ಸರ್ಕಾರದ ಯೋಜನೆ ಯೋಜನೆ ಸದುಪಯೋಗ ಪಡೆದುಕೊಳ್ಳಿ: ಶಾಸಕ ದಿನಕರ

0
20

ಹೊನ್ನಾವರ: ಸರ್ಕಾರ ಹಲವು ಯೋಜನೆಗಳನ್ನು ಮಹಿಳೆಯರಿಗಾಗಿ ಜಾರಿಗೆ ತಂದಿದ್ದು ಅದನ್ನು ಸದುಪಯೋಗ ಮಾಡಿಕೊಳ್ಳುವ ಕೆಲಸ ಆಗುತ್ತಿಲ್ಲ ಎಂದು ಶಾಸಕ ದಿನಕರ ಶೆಟ್ಟಿ ವಿಷಾದ ವ್ಯಕ್ತಪಡಿಸಿ ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ಸರಿಯಾದ ಮಾಹಿತಿ ನೀಡುವ ಕೆಲಸ ಮಾಡಬೇಕಿದೆ ಎಂದರು.
ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕಾರವಾರ ಶಿಶು ಅಭಿವೃದ್ಧಿ ಯೋಜನೆ ಸಹಯೋಗದಲ್ಲಿ ಹೊನ್ನಾವರ ತಾಲೂಕ ವ್ಯಾಪ್ತಿಯಲ್ಲಿ ಮಂಜೂರಾದ ಭಾಗ್ಯಲಕ್ಷ್ಮೀ ಬಾಂಡ್ ವಿತರಣಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ದೂರದೃಷ್ಟಿ ಹೊಂದಿರುವ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಂದ ಜನಪರ ಕಾರ್ಯದಲ್ಲಿ ಒಂದಾದ ಭಾಗ್ಯಲಕ್ಷ್ಮಿ ಯೋಜನೆ ಹಲವು ಮಹಿಳೆಯರ ಪಾಲಿಗೆ ಆಶಾಕಿರಣವಾಗಿದೆ. ಸರ್ಕಾರದ ಹಲವು ಯೋಜನೆಗಳು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯಿಂದ ಅನುಷ್ಟಾನವಾಗುತ್ತಿದೆ. ಆದರೆ ಅಧಿಕಾರಿಗಳು ಅದರ ಬಗ್ಗೆ ಸರಿಯಾದ ಮಾಹಿತಿ ನೀಡಿದರೆ ಮಾತ್ರ ಯೋಜನೆ ಯಶಸ್ವಿಯಾಗಿ ಅನುಷ್ಟಾನಗೊಳ್ಳಲು ಸಾಧ್ಯ ಎಂದರು.
ಭಾಗ್ಯಲಕ್ಷ್ಮಿ ಯೋಜನೆ ಹೆಣ್ಣುಮಕ್ಕಳ ಉನ್ನತ ಶಿಕ್ಷಣ ರೂಪಿಸಲು ಇರುವ ಯೋಜನೆಯಾಗಿದ್ದು ಇದರಿಂದ ಬಡ ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಿದೆ. ಸಮಾಜದಲ್ಲಿ ಹೆಣ್ಣು ಮಾನವೀಯ ಗುಣದ ಜೊತೆ ಕುಟುಂಬ ನಿರ್ವಹಣೆಯಲ್ಲಿಯೂ ಮಹತ್ತರ ಪಾತ್ರ ನಿರ್ವಹಿಸುತ್ತಾ ಬಂದಿದ್ದಾಳೆ ಎಂದರು.ಜಿ.ಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ ಮಾತನಾಡಿ ಸಮಾಜದಲ್ಲಿ ಗಂಡು ಹೆಣ್ಣು ಎನ್ನುವ ತಾರತಮ್ಯ ಬೇಡ. ಇಂದಿಗೂ ನಮ್ಮ ದೇಶದಲ್ಲಿ ಲಿಂಗಾನುಪಾತದ ವ್ಯತ್ಯಾಸವಿದ್ದು ಅದನ್ನು ಪ್ರಜ್ಞಾನವಂತರಾದ ನಾವು ಹೋಗಲಾಡಿಸುವ ಕಾರ್ಯಕ್ಕೆ ಮುಂದಾಗಬೇಕಿದೆ.
ಮಹಿಳೆ ಎಲ್ಲಾ ರಂಗದಲ್ಲಿಯೂ ಸಾಧನೆ ಮಾಡುತ್ತಿದ್ದಾಳೆ ಭಾಗ್ಯಲಕ್ಷ್ಮಿ ಯೋಜನೆ ಹೆಣ್ಣುಮಕ್ಕಳ ಪಾಲಿಗೆ ನಿಜವಾಗಿಯೂ ಮನೆ ಬಾಗಿಲಿಗೆ ಲಕ್ಷ್ಮಿ ಬಂದತೆ ಎಂದರು. ತಾಲೂಕಿನ ೩೦೦ಕ್ಕೂ ಅಧಿಕ ಮಹಿಳೆಯರಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಎಚ್. ಪಾಟೀಲ್ ಸ್ವಾಗತಿಸಿ ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷ ಟಿ.ಎಸ್.ಹೆಗಡೆ, ಸುರೇಶ ಶೆಟ್ಟಿ, ಪ.ಪಂ ಮುಖ್ಯಾಧಿಕಾರಿ ಎಚ್ ಮನುವಡ್ಡರ್, ಪ.ಪಂ ಸದಸ್ಯರಾದ ಶಿವರಾಜ ಮೇಸ್ತ, ಸುಬ್ರಾಯ ಗೌಡ, ನಾಗರಾಜ ಭಟ್, ಸುಜಾತ ಮೇಸ್ತ ಸೇರಿದಂತೆ ಮತ್ತಿತರ ಸದಸ್ಯರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

loading...