ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೯ನೇ ತರಗತಿ ಪ್ರಾರಂಭಿಸಲು ಒತ್ತಾಯ

0
74

ಮುಂಡರಗಿ: ೮ನೇ ತರಗತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಿ ಅಲ್ಲಿ ೯ನೇ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ಮುಂದಾಗಿದೆ. ಅದರಂತೆ ಪಟ್ಟಣದ ಕೋಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೯ನೇ ತರಗತಿಯನ್ನು ತಕ್ಷಣ ಪ್ರಾರಂಭಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಮುಧೋಳ ಒತ್ತಾಯಿಸಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ೮ನೇ ತರಗತಿ ಹೊಂದಿರುವ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಲು ಸರ್ಕಾರವು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಿತ್ತು. ಆದರೆ ಜಿಲ್ಲಾಡಳಿತವು ಮುಂಡರಗಿಯಲ್ಲಿ ಉನ್ನತೀಕರಿಸಿದ ಶಾಲೆಯನ್ನು ಪ್ರಾರಂಭಿಸುವ ಕುರಿತಂತೆ ಪ್ರಸ್ತಾವನೆಯನ್ನು ಸಲ್ಲಿಸಿದೆಯೊ ಇಲ್ಲವೊ ತಿಳಿಯದಾಗಿದೆ ಎಂದು ತಿಳಿಸಿದರು.
ಸರ್ಕಾರವು ರಾಜ್ಯದಲ್ಲಿ ೨೪ಶಾಲೆಗಳಲ್ಲಿ ಮಾತ್ರ ಉನ್ನತೀಕರಿಸಿದ ಶಾಲೆಗಳನ್ನು ತೆರೆಲು ಸರ್ಕಾರ ಮುಂದಾಗಿದೆ. ಪಟ್ಟಣದಲ್ಲಿ ಒಂದೂ ಸರ್ಕಾರಿ ಪ್ರೌಢ ಶಾಲೆ ಇಲ್ಲದಿರುವ ವಿಷಯವನ್ನು ಪರಿಗಣಿಸಿ ತಕ್ಷಣ ಪಟ್ಟಣದಲ್ಲಿ ಒಂದು ಉನ್ನತೀಕರಿಸಿದ ಶಾಲೆಯನ್ನು ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪಟ್ಟಣದಲ್ಲಿ ಸರ್ಕಾರಿ ಪ್ರೌಢ ಶಾಲೆ ಇಲ್ಲದಿರುವುದರಿಂದ ಇಲ್ಲಿಯ ಮಕ್ಕಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಪಟ್ಟಣದಲ್ಲಿರುವ ಖಾಸಗಿ ಶಾಲೆಗಳಲ್ಲಿ ದುಬಾರಿ ಹಣ ನೀಡಿ ಶಾಲೆ ಕಲಿಯುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಗರಾಜ ಮುರಡಿ, ಪವನ ಚೋಪ್ರಾ, ಸಿದ್ದು ದೇಸಾಯಿ, ಸಿದ್ದು ರಾಮೆನಹಳ್ಳಿ, ಉಮೇಶ ಬಳ್ಳಾರಿ, ಶಿವಕುಮಾರ ಇಟಗಿ, ವಿಶ್ವನಾಥ ಹುಬ್ಬಳ್ಳಿ, ಪವನ ಲೇಂಡ್ವೆ, ಮಂಜುನಾಥ ಸಬರದ, ಇದ್ದರು.

loading...