ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ

0
11

ಬರ್ಮಿಂಗ್‌ಹ್ಯಾಮ್‌:- ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಸೆಮಿಫೈನಲ್‌ ಹಾದಿಯ ತುಡಿತದಲ್ಲಿರುವ ಪಾಕಿಸ್ತಾನ, ಐಸಿಸಿ ವಿಶ್ವಕಪ್‌ ಟೂರ್ನಿಯ 33ನೇ ಪಂದ್ಯದಲ್ಲಿ ಸೋಲಿಲ್ಲದ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ನ್ಯೂಜಿಲೆಂಡ್‌ ವಿರುದ್ಧ ಮತ್ತೊಂದು ಟೆಸ್ಟ್‌ ಎದುರಿಸಲು ಸಿದ್ಧವಾಗಿದೆ. ಉಭಯ ತಂಡಗಳ ಕಾದಾಟಕ್ಕೆ ಇಲ್ಲಿನ ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧವಾಗಿದೆ.
ಪ್ರಸಕ್ತ ಆವೃತ್ತಿಯಲ್ಲಿ ಪಾಕಿಸ್ತಾನದ ಪ್ರದರ್ಶನ ಅನಿರೀಕ್ಷಿತವಾಗಿದೆ. ಬಲಿಷ್ಠ ತಂಡಗಳಾದ ಇಂಗ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧವೇ ಗೆಲುವು ಸಾಧಿಸಿದೆ. ಆದರೆ, ವೆಸ್ಟ್‌ ಇಂಡೀಸ್‌, ಆಸ್ಟ್ರೇಲಿಯಾ ಹಾಗೂ ಭಾರತದ ವಿರುದ್ಧ ಸೋಲು ಅನುಭವಿಸಿದೆ.
ಆದರೆ, ಶ್ರೀಲಂಕಾ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಯಿತು. ಆಡಿರುವ ಆರು ಪಂದ್ಯಗಳಿಂದ ಪಾಕ್‌ ತನ್ನ ಖಾತೆಯಲ್ಲಿ ಐದು ಅಂಕಗಳನ್ನು ಹೊಂದಿದೆ. ಹಾಗಾಗಿ, ಇನ್ನುಳಿದ ಮೂರೂ ಪಂದ್ಯಗಳಲ್ಲಿ ಜಯ ಹಾಗೂ ಇನ್ನುಳಿದ ತಂಡಗಳ ಫಲಿತಾಂಶದ ಮೇಲೆ ಪಾಕಿಸ್ತಾನದ ಸೆಮಿಫೈನಲ್ ಅರ್ಹತೆ ನಿರ್ಧಾರವಾಗಲಿದೆ.
ಪ್ರಸಕ್ತ ಆವೃತ್ತಿಯಲ್ಲಿ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ಹಾಗೂ ಬೌಲರ್‌ಗಳು ಸಾಧಾರಣ ಪ್ರದರ್ಶನ ತೋರುತ್ತಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಪ್ರಮುಖ ಅಸ್ತ್ರವಾಗಿರುವ ಮೊಹಮ್ಮದ್‌ ಅಮೀರ್ ತಂಡಕ್ಕೆ ಆಧಾರ ಸ್ಥಂಭವಾಗಿದ್ದಾರೆ. ಆದರೆ, ಇನ್ನುಳಿದವರು ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಬ್ಯಾಟಿಂಗ್‌ನಲ್ಲಿ ಹಸನ್‌ ಅಲಿ, ಬಾಬರ್‌ ಅಜಾಮ್‌ ಹಾಗೂ ಫಖಾರ್‌ ಜಮಾನ್‌ ಅವರನ್ನು ಅವಲಂಬಿಸಿದೆ. ಆದರೆ, ನಾಯಕ ಸರ್ಫರಾಜ್‌ ಅಹಮದ್‌ಗೆ ಫೀಲ್ಡಿಂಗ್‌ನದ್ದೆ ಸಮಸ್ಯೆಯಾಗಿದೆ.
ಇದುವರೆಗೂ ಪಾಕಿಸ್ತಾನ ಆಡಿರುವ ಆರು ಪಂದ್ಯಗಳಲ್ಲಿ ಉತ್ತಮ ಫೀಲ್ಡಿಂಗ್‌ ಪ್ರದರ್ಶನ ತೋರುವಲ್ಲಿ ವಿಫಲವಾಗಿದೆ. ಇದುವರೆಗೂ ಪಾಕ್‌ 14 ಕ್ಯಾಚ್‌ಗಳನ್ನು ಕೈಚೆಲ್ಲಿಕೊಂಡಿದೆ. ಇದು ಟೂರ್ನಿಯಲ್ಲೇ ಅತೀ ಹೆಚ್ಚು ಕ್ಯಾಚ್‌ಗಳನ್ನು ಕೈಚೆಲ್ಲಿದ ತಂಡ ಎಂಬ ಕುಖ್ಯಾತಿಗೆ ಸರ್ಫರಾಜ್‌ ಬಳಗ ಭಾಜನವಾಗಿದೆ. ನಾಳಿನ ಕಿವೀಸ್‌ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್‌ ಸಮಸ್ಯೆ ನಿವಾರಣೆಯಾಗದಿದ್ದಲ್ಲಿ 1992 ಚಾಂಪಿಯನ್ಸ್‌ಗೆ ತೀವ್ರ ಹಿನ್ನಡೆಯಾಗಲಿದೆ.

