ಹ್ಯಾರಿಸ್‌ ಸೊಹೈಲ್‌ ಅವರನ್ನು ಬಟ್ಲರ್‌ಗೆ ಹೋಲಿಸಿದ ಪಾಕ್‌ ನಾಯಕ

0
15

ಲಂಡನ್‌:- ದಕ್ಷಿಣ ಆಫ್ರಿಕಾ ವಿರುದ್ಧ ಅಮೋಘ ಬ್ಯಾಟಿಂಗ್‌ ಮಾಡಿದ ಹ್ಯಾರಿಸ್‌ ಸೂಹೈಲ್‌ ಅವರನ್ನು ಇಂಗ್ಲೆಂಡ್‌ ತಂಡದ ಜೋಸ್‌ ಬಟ್ಲರ್‌ಗೆ ಪಾಕಿಸ್ತಾನ ನಾಯಕ ಸರ್ಫರಾಜ್‌ ಅಹಮದ್‌ ಹೋಲಿಸಿದ್ದಾರೆ.
ಭಾನುವಾರ ನಡೆದ ಐಸಿಸಿ ವಿಶ್ವಕಪ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕಿಸ್ತಾನ 49 ರನ್‌ಗಳಿಂದ ಗೆಲುವು ಸಾಧಿಸುವ ಮೂಲಕ ಅಂತಿಮ ನಾಲ್ಕರ ಘಟ್ಟದ ಹಾದಿಯನ್ನು ಇನ್ನೂ ಜೀವಂತವಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಹ್ಯಾರಿಸ್‌ ಸೊಹೈಲ್‌ 59 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ ಒಂಬತ್ತು ಬೌಂಡರಿಯೊಂದಿಗೆ ಒಟ್ಟು 89 ರನ್‌ ಗಳಿಸಿ ತಂಡದ ಗೆಲುವಿನಲ್ಲಿ ಪ್ರಧಾನ ಪಾತ್ರವಹಿಸಿದರು.

ಪಂದ್ಯದ ಬಳಿಕ ಮಾತನಾಡಿದ ಸರ್ಫರಾಜ್‌ ಅಹಮದ್‌ , ವೆಸ್ಟ್‌ಇಂಡಿಸ್‌ ವಿರುದ್ಧ ಆರಂಭಿಕ ಪಂದ್ಯದ ಬಳಿಕ ಅಂತಿಮ 11ರಲ್ಲಿ ಸ್ಥಾನ ಪಡೆಯದೆ ಬೆಂಚ್‌ ಕಾಯುತ್ತಿದ್ದ “ಹ್ಯಾರಿಸ್‌ ಸೊಹೈಲ್‌ ಅವರ ಬ್ಯಾಟಿಂಗ್‌ ಹಸಿವು ಪಂದ್ಯದಲ್ಲಿ ಎದ್ದು ಕಾಣುತ್ತಿತ್ತು. ಇನಿಂಗ್ಸ್‌ನ ಕೊನೆಯ 15 ಓವರ್‌ಗಳಲ್ಲಿ ಇವರ ಬ್ಯಾಟಿಂಗ್‌ ಇಂಗ್ಲೆಂಡ್‌ ತಂಡದ ಜೋಸ್‌ ಬಟ್ಲರ್‌ ಅವರ ರೀತಿ ಇತ್ತು” ಎಂದು ಹೇಳಿದರು.
ಈ ಪಂದ್ಯದಲ್ಲಿ ಸೊಹೈಲ್‌ ಹಾಗೂ ಶಾಹೀನ್‌ ಅಫ್ರಿದಿ ಅವರನ್ನು ಸತತ ವೈಫಲ್ಯ ಅನುಭವಿಸುತ್ತಿರುವ ಶೊಯೆಬ್‌ ಮಲ್ಲಿಕ್‌ ಮತ್ತು ಹಸನ್‌ ಸಲಿ ಸ್ಥಾನಕ್ಕೆ ತುಂಬಲಾಯಿತು.
“ಈ ಪಂದ್ಯದ ಗೆಲುವಿನ ಶ್ರೇಯ ವೇಗಿಗಳಾದ ಮೊಹಮ್ಮದ್‌ ಅಮೀರ್‌ ಹಾಗೂ ವಹಾಬ್‌ ಅವರಿಗೆ ಸಲ್ಲಬೇಕು. ಆರಂಭದಲ್ಲೇ ಆಫ್ರಿಕಾ ಪ್ರಮುಖ ವಿಕೆಟ್‌ಗಳು ಉರುಳಿದ್ದು ತಂಡಕ್ಕೆ ನೆರವಾಯಿತು. ಮಧ್ಯಮ ಓವರ್‌ಗಳಲ್ಲಿ ವಹಾಬ್‌ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದರು” ಎಂದು ವೇಗಿಗಳನ್ನು ಶ್ಲಾಘಿಸಿದರು.

loading...