವ ಸರಕಾರದ ನಡೆ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ ಎಂದು ಪಾಟೀಲ್‌ ಬಹಿರಂಗವಾಗಿಯೇ ಆಕ್ಷೇಪ ವ್ಯಕ್ತಪಡಿಸಿದ್ದರು.

ಜಿಂದಾಲ್‌ಗೆ ಸಂಬಂಧಿಸಿದ ದಾಖಲೆಗಳನ್ನು ನೀಡುತ್ತಿದ್ದೇನೆ. ವಾಸ್ತವಿಕವಾಗಿ ಈ ದಾಖಲೆಯನ್ನು ನಾನು ನೀಡಬೇಕಿಲ್ಲ. ಎಲ್ಲವೂ ಸರಕಾರದ ಕಡತದಲ್ಲಿ ಲಭ್ಯವಿದೆ. ಆದರೂ ತಮ್ಮ ಗಮನಕ್ಕೆ ಕಳುಹಿಸುತ್ತಿದ್ದೇನೆ ಎಂದು ಸಚಿವ ಜಾರ್ಜ್ ಅವರಿಗೆ ತಿರುಗೇಟು ನೀಡಿದ್ದರು.
ಅಂತಿಮವಾಗಿ ಸಚಿವ ಸಂಪುಟ ಉಪ ಸಮಿತಿ ರಚಿಸಿ ಸರ್ಕಾರ ತೀರ್ಮಾನ ಕೈಗೊಂಡಿದೆ. ಈ ಮಧ್ಯೆ ಬಿಜೆಪಿ ಇದೆ ವಿಷಯವನ್ನು ಮುಂದಿಟ್ಟು ದೊಡ್ಡ ಮಟ್ಟದ ಹೋರಾಟ ನಡೆಸಲು ಚಿಂತನೆ ನಡೆಸಿದೆ. ಕಳೆದ ವಾರವಷ್ಟೇ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಎರಡು ದಿನಗಳ ಅಹೋರಾತ್ರಿ ಧರಣಿಯನ್ನು ಬೆಂಗಳೂರಿನಲ್ಲಿ ನಡೆಸಿತ್ತು.

loading...