ಓಲ್ಡ್ ಟ್ರಾಫರ್ಡ್ ನಲ್ಲಿ ಭಾರತಕ್ಕೆ ಮತ್ತೊಂದು ಜಯಭೇರಿ ಕನಸು: ವಿರಾಟ್‍ ಪಡೆಗೆ ವಿಂಡೀಸ್‍ ಸವಾಲು

0
29

ಮ್ಯಾಂಚೆಸ್ಟರ್‌: ಗೆಲುವಿನ ಲಯದಲ್ಲಿ ತೇಲುತ್ತಿರುವ ಭಾರತ ತಂಡ ಐಸಿಸಿ ವಿಶ್ವಕಪ್‌ ತನ್ನ ಆರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧ ಇಂದು ಇಲ್ಲಿನ ದಿ ಓಲ್ಡ್‌ ಟ್ರಾಫರ್ಡ್‌ ಅಂಗಳದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಸೆಣಸಲು ಸಜ್ಜಾಗಿದೆ.
ಈ ಪಂದ್ಯವನ್ನೂ ಗೆದ್ದು ಅಂತಿಮ ನಾಲ್ಕರ ಘಟ್ಟಕ್ಕೆ ಇನ್ನಷ್ಟು ಸಮೀಪವಾಗುವ ತುಡಿತದೊಂದಿಗೆ ವಿರಾಟ್‌ ಕೊಹ್ಲಿ ಪಡೆ ಕಣಕ್ಕೆ ಇಳಿಯಲಿದೆ.
ಭಾರತ ಆಡಿರುವ ಪಂದ್ಯಗಳಲ್ಲಿ ಐದು ಪಂದ್ಯಗಳಲ್ಲಿ ಒಂದು ಪಂದ್ಯ ನ್ಯೂಜಿಲೆಂಡ್‌ ವಿರುದ್ಧ ಮಳೆಯಿಂದ ರದ್ದಾಗಿತ್ತು. ಇನ್ನುಳಿದ ನಾಲ್ಕೂ ಪಂದ್ಯಗಳಲ್ಲಿ ಕ್ರಮವಾಗಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಿದೆ. ಇನ್ನೂ ಒಂದರಲ್ಲೂ ಭಾರತ ಸೋಲಿನ ಕಹಿ ಅನುಭವ ಪಡೆದಿಲ್ಲ. ಅಂಕಪಟ್ಟಿಯಲ್ಲಿ ಒಟ್ಟು 9 ಅಂಕಗಳನ್ನು ಹೊಂದಿರುವ ಭಾರತ, ಇನ್ನುಳಿದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಸಾಧಿಸಿದರೆ, ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ.
ಕಳೆದ ಪಂದ್ಯದಲ್ಲಿ ಭಾರತಕ್ಕೆ ಕ್ರಿಕೆಟ್‌ ಶಿಶು ಎಂದೇ ಕರೆಯುವ ಅಫ್ಘಾನಿಸ್ತಾನದ ವಿರುದ್ಧ ಸೋಲಿನ ಭೀತಿ ಎದುರಾಗಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಆಫ್ಘನ್‌ ಸ್ಪಿನ್‌ ಮೋಡಿಗೆ ಸಿಲುಕಿ ನಿಗದಿತ 50 ಓವರ್‌ಗಳಲ್ಲಿ ಕೇವಲ 224 ರನ್‌ಗಳಿಗೆ ಸೀಮಿತವಾಗಿತ್ತು. ಬಳಿಕ ಗುರಿ ಬೆನ್ನತ್ತಿದ್ದ ಗುಲ್ಬುದ್ದೀನ್‌ ಪಡೆ ಉತ್ತಮ ಪ್ರದರ್ಶನ ತೋರಿತ್ತು. ಕೊನೆಯ ಹಂತದವರೆಗೂ ಭಾರತದ ಬೌಲರ್‌ಗಳನ್ನು ಕಾಡಿದ್ದ ಮೊಹಮ್ಮದ್‌ ನಬಿ ಇನ್ನೇನು ಭಾರತಕ್ಕೆ ಸೋಲಿನ ಕಹಿ ಉಣಬಡಿಸಲಿದ್ದಾರೆಂದೇ ಎಲ್ಲರು ಭಾವಿಸಿದ್ದರು.