ಮತ್ತೊಂದೆಡೆ ಸ್ಥಿರ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿರುವ ನ್ಯೂಜಿಲೆಂಡ್‌ ಒಂದೂ ಪಂದ್ಯದಲ್ಲಿ ಸೋಲು ಅನುಭವಿಸಿಲ್ಲ. ಕಿವೀಸ್‌ ಅದ್ಭುತ ಲಯದಲ್ಲಿರುವ ನಾಯಕ ಕೇನ್‌ ವಿಲಿಯಮ್ಸ್‌ ಈಗಾಗಲೇ ಎರಡು ಶತಕಗಳನ್ನು ಸಿಡಿಸಿದ್ದಾರೆ.
ಬೌಲಿಂಗ್‌ ವಿಭಾಗ ಕೂಡ ಉತ್ತಮ ಪ್ರದರ್ಶನ ತೋರುತ್ತಿದೆ. ಲೂಕಿ ಫರ್ಗುಸನ್‌, ಟ್ರೆಂಟ್‌ ಬ್ರಿಡ್ಜ್‌ ಹಾಗೂ ಮಿಚೆಲ್‌ ಸ್ಯಾಂಟ್ನರ್‌ ಅವರು ನಿರ್ಣಾಯಕ ಸನ್ನಿವೇಶಗಳಲ್ಲಿ ವಿಕೆಟ್‌ ಕೀಳುವ ತಾಕತ್ತು ಹೊಂದಿದ್ದಾರೆ. ನ್ಯೂಜಿಲೆಂಡ್‌ ಆಡಿರುವ ಒಟ್ಟು ಆರು ಪಂದ್ಯಗಳಿಂದ 11 ಅಂಕಗಳನ್ನು ಕಲೆಹಾಕಿದೆ. ನಾಳೆ ಪಾಕಿಸ್ತಾನದ ವಿರುದ್ಧ ಪಂದ್ಯ ಗೆದ್ದರೆ ಕಿವೀಸ್‌ ಸೆಮಿಫೈನಲ್‌ ಪ್ರವೇಶ ಖಚಿತವಾಗಲಿದೆ.
ತಂಡಗಳು

ಪಾಕಿಸ್ತಾನ:

ಶೊಯೆಬ್‌ ಮಲ್ಲಿಕ್‌, ಮೊಹಮ್ಮದ್‌ ಹಫೀಜ್‌, ಸರ್ಫರಾಜ್‌ ಅಹಮದ್‌ (ನಾಯಕ), ವಹಾಬ್‌ ರಿಯಾಜ್‌,ಮೊಹಮ್ಮದ್‌ ಅಮೀರ್‌, ಹ್ಯಾರಿಸ್‌ ಸೊಹೈಲ್‌, ಬಾಬರ್‌ ಅಜಾಮ್‌, ಇಮಾಮ್‌-ಉಲ್‌-ಹಕ್‌, ಆಸೀಪ್‌ ಅಲಿ, ಇಮಾದ್‌ ವಾಸೀಮ್‌, ಫಖಾರ್‌ ಜಮಾನ್‌, ಶದಾಬ್‌ ಖಾನ್‌, ಹಸನ್‌ ಅಲಿ, ಶಾಹೀನ್‌ ಆಫ್ರಿದಿ, ಮೊಹಮ್ಮದ್‌ ಹಸ್ನೈನ್‌.

ನ್ಯೂಜಿಲೆಂಡ್‌:
ಕೇನ್‌ ವಿಲಿಯಮ್ಸನ್‌(ನಾಯಕ), ರಾಸ್‌ ಟೇಲರ್‌, ಟಾಮ್‌ ಲಥಾಮ್‌(ವಿ.ಕೀ), ಟಾಮ್‌ ಬ್ಲಂಡೆಲ್‌(ವಿ.ಕೀ), ಮಿಚೆಲ್‌ ಸ್ಯಾಂಟ್ನರ್‌, ಕಾಲಿನ್‌ ಡಿ ಗ್ರಾಂಡ್‌ಹೋಮ್‌, ಲೂಕಿ ಫರ್ಗುಸನ್‌, ಟಿಮ್‌ ಸೌಥೆ, ಟ್ರೆಂಟ್‌ ಬೌಲ್ಟ್‌, ಕಾಲಿನ್‌ ಮನ್ರೊ, ಇಶ್‌ ಸೋಧಿ, ಹೆನ್ರಿ ನಿಕೋಲ್ಸ್‌, ಮಾರ್ಟಿನ್ ಗುಪ್ಟಿಲ್‌, ಮ್ಯಾಟ್‌ ಹೆನ್ರಿ, ಜಿಮ್ಮಿ ನೀಶ್ಯಾಮ್‌
ಸಮಯ: ನಾಳೆ ಮಧ್ಯಾಹ್ನ 03:00
ಸ್ಥಳ: ಎಜ್‌ಬಾಸ್ಟನ್‌, ಬರ್ಮಿಂಗ್‌ಹ್ಯಾಮ್‌

loading...