ಅಫ್ಘಾನಿಸ್ತಾನಕ್ಕೆ ಎರಡು ಓವರ್‌ಗಳಿಗೆ 21 ರನ್‌ ಅಗತ್ಯವಿದ್ದಾಗ ಜಸ್ಪ್ರೀತ್‌ ಬುಮ್ರಾ ಅವರು ಆರು ಎಸೆತಗಳಲ್ಲಿ ಕೇವಲ ಐದು ರನ್‌ಗಳಿಗೆ ಆಡಿಸಿಕೊಂಡರು. ನಂತರ ಕೊನೆಯ ಓವರ್‌ ಮಾಡಿದ ಮೊಹಮ್ಮದ್‌ ಶಮಿ ಹ್ಯಾಟ್ರಿಕ್‌ ವಿಕೆಟ್‌ ಕಿತ್ತು ಭಾರತಕ್ಕೆ 11 ರನ್‌ಗಳ ಜಯ ತಂದುಕೊಟ್ಟರು. ಅಲ್ಲದೇ ವಿಶ್ವಕಪ್‌ ಇತಿಹಾಸದಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಭಾರತದ ಎರಡನೇ ಬೌಲರ್‌ ಎನಿಸಿಕೊಂಡರು.
ಇಂದಿನ ಪಂದ್ಯದಲ್ಲಿ ಭಾರತ ಗೆದ್ದರೆ ಸೆಮಿಫೈನಲ್‌ ಟಿಕೆಟ್‌ಗೆ ಇನ್ನಷ್ಟು ಸುಲಭವಾಗಲಿದೆ. ಒಂದು ವೇಳೆ ವೆಸ್ಟ್‌ ಇಂಡೀಸ್‌ ವಿರುದ್ಧ ಸೋಲು ಅನುಭವಿಸಿದರೆ, ಮೂರು ಪಂದ್ಯಗಳಲ್ಲಿ ಸೋತು ತೀವ್ರ ಒತ್ತಡದಲ್ಲಿರುವ ಇಂಗ್ಲೆಂಡ್‌ ತಂಡದ ವಿರುದ್ಧ ಆಡಬೇಕಿದೆ.
ಅಫ್ಘಾನಿಸ್ತಾನ ವಿರುದ್ಧದ ಪಂದ್ಯವನ್ನು ಬಿಟ್ಟರೆ ಗೆಲುವು ಸಾಧಿಸಿರುವ ಇನ್ನುಳಿದ ಪಂದ್ಯಗಳಲ್ಲಿ ಭಾರತ ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಮೂರೂ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ತೋರಿದೆ. ರೋಹಿತ್‌ ಶರ್ಮಾ ಕಳೆದ ಪಂದ್ಯದಲ್ಲಿ ನಿರೀಕ್ಷೆ ಮೂಡಿಸದಿದ್ದರೂ ನಾಳಿನ ಪಂದ್ಯದಲ್ಲಿ ಪ್ರಬಲ ಬ್ಯಾಟ್ಸ್‌ಮನ್‌ ಆಗಿ ಕಣಕ್ಕೆ ಇಳಿಯುವುದರಲ್ಲಿ ಅನುಮಾನ ಬೇಡ.
ನಾಯಕ ವಿರಾಟ್‌ ಕೊಹ್ಲಿ ಅವರು ಸ್ಥಿರ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ವಿಜಯ್‌ ಶಂಕರ್‌ ಇನ್ನೂ ಹೇಳಿಕೊಳ್ಳುವ ಪ್ರದರ್ಶನ ತೋರಿಲ್ಲ. ಹಾಗಾಗಿ, ಈ ಕ್ರಮಾಂಕಕ್ಕೆ ಯುವ ಬ್ಯಾಟ್ಸ್‌ಮನ್‌ ರಿಷಬ್‌ ಪಂತ್‌ಗೆ ಮಣೆ ಹಾಕಿದರೂ ಅಚ್ಚರಿಯಿಲ್ಲ.
ಬೌಲಿಂಗ್‌ ವಿಭಾಗ ಅತ್ಯುತ್ತಮ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದೆ. ಸಾಧಾರಣ ಮೊತ್ತವಿದ್ದರೂ ಎದುರಾಳಿ ತಂಡವನ್ನು ನಿಯಂತ್ರಿಸುವ ಸಾಮಾರ್ಥ್ಯವಿದೆ ಎಂದು ಭಾರತದ ಬೌಲಿಂಗ್‌ ಪಡೆ ಮತ್ತೊಮ್ಮೆ ಅಫ್ಘಾನಿಸ್ತಾನದ ವಿರುದ್ಧ ನಿರೂಪಿಸಿದೆ. ಇದು ನಾಯಕ ವಿರಾಟ್‌ ಕೊಹ್ಲಿ ಸಂತಸಕ್ಕೆ ಕಾರಣವಾಗಿದೆ. ಸ್ನಾಯು ಸೆಳೆತದಿಂದ ಚೇತರಿಸಿಕೊಂಡಿರುವ ಭುವನೇಶ್ವರ್‌ ಕುಮಾರ್‌ ಮಂಗಳವಾರ ನೆಟ್ಸ್‌ನಲ್ಲಿ 30 ರಿಂದ 35 ನಿಮಷ ಬೌಲಿಂಗ್‌ ಅಭ್ಯಾಸ ನಡೆಸಿದ್ದರು. ಆದ್ದರಿಂದ ಗಾಯದ ಬಿಸಿ ಟೀಂ ಇಂಡಿಯಾಗೆ ಕೊಂಚ ಕಡಿಮೆಯಾಗಿದೆ. ಅವರು ಇಂದಿನ ಪಂದ್ಯದಲ್ಲಿ ಆಡುವ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ.
ಇನ್ನು ಸ್ಪಿನ್‌ ವಿಭಾಗದಲ್ಲಿ ಕುಲ್ದೀಪ್‌ ಯಾದವ್‌ ಹಾಗೂ ಯಜುವೇಂದ್ರ ಚಾಹಲ್‌ ಪ್ರಮುಖ ಶಕ್ತಿಗಳಾಗಿದ್ದಾರೆ. ಯಾವುದೇ ಕ್ಲಿಷ್ಟ ಸನ್ನಿವೇಶಗಳಿದ್ದರೂ ಅದನ್ನು ಮೆಟ್ಟಿ ನಿಲ್ಲುವ ಎಲ್ಲ ಸಾಮಾರ್ಥ್ಯ ಅವರಲ್ಲಿದೆ.
ಮತ್ತೊಂದೆಡೆ ಕಳೆದ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ವೆಸ್ಟ್‌ ಇಂಡೀಸ್‌ ಕೇವಲ ಐದು ರನ್‌ಗಳಿಂದ ಸೋಲಿನ ಆಘಾತಕ್ಕೆ ಒಳಗಾಗಿತ್ತು. ಈ ಪಂದ್ಯದಲ್ಲಿ ಕಿವೀಸ್‌ ನೀಡಿದ್ದ 292 ರನ್‌ ಗುರಿ ಬೆನ್ನತ್ತಿದ್ದ ವೆಸ್ಟ್‌ ಇಂಡೀಸ್‌ ಪರ ಏಕಾಂಗಿ ಹೋರಾಟ ನಡೆಸಿದ್ದ ಕಾರ್ಲೋಸ್‌ ಬ್ರಾಥ್‌ವೇಟ್‌ ವೃತ್ತಿ ಜೀವನದ ಮೊದಲ ಶತಕದೊಂದಿಗೆ ಇನ್ನೇನು ಗೆಲುವು ತಂದು ಕೊಡಲಿದ್ದಾರೆಂದೇ ಎಲ್ಲರೂ ಭಾವಿಸಿದ್ದರು. ಆದರೆ, ನಿಶ್ಯಾಮ್‌ ಎಸೆತದಲ್ಲಿ ಬೌಲ್ಟ್‌ಗೆ ಕ್ಯಾಚ್‌ ನೀಡಿದ್ದರು.
ಇದೀಗ ವಿಂಡೀಸ್‌ ಖಾತೆಯಲ್ಲಿ ಆರು ಪಂದ್ಯಗಳಿಂದ ಮೂರು ಅಂಕಗಳಿವೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಗೆದ್ದರೂ ಜೇಸನ್‌ ಹೋಲ್ಡರ್‌ ಬಳಗಕ್ಕೆ ಸೆಮಿಫೈನಲ್‌ ಹಾದಿ ಅನುಮಾನವಾಗಿದೆ. ಆ್ಯಂಡ್ರೆ ರಸೆಲ್‌ ಮೊಣಕಾಲು ಗಾಯದಿಂದಾಗಿ ಟೂರ್ನಿಯಿಂದ ಹೊರ ನಡೆದಿದ್ದಾರೆ.
ತಂಡಗಳು
ಭಾರತ:
ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ(ಉಪನಾಯಕ), ಮಹೇಂದ್ರ ಸಿಂಗ್‌ ಧೋನಿ (ವಿ.ಕೀ), ರಿಷಬ್‌ ಪಂತ್‌, ಕೆ.ಎಲ್ ರಾಹುಲ್‌, ದಿನೇಶ್‌ ಕಾರ್ತಿಕ್, ಭುವನೇಶ್ವರ್‌ ಕುಮಾರ್‌, ಜಸ್ಪ್ರಿತ್‌ ಬುಮ್ರಾ, ಮೊಹಮ್ಮದ್‌ ಶಮಿ, ಯಜುವೇಂದ್ರ ಚಾಹಲ್‌, ಕುಲ್‍ದೀಪ್‌ ಯಾದವ್‌, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ವಿಜಯ್‌ ಶಂಕರ್, ರವೀಂದ್ರಾ ಜಡೇಜಾ.

ವೆಸ್ಟ್‌ ಇಂಡೀಸ್‌:

ಜೇಸನ್‌ ಹೋಲ್ಡರ್‌(ನಾಯಕ), ಫ್ಯಾಬಿಯನ್‌ ಅಲ್ಲೆನ್‌, ಡೆರೆನ್‌ ಬ್ರಾವೊ, ಶನ್ನೋನ್‌ ಗ್ಯಾಬ್ರಿಯಲ್‌, ಶಿಮ್ರಾನ್‌ ಹೆಟ್ಮೇರ್‌, ಎವಿನ್‌ ಲೆವಿಸ್‌, ನಿಕೋಲಸ್‌ ಪೂರನ್‌, ಸುನೀಲ್‌ ಅಂಬ್ರೀಸ್‌‌, ಕಾರ್ಲೋಸ್‌ ಬ್ರಾಥ್‌ವೇಟ್‌, ಶೆಲ್ಡನ್‌ ಕಾಟ್ರೆಲ್‌, ಕ್ರಿಸ್‌ ಗೇಲ್‌, ಶಾಯ್‌ ಹೋಪ್‌, ಆ್ಯಶ್ಲೆ ನರ್ಸ್‌, ಕೇಮರ್‌ ರೋಚ್, ಓಶೇನ್‌ ಥಾಮಸ್‌
ಸಮಯ: ಇಂದು ಮಧ್ಯಾಹ್ನ 03:00 (ಭಾರತೀಯ ಕಾಲಮಾನ)
ಸ್ಥಳ: ಓಲ್ಡ್‌ ಟ್ರಾಫರ್ಡ್‌, ಮ್ಯಾಂಚೆಸ್ಟರ್‌

loading...